
ವಿಜಯಪುರ, 06 ಮೇ (ಹಿ.ಸ.) :
ಆಂಕರ್ : “ಒಂದು ಹೊತ್ತು ಊಟ ಕಡಿಮೆ ಮಾಡಿದರೂ ಚಿಂತೆ ಇಲ್ಲ, ಆದರೆ ಮಕ್ಕಳಿಗೆ ಶಿಕ್ಷಣ ನೀಡುವುದು ಅತ್ಯಂತ ಮುಖ್ಯ” ಎಂದು ಮುಖ್ಯಮಂತ್ರಿಗಳ ಮಾಜಿ ಸಂಸದೀಯ ಕಾರ್ಯದರ್ಶಿ ಡಾ. ಮಕ್ಬೂಲ್ ಬಾಗವಾನ ಹೇಳಿದರು.
ವಿಜಯಪುರ ನಗರದಲ್ಲಿ ಬಾಗವಾನ ಅಭಿವೃದ್ಧಿ ಜಮಾತ್ ಹಾಗೂ ಬಾಗವಾನ ಶೈಕ್ಷಣಿಕ, ಸಾಮಾಜಿಕ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಡತನದ ನಡುವೆಯೂ ಮಕ್ಕಳಿಗೆ ಶಿಕ್ಷಣ ನೀಡುವುದು ಭವಿಷ್ಯದ ಅಭಿವೃದ್ಧಿಗೆ ಪ್ರಮುಖ ಆಧಾರವಾಗುತ್ತದೆ ಎಂದು ತಿಳಿಸಿದರು.
ಇಂದಿನ ಕಾಲದಲ್ಲಿ ಉಚಿತ ಶಿಕ್ಷಣ ಸೇರಿದಂತೆ ಅನೇಕ ಅವಕಾಶಗಳಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.
“ಇಂದಿನ ತಾಂತ್ರಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವೇ ಶಕ್ತಿಯುತ ಅಸ್ತ್ರವಾಗಿದೆ. ಜೀವನದಲ್ಲಿ ಯಶಸ್ಸು ಸಾಧಿಸಲು ಶಿಕ್ಷಣ ಅತ್ಯಗತ್ಯ. ಇದು ನಮ್ಮ ಬದುಕಿನ ಪ್ರಗತಿಯ ಸೂತ್ರವಾಗಬೇಕು” ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಡಾ. ಯೂಸೂಫ್ ಚೌಧರಿ ಮಾತನಾಡಿ, ಬಾಗವಾನ ಸಮಾಜದ ಮಕ್ಕಳು ಶಿಕ್ಷಣದತ್ತ ಹೆಚ್ಚಿನ ಒಲವು ತೋರಬೇಕು ಎಂದು ಸಲಹೆ ನೀಡಿದರು. “ಪಾರಂಪರಿಕ ಉದ್ಯಮಗಳನ್ನು ನಿರ್ವಹಿಸುವ ಜೊತೆಗೆ ಉನ್ನತ ಶಿಕ್ಷಣ ಪಡೆದು ವೈದ್ಯರು, ಇಂಜಿನಿಯರ್ಗಳು, ನ್ಯಾಯವಾದಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಇಂತಹ ಹುದ್ದೆಗಳನ್ನು ಅಲಂಕರಿಸಲು ಶಿಕ್ಷಣವೇ ಪ್ರಮುಖ ಸಾಧನ” ಎಂದು ಹೇಳಿದರು.ಮೊಬೈಲ್ ಬಳಕೆಯ ಕುರಿತು ಎಚ್ಚರಿಕೆ ನೀಡಿದ ಅವರು, “ಮಕ್ಕಳಿಗೆ ಅತಿಯಾಗಿ ಮೊಬೈಲ್ ನೀಡಬೇಡಿ. ಸಂಸ್ಕಾರಗಳ ಬೋಧನೆಗೆ ಹೆಚ್ಚಿನ ಒತ್ತು ನೀಡಬೇಕು” ಎಂದು ತಿಳಿಸಿದರು.
ಟ್ರಸ್ಟ್ನ ಉದ್ದೇಶಗಳನ್ನು ವಿವರಿಸಿದ ಪಾಲಿಕೆ ಮಾಜಿ ಸದಸ್ಯ ಮೈನುದ್ದೀನ್ ಬೀಳಗಿ ಮಾತನಾಡಿ, ಸಮಾಜಮುಖಿ ಕಾರ್ಯಕ್ರಮಗಳ ಜೊತೆಗೆ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಸಹಾಯ ಮಾಡಲಾಗುತ್ತಿದೆ ಎಂದು ಹೇಳಿದರು. ಸಮಾಜದ ಉದ್ಯಮಿಗಳು ಮತ್ತು ಮುಖಂಡರು ಈ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಾಗವಾನ ಜಮಾತ್ ಅಧ್ಯಕ್ಷ ಅಲ್ ಹಾಜ್ ಹನೀಫ್ ಮನಗೂಳಿ, ಕಪಿಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೆಹಬೂಬ್ ಸಾಬ್ ಬಾಗವಾನ, ಡಾ. ಸಮೀರ್ ಚೌಧರಿ, ಅಲ್ಲಾಭಕ್ಷ ಇಲಕಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ತೋರಿದ ನೂರಾರು ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗ್ಗೆ ಮತ್ತಷ್ಟು ಪ್ರೇರಣೆ ಮೂಡಿಸುವಂತಾಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande