ಕ್ರೀಡಾ ವಸತಿ ಶಾಲೆ, ನಿಲಯಗಳ ಪ್ರವೇಶಕ್ಕೆ ವಿಶೇಷ ಆಯ್ಕೆ ಶಿಬಿರ
ಗದಗ, 29 ಮೇ (ಹಿ.ಸ.) : ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2026-27ನೇ ಸಾಲಿನ ಕ್ರೀಡಾ ವಸತಿ ಶಾಲೆ ಹಾಗೂ ಕ್ರೀಡಾ ನಿಲಯಗಳ ಪ್ರವೇಶಕ್ಕಾಗಿ ವಿಶೇಷ ಆಯ್ಕೆ ಶಿಬಿರಗಳನ್ನು ಆಯೋಜಿಸಲಾಗಿದ್ದು, ಈ ಹಿಂದೆ ಜಿಲ್ಲಾ ಹಾಗೂ ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾ
ಫೋಟೋ


ಗದಗ, 29 ಮೇ (ಹಿ.ಸ.) :

ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2026-27ನೇ ಸಾಲಿನ ಕ್ರೀಡಾ ವಸತಿ ಶಾಲೆ ಹಾಗೂ ಕ್ರೀಡಾ ನಿಲಯಗಳ ಪ್ರವೇಶಕ್ಕಾಗಿ ವಿಶೇಷ ಆಯ್ಕೆ ಶಿಬಿರಗಳನ್ನು ಆಯೋಜಿಸಲಾಗಿದ್ದು, ಈ ಹಿಂದೆ ಜಿಲ್ಲಾ ಹಾಗೂ ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಅರ್ಹ ಕ್ರೀಡಾಪಟುಗಳಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ.

ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಗುಣಮಟ್ಟದ ತರಬೇತಿ ಹಾಗೂ ಶಿಕ್ಷಣದೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ರೂಪಿಸುವ ಉದ್ದೇಶದಿಂದ ಇಲಾಖೆ ಪ್ರತಿ ವರ್ಷ ಕ್ರೀಡಾ ವಸತಿ ಶಾಲೆ ಹಾಗೂ ನಿಲಯಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತದೆ. 2026-27ನೇ ಸಾಲಿನ ಪ್ರವೇಶ ಪ್ರಕ್ರಿಯೆಯ ಅಂಗವಾಗಿ ಈಗಾಗಲೇ ಜಿಲ್ಲಾ ಮತ್ತು ವಿಭಾಗ ಮಟ್ಟದಲ್ಲಿ ಆಯ್ಕೆ ಶಿಬಿರಗಳನ್ನು ನಡೆಸಲಾಗಿತ್ತು. ಆದರೆ ವಿವಿಧ ಕಾರಣಗಳಿಂದ ಅನೇಕ ಪ್ರತಿಭಾವಂತ ಕ್ರೀಡಾಪಟುಗಳು ಆಯ್ಕೆ ಶಿಬಿರಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ವಿಶೇಷ ಆಯ್ಕೆ ಶಿಬಿರಗಳನ್ನು ಆಯೋಜಿಸುವ ಮೂಲಕ ಮತ್ತೊಂದು ಅವಕಾಶವನ್ನು ನೀಡಲು ಇಲಾಖೆ ಮುಂದಾಗಿದೆ.

ರಾಜ್ಯದ ಯಾವುದೇ ಭಾಗದ ಅರ್ಹ ಕ್ರೀಡಾಪಟುಗಳು ಈ ವಿಶೇಷ ಆಯ್ಕೆ ಶಿಬಿರಗಳಲ್ಲಿ ಭಾಗವಹಿಸಬಹುದಾಗಿದೆ. ಈಗಾಗಲೇ ಆಯೋಜಿಸಲಾದ ಆಯ್ಕೆ ಶಿಬಿರಗಳಲ್ಲಿ ಭಾಗವಹಿಸದೇ ಉಳಿದ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಜೊತೆಗೆ ಈಗಾಗಲೇ ಆಯ್ಕೆ ಶಿಬಿರಗಳಲ್ಲಿ ಭಾಗವಹಿಸಿ ರಾಜ್ಯ ಮಟ್ಟದ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗಿರುವ ಅಭ್ಯರ್ಥಿಗಳೂ ತಮ್ಮ ಸಾಧನೆಯನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳುವ ಉದ್ದೇಶವಿದ್ದಲ್ಲಿ ಅರ್ಜಿ ನಮೂನೆಯಲ್ಲಿ ಈ ಕುರಿತು ಕಡ್ಡಾಯವಾಗಿ ಉಲ್ಲೇಖಿಸಿ ವಿಶೇಷ ಆಯ್ಕೆ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

8ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರಸ್ತುತ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಜೂನ್-2026ಕ್ಕೆ ಅನ್ವಯವಾಗುವಂತೆ 14 ವರ್ಷದೊಳಗಿನವರಾಗಿರಬೇಕು. ಪ್ರಥಮ ಪಿಯುಸಿ ಪ್ರವೇಶ ಬಯಸುವ ಅಭ್ಯರ್ಥಿಗಳು ಜೂನ್-2026ಕ್ಕೆ ಅನ್ವಯವಾಗುವಂತೆ 18 ವರ್ಷದೊಳಗಿನವರಾಗಿರಬೇಕು ಎಂದು ಇಲಾಖೆ ತಿಳಿಸಿದೆ.

ಜೂನ್ 1ರಂದು ರಾಜ್ಯದ ವಿವಿಧ ಕೇಂದ್ರಗಳಲ್ಲಿ ವಿವಿಧ ಕ್ರೀಡಾ ವಿಭಾಗಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ವಾಲಿಬಾಲ್, ಸೈಕ್ಲಿಂಗ್, ಕುಸ್ತಿ ಹಾಗೂ ಜುಡೋ ವಿಭಾಗಗಳಿಗೆ ಆಯ್ಕೆ ಶಿಬಿರ ನಡೆಯಲಿದೆ.

ತುಮಕೂರಿನ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಕಬಡ್ಡಿ, ಜಿಮ್ನಾಸ್ಟಿಕ್ಸ್ ಹಾಗೂ ಫುಟ್ಬಾಲ್ ವಿಭಾಗಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಇನ್ನು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಬಾಸ್ಕೆಟ್ಬಾಲ್, ಬಾಕ್ಸಿಂಗ್, ಅರ್ಚರಿ ಹಾಗೂ ಫೆನ್ಸಿಂಗ್ ವಿಭಾಗಗಳಿಗೆ ಆಯ್ಕೆ ನಡೆಯಲಿದ್ದು, ಬೆಂಗಳೂರಿನ ಅಕ್ಕಿತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣದಲ್ಲಿ ಹಾಕಿ ವಿಭಾಗಕ್ಕೆ ಸಂಬಂಧಿಸಿದ ಆಯ್ಕೆ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶೇಷ ಆಯ್ಕೆ ಶಿಬಿರದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕ್ರೀಡಾ ವೈಜ್ಞಾನಿಕ ಪರೀಕ್ಷೆ ಸೇರಿದಂತೆ ವಿವಿಧ ಹಂತದ ಪರೀಕ್ಷೆಗಳಲ್ಲಿ ಭಾಗವಹಿಸಬೇಕಾಗುತ್ತದೆ. ಶಿಬಿರಕ್ಕೆ ಬಂದು ಹೋಗುವ ಪ್ರಯಾಣ ವೆಚ್ಚವನ್ನು ಕ್ರೀಡಾಪಟುಗಳೇ ಭರಿಸಬೇಕಾಗಿದ್ದು, ಕ್ರೀಡಾಪಟುಗಳನ್ನು ಶಿಬಿರಕ್ಕೆ ಕರೆತರುವುದು ಹಾಗೂ ಹಿಂದಿರುಗಿಸುವ ಜವಾಬ್ದಾರಿ ಪೋಷಕರದ್ದಾಗಿರುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಕ್ರೀಡಾ ವೈಜ್ಞಾನಿಕ ಪರೀಕ್ಷೆಯಲ್ಲಿ ಭಾಗವಹಿಸುವ ಬಾಲಕರು ಹಾಗೂ ಬಾಲಕಿಯರು ಯಾವುದೇ ರೀತಿಯ ಚಿನ್ನಾಭರಣ ಧರಿಸಿಕೊಂಡು ಬರಬಾರದು ಎಂದು ಸೂಚಿಸಲಾಗಿದೆ. ಅಲ್ಲದೇ ಅಭ್ಯರ್ಥಿಗಳು ತಮ್ಮೊಂದಿಗೆ ಹಣ ಅಥವಾ ಬೆಲೆಬಾಳುವ ವಸ್ತುಗಳನ್ನು ತಂದಿದ್ದಲ್ಲಿ ಅದರ ಸಂಪೂರ್ಣ ಜವಾಬ್ದಾರಿ ಅವರದ್ದೇ ಆಗಿರುತ್ತದೆ. ಹಣ ಕಳೆದುಹೋದರೆ ಅಥವಾ ಇತರ ವಸ್ತುಗಳಿಗೆ ಹಾನಿಯಾದರೆ ಇಲಾಖೆ ಹೊಣೆಗಾರರಾಗುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಉತ್ಸುಕರಾಗಿರುವ ಯುವ ಪ್ರತಿಭೆಗಳು ಈ ವಿಶೇಷ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಕೌಶಲ್ಯವನ್ನು ಪ್ರದರ್ಶಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande