
ಬಾಗಲಕೋಟೆ, 06 ಮೇ (ಹಿ.ಸ.) :
ಆಂಕರ್ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಬಿಂಜವಾಡಗಿ ಗ್ರಾಮದಲ್ಲಿ ಗ್ರಾಮದೇವತೆಯ ನೂತನ ಮೂರ್ತಿಯ ಮೆರವಣಿಗೆ ಸಂಭ್ರಮಭರಿತವಾಗಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಭಕ್ತಿಭಾವದಿಂದ ಭಾಗವಹಿಸಿ ದೇವಿಯ ಕೃಪೆಗೆ ಪ್ರಾರ್ಥಿಸಿದರು.
ಮೆರವಣಿಗೆಯಲ್ಲಿ ಮಹಿಳೆಯರು ಭಂಡಾರ ಹಚ್ಚಿಕೊಂಡು ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿ ಗಮನಸೆಳೆದರು. ಡೊಳ್ಳು-ತಾಳಗಳ ನಾದದ ನಡುವೆ ಗ್ರಾಮದೆಲ್ಲೆಡೆ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಯುವಕರು, ಹಿರಿಯರು ಹಾಗೂ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಮೆರವಣಿಗೆಯನ್ನು ಇನ್ನಷ್ಟು ವೈಭವಗೊಳಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ ದೇವಸ್ಥಾನಕ್ಕೆ ತಲುಪಿದ ಬಳಿಕ ಪೂಜಾ ವಿಧಿವಿಧಾನಗಳು ನೆರವೇರಿಸಲಾಯಿತು. ದೇವಿಯ ನೂತನ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಭಕ್ತರು ಹೂವು, ಹಣ್ಣುಗಳನ್ನು ಅರ್ಪಿಸಿ ಕೋರಿಕೆ ಸಲ್ಲಿಸಿದರು.
ಕಾರ್ಯಕ್ರಮದ ವೇಳೆ ಗ್ರಾಮಸ್ಥರು ಸಾಂಪ್ರದಾಯಿಕ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಹಬ್ಬವನ್ನು ಆಚರಿಸಿದರು. ಈ ಮೆರವಣಿಗೆ ಗ್ರಾಮದಲ್ಲಿ ಏಕತೆ ಮತ್ತು ಭಕ್ತಿಯ ಸಂಕೇತವಾಗಿ ಮೂಡಿ ಬಂದಿತು.
ಗ್ರಾಮದ ಮುಖಂಡರು, ಮಹಿಳಾ ಸಂಘಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande