
ದಾವಣಗೆರೆ, 29 ಮೇ (ಹಿ.ಸ.) :
ಆ್ಯಂಕರ್ : ಯುವಜನತೆ ಮಾದಕ ದ್ರವ್ಯಗಳಂತಹ ವ್ಯಸನಗಳಿಂದ ದೂರವಿದ್ದು ದೇಶದ ಅಭಿವೃದ್ಧಿಗೆ ರಾಯಭಾರಿಗಳಾಗಬೇಕು. ಡ್ರಗ್ಸ್ ಗೆ ‘ನೋ’ ಹೇಳಿ, ದೇಶದ ಪ್ರಗತಿಗೆ ಸಹಕಾರ ನೀಡಬೇಕು” ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಯುವ ಜನತೆಗೆ ಕರೆ ನೀಡಿದರು.
ದಾವಣಗೆರೆಯ ಪ್ರತಿಷ್ಠಿತ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
1951ರಲ್ಲಿ ಸ್ಥಾಪನೆಯಾದ ಯುಬಿಡಿಟಿ ಕಾಲೇಜು ಕರ್ನಾಟಕದ ಮೊದಲ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಂಸ್ಥೆಯನ್ನು ಕಟ್ಟಲು ಕಾರಣರಾದ ಬ್ರಹ್ಮಪ್ಪ ದೇವೇಂದ್ರಪ್ಪ ತಾವಣನಪ್ಪ ಹಾಗೂ ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್ ಅವರ ಕೊಡುಗೆಯನ್ನು ಉಪರಾಷ್ಟ್ರಪತಿಗಳು ಸ್ಮರಿಸಿದರು.
“ಕಳೆದ 75 ವರ್ಷಗಳಲ್ಲಿ ಈ ಸಂಸ್ಥೆ 30 ಸಾವಿರಕ್ಕೂ ಹೆಚ್ಚು ಎಂಜಿನಿಯ ಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಇದು ಕೇವಲ ಶಿಕ್ಷಣ ಸಂಸ್ಥೆಯಲ್ಲ, ದೇಶದ ತಾಂತ್ರಿಕ ಶಿಕ್ಷಣದ ಹೆಮ್ಮೆಯ ಸ್ತಂಭವಾಗಿದೆ” ಎಂದು ಶ್ಲಾಘಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶವು ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ ಹಾಗೂ ಸ್ಕಿಲ್ ಇಂಡಿಯಾ ಯೋಜನೆಗಳ ಮೂಲಕ ಜಾಗತಿಕ ಮಟ್ಟದಲ್ಲಿ ಹೊಸ ಎತ್ತರ ತಲುಪುತ್ತಿದೆ. ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್ ತಯಾರಿಕೆ ಮತ್ತು ಗ್ರೀನ್ ಎನರ್ಜಿ ಕ್ಷೇತ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಈ ತಂತ್ರಜ್ಞಾನ ಕ್ರಾಂತಿಗೆ ಇಂದಿನ ಯುವಜನತೆ ನಾಯಕತ್ವ ವಹಿಸಬೇಕು ಎಂದು ಆಶಿಸಿದರು.
ತಮ್ಮ ಭಾಷಣದ ವೇಳೆ ಯುವಜನತೆಗೆ ಭಾವನಾತ್ಮಕ ಸಂದೇಶ ನೀಡಿದ ಉಪರಾಷ್ಟ್ರಪತಿಗಳು, “ನಿಮ್ಮ ಬುದ್ಧಿಶಕ್ತಿ ನಿಮ್ಮ ನಿಯಂತ್ರಣದಲ್ಲಿರಬೇಕೇ ವಿನಃ ಯಾವುದೇ ವ್ಯಸನಗಳ ನಿಯಂತ್ರಣದಲ್ಲಿರಬಾರದು. ನಾವು ಮಾತ್ರವಲ್ಲ, ನಮ್ಮ ಸ್ನೇಹಿತರು, ಕುಟುಂಬ ಮತ್ತು ಸಮಾಜವೇ ಒಟ್ಟಾಗಿ ಡ್ರಗ್ಸ್ ವಿರುದ್ಧ ಧ್ವನಿ ಎತ್ತಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕವು ಶಿಕ್ಷಣ, ಮಾಹಿತಿ ತಂತ್ರಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು.
“ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂಬ ಹೆಗ್ಗಳಿಕೆಗೆ ಇಲ್ಲಿನ ಶಿಕ್ಷಣ ಸಂಸ್ಥೆಗಳು ಮತ್ತು ಪ್ರತಿಭಾವಂತ ಯುವಕರೇ ಕಾರಣ” ಎಂದ ಅವರು, ಯುಬಿಡಿಟಿ ಕಾಲೇಜು ಕಳೆದ ಏಳು ದಶಕಗಳಿಂದ ತಾಂತ್ರಿಕ ಶಿಕ್ಷಣ, ಸಂಶೋಧನೆ ಹಾಗೂ ನಾವೀನ್ಯತೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
2047ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಾಣದ ಸಂಕಲ್ಪದಲ್ಲಿ ತಾಂತ್ರಿಕ ಶಿಕ್ಷಣದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್, ಗ್ರೀನ್ ಟೆಕ್ನಾಲಜಿ ಹಾಗೂ ಸೈಬರ್ ಭದ್ರತೆ ಕ್ಷೇತ್ರಗಳಲ್ಲಿ ಭಾರತ ಜಾಗತಿಕ ನಾಯಕತ್ವ ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ 75 ವರ್ಷಗಳ ಸಾಧನೆಯನ್ನು ಪ್ರತಿಬಿಂಬಿಸುವ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಮಹಾಸ್ವಾಮೀಜಿ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಎಐಸಿಟಿಇ ಅಧ್ಯಕ್ಷ ಟಿ.ಜಿ. ಸೀತಾರಾಮ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.