ಮಸೂತಿ ಗ್ರಾಮದಲ್ಲಿ ಭೂಸ್ವಾಧೀನ ಪರಿಹಾರ ವೇಗಕ್ಕೆ ಸಭೆ ; ರಾಜಿ ಸಂಧಾನದ ಮೂಲಕ ತ್ವರಿತ ಪರಿಹಾರಕ್ಕೆ ಒತ್ತು
ವಿಜಯಪುರ, 06 ಮೇ (ಹಿ.ಸ.) : ಆಂಕರ್ : ಇಂದು ವಿಜಯಪುರ ಜಿಲ್ಲೆಯ ಮಸೂತಿ ಗ್ರಾಮದಲ್ಲಿ ಭೂಸ್ವಾಧೀನಕ್ಕೆ ಒಳಪಟ್ಟ ಜಮೀನುಗಳಿಗೆ ಸಂಬಂಧಿಸಿದ ಹೆಚ್ಚುವರಿ ಪರಿಹಾರ ಧನ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವ ಉದ್ದೇಶದಿಂದ ಪ್ರಮುಖ ಸಭೆ ಜರುಗಿತು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ
ಸಭೆ


ವಿಜಯಪುರ, 06 ಮೇ (ಹಿ.ಸ.) :

ಆಂಕರ್ : ಇಂದು ವಿಜಯಪುರ ಜಿಲ್ಲೆಯ ಮಸೂತಿ ಗ್ರಾಮದಲ್ಲಿ ಭೂಸ್ವಾಧೀನಕ್ಕೆ ಒಳಪಟ್ಟ ಜಮೀನುಗಳಿಗೆ ಸಂಬಂಧಿಸಿದ ಹೆಚ್ಚುವರಿ ಪರಿಹಾರ ಧನ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವ ಉದ್ದೇಶದಿಂದ ಪ್ರಮುಖ ಸಭೆ ಜರುಗಿತು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನೇತೃತ್ವದಲ್ಲಿ ನಡೆಯುತ್ತಿರುವ ರಾಜಿ ಸಂಧಾನ (ಲೋಕ ಅದಾಲತ್) ಪ್ರಕ್ರಿಯೆಯಡಿ, ವಿಜಯಪುರ ಜಿಲ್ಲಾ ನ್ಯಾಯಾಲಯದ 1ನೇ ಹಾಗೂ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಮಾರ್ಗದರ್ಶನದಲ್ಲಿ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಮಾನ್ಯ ಮಹಾ ವ್ಯವಸ್ಥಾಪಕರಾದ ಶ್ರೀ ಗಜಾನನ (IAS), ವಿಶೇಷ ಜಿಲ್ಲಾಧಿಕಾರಿಗಳು (ಜಮಖಂಡಿ), ವಿಶೇಷ ಭೂಸ್ವಾಧೀನಾಧಿಕಾರಿಗಳು (ಆಲಮಟ್ಟಿ), ಹಾಗು ಬೇಡಿಕೆ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಉಪಸ್ಥಿತರಿದ್ದು, ರೈತರಿಗೆ ಸರ್ಕಾರ ನಿಗದಿಪಡಿಸಿದ ದರವನ್ನು ರಾಜಿ ಸಂಧಾನದ ಮೂಲಕ ತ್ವರಿತವಾಗಿ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಭೂಸ್ವಾಧೀನಕ್ಕೆ ಒಳಗಾದ ರೈತರೊಂದಿಗೆ ಸಮಾಲೋಚನೆ ನಡೆಸಿ, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ವಿಳಂಬವಿಲ್ಲದೆ ಇತ್ಯರ್ಥಗೊಳಿಸಲು ಸಹಕಾರ ನೀಡುವಂತೆ ಮನವಿ ಮಾಡಲಾಯಿತು. ರಾಜಿ ಸಂಧಾನದ ಮೂಲಕ ಪರಿಹಾರ ಪಡೆದುಕೊಳ್ಳುವುದರಿಂದ ಸಮಯ ಹಾಗೂ ವೆಚ್ಚ ಉಳಿತಾಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ರೈತರು ತಮ್ಮ ಸಮಸ್ಯೆಗಳನ್ನು ವಿವರಿಸಿ, ನ್ಯಾಯಯುತ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಕಾನೂನುಬದ್ಧ ಹಾಗೂ ಪಾರದರ್ಶಕ ರೀತಿಯಲ್ಲಿ ಪರಿಹಾರ ಒದಗಿಸಲು ಭರವಸೆ ನೀಡಿದರು.

ಈ ಸಭೆ ಭೂಸ್ವಾಧೀನಕ್ಕೆ ಒಳಗಾದ ರೈತರಿಗೆ ಪರಿಹಾರ ಪ್ರಕ್ರಿಯೆಯನ್ನು ವೇಗಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande