
ಕೋಲಾರ, ಮೇ ೦೬ (ಹಿ.ಸ) :
ಆ್ಯಂಕರ್ : ಕೋಲಾರ ತಾಲ್ಲೂಕಿನ ಎಫ್೧ ಮತ್ತು ಎಫ್೭ ವಿದ್ಯುತ್ ಲೈನ್ ಮಾರ್ಗದಲ್ಲಿ ಬೆಸ್ಕಾಂ ಅಧಿಕಾರಿಗಳ ತೀವ್ರ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ರೈತರು ಹಾಗೂ ಸಾರ್ವಜನಿಕರು ಕತ್ತಲಲ್ಲಿ ದಿನದೂಡುವಂತಾಗಿದೆ. ಕಳೆದ ಒಂದು ವಾರದಿಂದ ಈ ಭಾಗದ ಗ್ರಾಮಗಳಲ್ಲಿ ಕೇವಲ ೩ ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದ್ದು, ಉಳಿದ ಸಮಯ ಕಡಿತಗೊಳಿಸಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ರಾತ್ರಿ ೭ ಗಂಟೆಯ ನಂತರ ಅಘೋಷಿತ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ನಮ್ಮ ಕೋಲಾರ ರೈತ ಸಂಘದ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್ಗೌಡ ಆರೋಪಿಸಿದ್ದಾರೆ.
ನಿಯಮದ ಪ್ರಕಾರ ಕೃಷಿ ಪಂಪ್ಸೆಟ್ಗಳಿಗೆ ದಿನಕ್ಕೆ ಕಡ್ಡಾಯವಾಗಿ ೮ ಗಂಟೆಗಳ ಕಾಲ ೩-ಫೇಸ್ ವಿದ್ಯುತ್ ನೀಡಬೇಕೆಂಬ ಆದೇಶವಿದ್ದರೂ, ಬೆಸ್ಕಾಂ ಅಧಿಕಾರಿಗಳು ಇದನ್ನು ಗಾಳಿಗೆ ತೂರಿದ್ದಾರೆ. ರಾತ್ರಿ ವೇಳೆ ವಿದ್ಯುತ್ ಇಲ್ಲದ ಕಾರಣ ಕತ್ತಲ ಲಾಭ ಪಡೆಯುತ್ತಿರುವ ಕಳ್ಳರು, ರೈತರ ಬೆಲೆಬಾಳುವ ಪಂಪ್ಸೆಟ್ಗಳು ಹಾಗೂ ಕೇಬಲ್ಗಳನ್ನು ಕಳವು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಹಳ್ಳಿಗಳ ಮನೆಗಳಲ್ಲಿಯೂ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಹವಾಮಾನ ವೈಪರಿತ್ಯದಿಂದಾಗಿ ವಿಪರೀತ ಸೆಕೆ ಇರುವುದರಿಂದ, ವಿದ್ಯುತ್ ಇಲ್ಲದೆ ಮನೆಯಲ್ಲಿ ವೃದ್ಧರು, ಮಕ್ಕಳು ನಿದ್ರಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಪ್ರತಿ ೫-೧೦ ನಿಮಿಷಕ್ಕೊಮ್ಮೆ ವಿದ್ಯುತ್ ಕಡಿತ ಮಾಡುವುದರಿಂದ ವಿದ್ಯುತ್ ಉಪಕರಣಗಳು ಸಹ ಕೆಟ್ಟು ಹೋಗುತ್ತಿವೆ. ಸಾರ್ವಜನಿಕರು ದೂರು ನೀಡಲು ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿರುತ್ತದೆ. ಇದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ.
ಕೂಡಲೇ ಎಫ್೧ ಮತ್ತು ಎಫ್೭ ಲೈನ್ ವ್ಯಾಪ್ತಿಯ ಗ್ರಾಮಗಳಿಗೆ ೨೪ ಗಂಟೆ ಸಮರ್ಪಕ ವಿದ್ಯುತ್ ನೀಡಬೇಕು ಹಾಗೂ ರೈತರಿಗೆ ೮ ಗಂಟೆಗಳ ಕಾಲ ೩-ಫೇಸ್ ವಿದ್ಯುತ್ ಖಾತರಿಪಡಿಸಬೇಕು. ಒಂದು ವೇಳೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಬೆಸ್ಕಾಂ ಕಚೇರಿ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕೋಲಾರ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷರಾದ ಕೋಟಿಗಾನಹಳ್ಳಿ ಗಣೇಶ್ಗೌಡ ಅವರು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್