

ಬಳ್ಳಾರಿ, 29 ಮೇ (ಹಿ.ಸ.) :
ಆ್ಯಂಕರ್ : ನಾಡಿನ ಪ್ರತಿಷ್ಠಿತ ರಂಗತೋರಣ ಸಂಸ್ಥೆಯ `ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ’ ಕ್ಕೆ 2024ನೇ ಸಾಲಿಗೆ ಗ್ರಾಮೀಣ ರಂಗಭೂಮಿಯ ಬಹುಮುಖ ಪ್ರತಿಭೆ ಬಳ್ಳಾರಿಯ ಶ್ರೀಮತಿ ವೀಣಾ ಆದವಾನಿ ಹಾಗೂ 2025ನೇ ಸಾಲಿಗೆ ವೃತ್ತಿ ರಂಗಭೂಮಿಯ ನಟ, ನಿರ್ದೇಶಕ ವಿಜಯಪುರದ ಶ್ರೀಧರ ಹೆಗಡೆ ಅವರು ಆಯ್ಕೆ ಆಗಿದ್ದಾರೆ.
ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹಾಗೂ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಜೋಳದರಾಶಿ ಪೊಂಪನಗೌಡ ಅವರು ಸುದ್ದಿಗಾರರಿಗೆ ಶುಕ್ರವಾರ ಈ ಮಾಹಿತಿ ನೀಡಿದರು.
ಬಳ್ಳಾರಿಯಲ್ಲಿ ಜೂನ್ ತಿಂಗಳಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ಮಹಾನೀಯರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿ ಅಭಿನಂದಿಸಲಾಗುತ್ತದೆ ಎಂದು ಅವರು ಹೇಳಿದರು.
ರಂಗತೋರಣ ಸಂಸ್ಥೆಯು ಪ್ರತೀ ವರ್ಷ ಈ ಪ್ರಶಸ್ತಿಯನ್ನು ನೀಡುತ್ತಿರುವುದು ವಿಶೇಷ. ಸಾಂಸ್ಕೃತಿಕ ಸಾರ್ವಭೌಮ, ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರವು ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರ ಸ್ಮರಣೆಯಲ್ಲಿ ರಂಗತೋರಣ ಸಂಸ್ಥೆಯು 2016ರಿಂದ ಆರಂಭಿಸಿದೆ.
ರಂಗತೋರಣದ ಜೊತೆಯಲ್ಲಿ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನ ಹಾಗೂ ಗೌಡರೇ 1960ರಲ್ಲಿ ಸ್ಥಾಪಿಸಿದ್ದ ಶ್ರೀರಾಮೇಶ ಟ್ರಸ್ಟ್ ಸಹಯೋಗದ ರಾಜ್ಯಮಟ್ಟದ ಈ ಪುರಸ್ಕಾರ ನಾಡಿನ ಹಿರಿಯ ರಂಗಕರ್ಮಿಗಳಿಗೆ ನೀಡಲಾಗುತ್ತಿದ್ದು 25 ಸಾವಿರ ನಗದು ಹಾಗೂ ಆಕರ್ಷಕ ಪ್ರಶಸ್ತಿ ಫಲಕವನ್ನು ಹೊಂದಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್