
ಬಳ್ಳಾರಿ, 29 ಮೇ (ಹಿ.ಸ.) :
ಆ್ಯಂಕರ್ : ಆಂಧ್ರಪ್ರದೇಶದ ಹೊರನಾಡ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಬೋಧನೆ ಜೊತೆಯಲ್ಲಿ ಕನ್ನಡದಲ್ಲಿ ಬೋಧನೆ ಮಾಡಲು ಹಾಗೂ ಉತ್ತಮ ವಿದ್ಯಾಭ್ಯಾಸ ನೀಡಲು ಉಚಿತವಾಗಿ ಪಠ್ಯ ಪುಸ್ತಕಗಳನ್ನು ನೀಡುವುದರ ಜೊತೆಯಲ್ಲಿ ವಿವಿಧ ಸೌಲಭ್ಯಗಳನ್ನು ನೀಡಲು ಕೋರಿ ಆಂಧ್ರಪ್ರದೇಶ ಕನ್ನಡ ಶಿಕ್ಷಕರ ಸಂಘವು ಶಿಕ್ಷಣ ಇಲಾಖೆಗೆ ಶುಕ್ರವಾರ ಮನವಿ ಸಲ್ಲಿಸಿದೆ.
ಆಂಧ್ರಪ್ರದೇಶ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಂ. ಗಿರಿಜಾಪತಿ ಅವರ ನೇತೃತ್ವದಲ್ಲಿ ಬಳ್ಳಾರಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿರುವ ಉಮಾದೇವಿ ಅವರಿಗೆ ಮನವಿ ಸಲ್ಲಿಸಿದ್ದು, ಕರ್ನಾಟಕ - ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಕರ್ನಾಟಕ ಸರ್ಕಾರದಿಂದ ಉಚಿತವಾಗಿ ನೀಡಬೇಕು ಎಂದು ಕೋರಿದ್ದಾರೆ.
ಕರ್ನಾಟಕ ಸರ್ಕಾರದಲ್ಲಿ ಕಾರ್ಯನಿರತ ಶಿಕ್ಷಕರಿಗೆ ನೀಡುವ ಸೇವಾ ಸೌಲಭ್ಯಗಳನ್ನು ಆಂಧ್ರದ ಹೊರನಾಡ ಕನ್ನಡ ಶಿಕ್ಷಕರಿಗೆ ನೀಡಬೇಕು. ಪ್ರತೀ ವರ್ಷದ ಶೈಕ್ಷಣಿಕ ವರ್ಷದಲ್ಲಿ ಕಾರ್ಯನಿರತ ಶಿಕ್ಷಕರಿಗೆ (ಪಾಠಶಾಲೆ) ನೀಡುವ ಶೈಕ್ಷಣಿಕ ಸಾಮಗ್ರಿಗಳನ್ನು ಹೊರನಾಡ ಕನ್ನಡಿಗರಾಗಿರುವ ನಮಗೂ ನೀಡಬೇಕು. ಕರ್ನಾಟಕ ಸರ್ಕಾರ ನೀಡುವ `ಉತ್ತಮ ಶಿಕ್ಷಕ' ಪುರಸ್ಕಾರವನ್ನು ಆಂಧ್ರಪ್ರದೇಶದ ಕನ್ನಡ ಶಿಕ್ಷಕರಿಗೂ ನೀಡಬೇಕು ಎಂದು ಅವರು ಮನವಿ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್