
ಬಾಗಲಕೋಟೆ, 06 ಮೇ (ಹಿ.ಸ.) :
ಆಂಕರ್ : ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಪ್ರಸಕ್ತ ಮುಂಗಾರು ಹಂಗಾಮಿನಿಂದ ರಸಗೊಬ್ಬರ (ಯೂರಿಯಾ) ಖರೀದಿಸಲು ರೈತರು ಕಡ್ಡಾಯವಾಗಿ ಫಾರ್ಮರ್ ಐಡಿ (FID) ಹೊಂದಿರಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಅಶೋಕ ತಿರಕಣ್ಣವರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಾರದರ್ಶಕತೆ ಹಾಗೂ ಸಮರ್ಪಕ ವಿತರಣೆಯನ್ನು ಖಚಿತಪಡಿಸಲು ಕೆ-ಕಿಸಾನ್ ತಂತ್ರಾಂಶದ ಮೂಲಕ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ರಸಗೊಬ್ಬರ ವಿತರಿಸಲಾಗುತ್ತದೆ ಎಂದು ವಿವರಿಸಿದರು. ರೈತರು ಪಡೆದ ಗೊಬ್ಬರದ ವಿವರಗಳನ್ನು ಕೆ-ಕಿಸಾನ್ ಸಾಫ್ಟ್ವೇರ್ನಲ್ಲಿ ದಾಖಲಿಸಲಾಗುವುದರಿಂದ, ಅಗತ್ಯಕ್ಕೆ ತಕ್ಕಂತೆ ಗೊಬ್ಬರ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಫಾರ್ಮರ್ ಐಡಿ ಹೊಂದಿರದ ರೈತರು ಬ್ಯಾಂಕ್ ಪಾಸ್ಬುಕ್, ಆಧಾರ್ ಕಾರ್ಡ್ ಹಾಗೂ ಪಹಣಿ ದಾಖಲಾತಿಗಳನ್ನು ತೆಗೆದುಕೊಂಡು ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ತಕ್ಷಣವೇ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಜೊತೆಗೆ, ಫಾರ್ಮರ್ ಐಡಿ ಹೊಂದಿರುವವರು ತಮ್ಮ ಸರ್ವೇ ಸಂಖ್ಯೆಯನ್ನು ಜೋಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ರಸಗೊಬ್ಬರ ವ್ಯಾಪಾರಸ್ಥರು ಕಡ್ಡಾಯವಾಗಿ ಕೆ-ಕಿಸಾನ್ ತಂತ್ರಾಂಶದಲ್ಲಿ ರೈತರ ಫಾರ್ಮರ್ ಐಡಿ ನಮೂದಿಸಿ ಮಾತ್ರ ಮಾರಾಟ ನಡೆಸಬೇಕು ಎಂದು ಸೂಚಿಸಲಾಗಿದೆ. ಈ ಕುರಿತು ಇಲಾಖೆ ವತಿಯಿಂದ ವ್ಯಾಪಾರಸ್ಥರಿಗೆ ತರಬೇತಿ ಹಾಗೂ ಮಾಹಿತಿ ನೀಡಲಾಗಿದೆ. ಅಲ್ಲದೆ, ಎಲ್ಲಾ ಒ-ಫಾರ್ಮ್ಗಳನ್ನು ನವೀಕರಿಸಿಕೊಳ್ಳುವುದು ಕಡ್ಡಾಯವಾಗಿದೆ.
ಯಾವುದೇ ಮಾರಾಟಗಾರರು ಒ-ಫಾರ್ಮ್ ನೋಂದಣಿ ಇಲ್ಲದೆ ಗೊಬ್ಬರ ಮಾರಾಟ ಮಾಡಿದರೆ ಅಥವಾ ಕೃಷಿಯೇತರ ಉದ್ದೇಶಕ್ಕೆ ಗೊಬ್ಬರ ವಿತರಿಸಿದರೆ ಅವರ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.
ರೈತರು ಹಾಗೂ ವ್ಯಾಪಾರಸ್ಥರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande