
ವಿಜಯಪುರ, 06 ಮೇ (ಹಿ.ಸ.) :
ಆಂಕರ್ : ವಾಣಿಜ್ಯ ಗ್ಯಾಸ್ ಸಿಲಿಂಡರ್ ಹಾಗೂ ಆಟೋ ಎಲ್ಪಿಜಿ ದರಗಳನ್ನು ನಿರಂತರವಾಗಿ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ. ಪಕ್ಷದ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಪಂಚ್ ರಾಜ್ಯಗಳ ಚುನಾವಣೆ ಮುಗಿದ ಮರುದಿನವೇ ಕೇಂದ್ರ ಸರ್ಕಾರ ಬಡ ಜನರ ಮೇಲೆ ಚಾಟಿ ಏಟು ಬೀಸಿದಂತಾಗಿದೆ. ಈ ಅನ್ಯಾಯಕರ ದರ ಏರಿಕೆ ಸಾಮಾನ್ಯ ಜನರ ಬದುಕಿನ ಮೇಲೆ ಭಾರೀ ಹೊರೆ ಹಾಕಿದ್ದು, ಸಣ್ಣ ವ್ಯಾಪಾರಿಗಳು, ಹೋಟೆಲ್ ಉದ್ಯಮಿಗಳು ಹಾಗೂ ಆಟೋ ಚಾಲಕರನ್ನು ಸಂಕಷ್ಟದ ಅಂಚಿಗೆ ತಳ್ಳಿದೆ” ಎಂದು ಆರೋಪಿಸಿದರು.
ಇದಲ್ಲದೆ, ಈಗಾಗಲೇ ದುಬಾರಿ ಜೀವನ ನಡೆಸುತ್ತಿರುವ ಜನರಿಗೆ ಈ ದರ ಏರಿಕೆ ಮತ್ತಷ್ಟು ಹೊರೆ ತಂದಿದ್ದು, ದಿನನಿತ್ಯದ ಆದಾಯದಿಂದ ಜೀವನ ಸಾಗಿಸುವ ಆಟೋ ಚಾಲಕರಿಗೆ ಇದು ದೊಡ್ಡ ಹೊಡೆತವಾಗಿದೆ ಎಂದು ಹೇಳಿದರು. ಹೋಟೆಲ್ ಹಾಗೂ ಸಣ್ಣ ಉದ್ಯಮಗಳು ನಷ್ಟದ ದಾರಿಯಲ್ಲಿ ಸಾಗುತ್ತಿದ್ದು, ಉದ್ಯೋಗ ಕಳೆದುಕೊಳ್ಳುವ ಭೀತಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿ ವಿಜಯಪುರ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ದರ ಏರಿಕೆಯನ್ನು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಲಾಗಿದೆ.
ಪಕ್ಷವು ಮುಂದಿಟ್ಟಿರುವ ಮುಖ್ಯ ಬೇಡಿಕೆಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರವನ್ನು ಕಡಿಮೆ ಮಾಡುವುದು, ಆಟೋ ಎಲ್ಪಿಜಿ ದರ ಹಿಂಪಡೆಯುವುದು, ಸಣ್ಣ ವ್ಯಾಪಾರಿಗಳು ಮತ್ತು ಆಟೋ ಚಾಲಕರಿಗೆ ವಿಶೇಷ ಸಬ್ಸಿಡಿ ನೀಡುವುದು ಹಾಗೂ ಇಂಧನ ದರ ನಿಯಂತ್ರಣಕ್ಕೆ ಸ್ಪಷ್ಟ ನೀತಿ ಜಾರಿಗೊಳಿಸುವುದು ಸೇರಿವೆ.
ದರ ಏರಿಕೆಯ ವಿರುದ್ಧ ಜನರ ಆಕ್ರೋಶ ಹೆಚ್ಚುತ್ತಿದ್ದು, ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಪಕ್ಷದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande