
ವಿಜಯಪುರ, 06 ಮೇ (ಹಿ.ಸ.) :
ಆಂಕರ್ : ಹವಾಮಾನ ಬದಲಾವಣೆ ತಡೆಗಟ್ಟುವಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳಾದ ಸಿ.ಬಿ. ಕುಂಬಾರ ಹೇಳಿದರು.
ವಿಜಯಪುರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆ (KSAPCC) ಕುರಿತ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಪಿಐಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾ ಪಂಚಾಯತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಕಡಿಮೆ ಮಾಡಲು ವಿವಿಧ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಂಪ್ರಿ ಸಂಸ್ಥೆಯ ಸಂಶೋಧನಾ ವಿಜ್ಞಾನಿಗಳಾದ ಡಾ. ಪವಿತ್ರಾ ಪಿ. ನಾಯಕ್ ಅವರು ಮಾತನಾಡಿ, ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆ ಕುರಿತು ಸವಿಸ್ತಾರವಾಗಿ ವಿವರಿಸಿದರು. ಹವಾಮಾನ ಕಾರ್ಯನೀತಿ, ಕಾರ್ಯತಂತ್ರಗಳು, ವಿವಿಧ ಇಲಾಖೆಗಳ ಪಾತ್ರ ಹಾಗೂ ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕಗಳ ಪರಿಣಾಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಅರಣ್ಯ ಇಲಾಖೆಯ ಶಿವರುದ್ರಪ್ಪ ಕಬಾಡಗಿ ಅವರು ವಿಜಯಪುರ ಜಿಲ್ಲೆಯಲ್ಲಿ ಕೈಗೊಳ್ಳಲಾದ ಪರಿಸರ ಸಂರಕ್ಷಣಾ ಕ್ರಮಗಳನ್ನು ವಿವರಿಸಿದರು. ಜಲ ಸಂಪನ್ಮೂಲ ತಜ್ಞರಾದ ಡಾ. ಶಶಿಕುಮಾರ್ ಎನ್. ಅವರು ಜಲ ಸಂಪನ್ಮೂಲ ವಲಯಕ್ಕೆ ಸಂಬಂಧಿಸಿದ ಹವಾಮಾನ ಕ್ರಿಯಾ ಯೋಜನೆ ಕುರಿತು ಮಾಹಿತಿ ನೀಡಿದರು.
ತರಬೇತಿ ಕಾರ್ಯಕ್ರಮದಲ್ಲಿ ಎನ್.ಆರ್.ಡಿ.ಎಂ.ಎಸ್ ಅಧಿಕಾರಿಗಳಾದ ಚನ್ನಮ್ಮ ಕರೆಪ್ಪ, ಎಂಪ್ರಿ ಸಂಸ್ಥೆಯ ತರಬೇತಿ ಅಸೋಸಿಯೇಟ್ ಕುಮಾರಿ ರುಚಿತಾ ಶ್ರೀ, ತರಬೇತಿ ಸಹಾಯಕ ರಾಘವೇಂದ್ರ ಎನ್. ಸೇರಿದಂತೆ ವಿವಿಧ ಇಲಾಖೆಗಳ ಸುಮಾರು 55 ಮಂದಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮವು ಹವಾಮಾನ ಬದಲಾವಣೆ ಕುರಿತ ಜಾಗೃತಿ ಮೂಡಿಸುವುದರೊಂದಿಗೆ, ಪರಿಣಾಮಕಾರಿ ಕ್ರಿಯಾ ಯೋಜನೆ ರೂಪಿಸಲು ಸಹಕಾರಿಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande