
ಬಾಗಲಕೋಟೆ, 06 ಮೇ (ಹಿ.ಸ.) :
ಆಂಕರ್ : ಗದಗ ಜಿಲ್ಲೆಯ ಕೊತಬಾಲ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮುಕ್ತುಂಸಾಬ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ, ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬಾಗಲಕೋಟೆ ನಗರದಲ್ಲಿಪ್ತಿ ಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಮತ್ತು ಸದಸ್ಯರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿಜಾಂಶ ಹೊರ ತೆಗೆದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮುಕ್ತುಂಸಾಬ ಅವರ ಆತ್ಮಹತ್ಯೆಗೆ ಕಾರಣವಾದ ಅಂಶಗಳನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು ಹಾಗೂ ಸಂಬಂಧಿಸಿದವರ ಮೇಲಿನ ಒತ್ತಡ ಅಥವಾ ಬೇರೆ ಯಾವುದೇ ಕಾರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಮನವಿ ಮಾಡಿದರು.
ಬಳಿಕ ಪ್ರತಿಭಟನಾಕಾರರು ವಿಜಯಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಪ್ರಕರಣವನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆಗೆ ಒಪ್ಪಿಸುವಂತೆ ಹಾಗೂ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು. ಸರ್ಕಾರ ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಂಡು ಪಾರದರ್ಶಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ರಾಜು ವಾರದ, ಜಿಲ್ಲಾಧ್ಯಕ್ಷರಾದ ಸಿದ್ದಾರ್ಥ ಗೋಠೆ, ರೋಹಿತ ಇಟಕನ್ನವರ, ಸುರೇಶ ಜಾಧವ, ಕವಿತಾ ಬಾರಕೋಲ, ಶಿವಾನಂದ ನರಸನ್ನವರ, ಸುರೇಶ ನಾಯ್ಕ, ರಂಜಿತಾ ಹತ್ತಿ, ಕವಿತಾ ಮಂಟೂರ, ಮಂಜುನಾಥ ಕರಿಗೌಡರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆ ಶಾಂತಿಯುತವಾಗಿ ನಡೆಯಿತು. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ, ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂಬ ಒತ್ತಾಯವು ಪ್ರತಿಭಟನೆಯಲ್ಲಿ ಪ್ರತಿಧ್ವನಿಸಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande