‘ಮನ್ ಕಿ ಬಾತ್’ನಲ್ಲಿ ಕ್ರೀಡಾಪಟುಗಳ ಸಾಧನೆಗೆ ಪ್ರಧಾನಿ ಮೋದಿ ಮೆಚ್ಚುಗೆ
ನಾನಾ
ಮನ್ ಕಿ ಬಾತ್


ನವದೆಹಲಿ, 31 ಮೇ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ **‘ಮನ್ ಕಿ ಬಾತ್ 134ನೇ ಸಂಚಿಕೆಯಲ್ಲಿ ಭಾರತೀಯ ಅಥ್ಲೀಟ್ಗಳ ಸಾಧನೆಯನ್ನು ಶ್ಲಾಘಿಸಿ, ಇತ್ತೀಚೆಗೆ ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಹಿರಿಯ ಅಥ್ಲೆಟಿಕ್ಸ್ ಫೆಡರೇಷನ್ ಸ್ಪರ್ಧೆಯಲ್ಲಿ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ಹಲವು ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸಿರುವುದಾಗಿ ಹೇಳಿದರು.

ದೇಶದ ನಾನಾ ಭಾಗಗಳಿಂದ ಸುಮಾರು 800 ಅಥ್ಲೀಟ್ಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ನಾಲ್ಕು ವಿಭಿನ್ನ ಸ್ಪರ್ಧೆಗಳಲ್ಲಿ ರಾಷ್ಟ್ರೀಯ ದಾಖಲೆಗಳು ಮುರಿದಿರುವುದು ಭಾರತೀಯ ಅಥ್ಲೆಟಿಕ್ಸ್ನ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಹೇಳಿದರು.

100 ಮೀಟರ್ ಓಟದ ಸ್ಪರ್ಧೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿರುವುದನ್ನು ಉಲ್ಲೇಖಿಸಿದ ಅವರು, ಕೇವಲ ಎರಡು ದಿನಗಳ ಅವಧಿಯಲ್ಲಿ ಪುರುಷರ 100 ಮೀಟರ್ ಓಟದ ರಾಷ್ಟ್ರೀಯ ದಾಖಲೆ ಮೂರು ಬಾರಿ ಮುರಿಯಲ್ಪಟ್ಟಿರುವುದು ಗಮನಾರ್ಹ ಸಾಧನೆ ಎಂದು ಹೇಳಿದರು. ಈ ಸಾಧನೆಯ ಹಿಂದೆ ಗುರಿಂದರ್ವೀರ್ ಸಿಂಗ್ ಮತ್ತು ಅನಿಮೇಶ್ ಕುಜೂರ್ ಅವರ ಪರಿಶ್ರಮ ಹಾಗೂ ಸ್ಪರ್ಧಾತ್ಮಕ ಮನೋಭಾವ ಪ್ರಮುಖ ಪಾತ್ರ ವಹಿಸಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಇಬ್ಬರು ಅಥ್ಲೀಟ್ಗಳೊಂದಿಗೆ ನೇರವಾಗಿ ಸಂವಾದ ನಡೆಸಿದರು. “ಸಂಗೀತ ಕ್ಷೇತ್ರದಲ್ಲಿ ಜುಗಲ್ಬಂದಿ ಸಾಮಾನ್ಯವಾಗಿ ಕಾಣಸಿಗುತ್ತದೆ. ಆದರೆ ಈಗ ಕ್ರೀಡಾ ಕ್ಷೇತ್ರದಲ್ಲಿಯೂ ಸವಾಲಿನ ಜುಗಲ್ಬಂದಿ ಕಾಣಿಸುತ್ತಿದೆ. ಒಬ್ಬ ಆಟಗಾರ ದಾಖಲೆ ನಿರ್ಮಿಸಿದರೆ, ಮತ್ತೊಬ್ಬ ಅದನ್ನು ಮೀರಿಸುವ ಪ್ರಯತ್ನ ಮಾಡುತ್ತಿದ್ದಾನೆ. ಇದು ಕ್ರೀಡಾ ಸ್ಪೂರ್ತಿಯ ಅತ್ಯುತ್ತಮ ಉದಾಹರಣೆ” ಎಂದು ಅವರು ಹೇಳಿದರು.

ಇದೇ ವೇಳೆ ಗುರಿಂದರ್ವೀರ್ ಸಿಂಗ್, ವಿಶಾಲ್ ಟಿಕೆ, ತೇಜಸ್ವಿನ್ ಶಂಕರ್, ದೇವ್ ಮೀನಾ ಹಾಗೂ ಕುಲದೀಪ್ ಕುಮಾರ್ ಸೇರಿದಂತೆ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಅಥ್ಲೀಟ್ಗಳನ್ನು ಪ್ರಧಾನಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಜಮ್ಮು-ಕಾಶ್ಮೀರದ ಉಧಂಪುರ ಪ್ರದೇಶದ ಸಾಂಪ್ರದಾಯಿಕ ‘ಕಲಾರಿ ಚೀಸ್’ ಕುರಿತು ಕೂಡ ಪ್ರಸ್ತಾಪಿಸಿದರು. ಇದು ಭಾರತದ ಸಾಂಸ್ಕೃತಿಕ ಹಾಗೂ ಆಹಾರ ಪರಂಪರೆಯ ಮಹತ್ವದ ಭಾಗವಾಗಿದ್ದು, ಬ್ರೆಜಿಲ್ನಲ್ಲಿ ನಡೆದ ಅಂತಾರಾಷ್ಟ್ರೀಯ ಚೀಸ್ ಸ್ಪರ್ಧೆಯಲ್ಲಿ ಜಾಗತಿಕ ಮಟ್ಟದ ಗುರುತನ್ನು ಪಡೆದಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಹಿಂದಿನ ಕಾರ್ಯಕ್ರಮದಲ್ಲಿ ಕಲಾರಿ ಚೀಸ್ ಕುರಿತು ಪ್ರಸ್ತಾಪಿಸಿದ ಬಳಿಕ ಅದರ ಜನಪ್ರಿಯತೆ ಹಾಗೂ ಮಾರಾಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಪ್ರಧಾನಿ ತಿಳಿಸಿದರು. ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಗುರುತು ಮತ್ತು ಅವಕಾಶಗಳನ್ನು ಒದಗಿಸಲು ಇಂತಹ ಪ್ರಯತ್ನಗಳು ನೆರವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಭಾರತೀಯ ಕ್ರೀಡಾಪಟುಗಳ ಸಾಧನೆ ಹಾಗೂ ಸ್ಥಳೀಯ ಉತ್ಪನ್ನಗಳ ಯಶೋಗಾಥೆಗಳು ದೇಶದ ಯುವಜನತೆಗೆ ಪ್ರೇರಣೆಯಾಗಿವೆ ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande