
ಗದಗ, 29 ಮೇ (ಹಿ.ಸ.) :
ಆ್ಯಂಕರ್ : ಶರಣರು ಹಾಗೂ ಸಂತರು ಎಂದರೆ ಅರಿಷಡ್ವರ್ಗಗಳನ್ನು ಗೆದ್ದು ಸಮಾಜಕ್ಕೆ ಸನ್ಮಾರ್ಗ ತೋರಿದ ಮಹನೀಯರು ಎಂದು ಶಿಕ್ಷಕ ಪಿ.ಎಸ್. ಮರಿದೇವರಮಠ ಹೇಳಿದರು.
ಗದಗ ತಾಲೂಕಿನ ಮುಳಗುಂದ ಪಟ್ಟಣದ ಕೆ.ಎಂ. ಹೇರಕಲ್ ಅವರ ನಿವಾಸದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಮುಳಗುಂದ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “ಮನೆಮನದಲ್ಲಿ ಶರಣರ ಸಂಸ್ಕೃತಿ” ಕಾರ್ಯಕ್ರಮದಲ್ಲಿ ಅವರು 12ನೇ ಶತಮಾನದ ಆದಯ್ಯ ಶರಣರ ಕುರಿತು ಉಪನ್ಯಾಸ ನೀಡಿದರು.
ಆದಯ್ಯ ಶರಣರು ಅರಿಷಡ್ವರ್ಗಗಳನ್ನು ತ್ಯಜಿಸಿ 403 ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಮಹಾಶರಣರಾಗಿದ್ದರು ಎಂದು ತಿಳಿಸಿದ ಅವರು, ಕಾಮ, ಕ್ರೋಧ, ಮೋಹ, ಮದ ಹಾಗೂ ಮತ್ಸರಗಳನ್ನು ದೂರವಿಟ್ಟು ಸಮಾಜಕ್ಕೆ ದಾರಿದೀಪವಾದ ಆದಯ್ಯ ಶರಣರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಸುಂದರ ಬದುಕು ಸಾಗಿಸಿದಾಗ ಬದುಕು ಬಂಗಾರವಾಗುತ್ತದೆ ಎಂದು ಹೇಳಿದರು. ಗುರುಗಳು ಹಾಗೂ ಹಿರಿಯರನ್ನು ಗೌರವದಿಂದ ಕಾಣಬೇಕು. ಶರಣರ ಚಿಂತನೆ ಮತ್ತು ಮಂಥನವನ್ನು ಮನೆಮನೆಗಳಿಗೆ ತಲುಪಿಸುವ ಕಾರ್ಯವನ್ನು ಮುಳಗುಂದ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕದಳಿ ವೇದಿಕೆ ಅಧ್ಯಕ್ಷೆ ರಾಜೇಶ್ವರಿ ಬಡ್ಡಿ ಬಸವ ತತ್ವಸಿದ್ಧಾಂತ ಪಠಿಸಿದರು. ಕೆ.ಎಂ. ಹೇರಕಲ್ ಅವರು ಬಸವಣ್ಣನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಪ್ಪ ಹೇರಕಲ್ ವಹಿಸಿದ್ದರು. ಪಿ.ಎಸ್. ಮರಿದೇವರಮಠ, ಕೆ.ಎ. ಬಳಿಗೇರ, ರಾಜೇಶ್ವರಿ ಬಡ್ಡಿ, ಶೋಭಾ ಪಾಟೀಲ, ಕೆ.ಎಂ. ಹೇರಕಲ್, ಎಸ್.ಎಂ. ಉಜ್ಜಣ್ಣವರ, ಪ್ರಕಾಶ ಮದ್ದಿನ, ಈರಣ್ಣ ದೊಟಿಕಲ್, ಮುತ್ತಪ್ಪ ಹುಡೆದ ಹಾಗೂ ಪ್ರಕಾಶ ಬಡಿಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP