


ಕೊಪ್ಪಳ, 29 ಮೇ (ಹಿ.ಸ.) :
ಆ್ಯಂಕರ್ : ಮಳೆಗಾಲದ ವೇಳೆಯಲ್ಲಿ ಜನ-ಜಾನುವಾರುಗಳ ಪ್ರಾಣ ಹಾನಿ ತಡೆಗೆ ಹಾಗೂ ಹಾನಿಗೆ ತಕ್ಕಂತೆ ಪರಿಹಾರ ಒದಗಿಸುವುದಕ್ಕೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ವಹಿಸಬೇಕು ಎಂದು ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಅವರು ಸಂಬ0ಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾ ಪಂಚಾಯತ್ ಕಚೇರಿಯ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಮೇ 29ರಂದು ಇರಕಲಗಡ ಹೋಬಳಿಗೆ ತ್ರೈಮಾಸಿಕ ಕೆಡಿಪಿ ಸಭೆ ನಡೆಸಿ ಅವರು ಮಾತನಾಡಿದರು.
ಮಳೆಗಾಲದ ಸಂದರ್ಭದಲ್ಲಿ ಅಧಿಕಾರಿಗಳು ಜಾಗ್ರತೆಯಿಂದ ಕಾರ್ಯ ನಿರ್ವಹಿಸಬೇಕು. ಯಾವುದೆ ಕಡೆಗಳಲ್ಲಿ ಹಾನಿ ಸಂಭವಿಸಿದಾಗ ಸ್ಥಳಕ್ಕೆ ಕೂಡಲೇ ಭೇಟಿ ನೀಡಿ ಪರಿಶೀಲಿಸಬೇಕು. ಜೀವ ಹಾನಿ ಹಾಗೂ ಆಸ್ತಿಪಾಸ್ತಿ ಹಾನಿಗೆ ಪರಿಹಾರ ಕಾರ್ಯವನ್ನು ತ್ವರಿತಗೊಳಿಸಬೇಕು. ಸಾರ್ವಜನಿಕರ ದೂರವಾಣಿ ಕರೆಗಳನ್ನು ಸ್ವೀಕರಿಸಿ ಸ್ಪಂದನೆ ನೀಡಬೇಕು ಎಂದು ಶಾಸಕರು ಕಂದಾಯ, ಜೆಸ್ಕಾಂ, ಪಶುಪಾಲನೆ, ಕೃಷಿ, ತೋಗಾರಿಕಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಿನ್ನಾಳ ಗ್ರಾಮ ಸೇರಿದಂತೆ ಆರು ಕಡೆಗಳಲ್ಲಿನ ಸಾರ್ವಜನಿಕ ಶೌಚಾಲಯಗಳಿಗೆ ವಿದ್ಯುತ್ ಸಂಪರ್ಕವಿಲ್ಲದ ವಿಷಯ ಸಭೆಯಲ್ಲಿ ಚರ್ಚೆಗೆ ಬಂದಿತು.
ಹಿ0ದುಳಿದ ಕಿನ್ನಾಳ ಪ್ರದೇಶದಲ್ಲಿನ ಸಾರ್ವಜನಿಕ ಶೌಚಾಲಯಕ್ಕೆ ವಿದ್ಯುತ್ ಸೌಕರ್ಯ ಕೊಡಲು ವಿಳಂಬ ವಹಿಸಿದ ಕೊಪ್ಪಳ ಜೆಸ್ಕಾಂ ಅಧಿಕಾರಿಗೆ ಶಾಸಕರು ತರಾಟೆ ತೆಗೆದುಕೊಂಡರು. ನಾಲ್ಕಾರು ಬಾರಿ ಗಂಗಾವತಿಗೆ ಅಲೆದು ಕಿನ್ನಾಳ ಗ್ರಾಮದ ಶೌಚಾಲಯಕ್ಕೆ ವಿದ್ಯುತ್ ಸೌಕರ್ಯ ಕಲ್ಪಿಸಿ ಎಂದು ಮನವಿ ಹಿಡಿದು ಬಂದ ಕಿನ್ನಾಳ ಗ್ರಾಮದ ಗ್ರಾಪಂ ಸದಸ್ಯೆ ಕಮಲಮ್ಮ ಅವರಲ್ಲಿನ ಮಾನವೀಯತೆ, ಕಾಳಜಿ ಭಾವನೆಯನ್ನು ಅಧಿಕಾರಿಗಳು ಸಹ ರೂಢಿಸಿಕೊಳ್ಳಬೇಕು ಎಂದು ಶಾಸಕರು ಎಲ್ಲ ಅಧಿಕಾರಿಗಳಿಗೆ ಸಲಹೆ ಮಾಡಿದರು.
ಕಿನ್ನಾಳ ಸೇರಿದಂತೆ 6 ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ವಿದ್ಯುತ್ ಸಂಪರ್ಕ ಸೇರಿದಂತೆ ನಾನಾ ಕಾರ್ಯಗಳ ಬಗ್ಗೆ ಶಿಸ್ತುಬದ್ಧ ಕೆಲಸ ನಿರ್ವಹಿಸಲು ಸೂಚನೆ ನೀಡಿರಿ ಎಂದು ಶಾಸಕರು, ಕೊಪ್ಪಳ ತಾಲೂಕು ಪಂಚಾಯತ್ ಇಓ ಅವರಿಗೆ ನಿರ್ದೇಶನ ನೀಡಿದರು.
ಕಳೆದ ಕೆಡಿಪಿ ಸಭೆಯಲ್ಲಿ ನೀಡಿದ ಸೂಚನೆಯನ್ವಯ ಗಂಗಾವತಿ ಬಿಇಓ ಕಚೇರಿ ಚುರುಕಾಗಿ ಕಾರ್ಯ ನಿರ್ವಹಿಸಿ, ಎಲ್ಲ ಶಾಲೆಗಳ ಮುಖ್ಯಾಧ್ಯಾಪಕರ ಸಭೆ ನಡೆಸಿ ಸೂಚನೆ ನೀಡಿದ ಪರಿಣಾಮ ಗಂಗಾವತಿ ತಾಲೂಕಿನಲ್ಲಿ ಕಳೆದ ವರ್ಷ ಶೇ.65ರಷ್ಟಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶವು ಈ ಬಾರಿ 93.28ರಷ್ಟು ಪ್ರಗತಿಯಾಗಿದೆ. ಕಳೆದ ಸಭೆಯಲ್ಲಿ ನೀಡಿದ ಸೂಚನೆಯಂತೆ ಗಂಗಾವತಿ ತಾಲೂಕು ವ್ಯಾಪ್ತಿಯಲ್ಲಿ ಶಾಲಾ ಕೊಠಡಿಗಳ ದುರಸ್ತಿ ಸೇರಿದಂತೆ ನಾನಾ ಕಾರ್ಯಗಳಿಗೆ ಅಂದಾಜು 22 ಕೋಟಿ ರೂ.ಗಳ ಅಂದಾಜು ಪತ್ರಿಕೆ ಸಿದ್ದಪಡಿಸಿ ಸಲ್ಲಿಸಲಾಗಿದೆ ಎಂದು ಗಂಗಾವತಿ ಬಿಇಓ ಅವರು ಸಭೆಗೆ ಮಾಹಿತಿ ನೀಡಿದರು.
ಶಾಲಾ ಕೊಠಡಿಗಳ ನಿರ್ಮಾಣ ಸೇರಿದಂತೆ ನಾನಾ ಕಾರ್ಯಕ್ಕೆ ಗಂಗಾವತಿ ಕ್ಷೇತ್ರಕ್ಕೆ 80 ಕೋಟಿ ಅನುದಾನ ನಿಗದಿಯಾದ ಪೈಕಿ 40 ಕೋಟಿ ಅನುದಾನದಲ್ಲಿ ಈಗ ಕೆಲಸ ಆರಂಭಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಆನೆಗೊಂದಿ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ವೈದ್ಯಾಧಿಕಾರಿಗಳು ಇರುವುದಿಲ್ಲ ಎಂಬ ವಿಷಯವು ಸಭೆಯಲ್ಲಿ ಪ್ರಸ್ತಾಪವಾಯಿತು.
ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ವೈದ್ಯಾಧಿಕಾರಿಗಳಿಗೆ ಸರಿಯಾಗಿ ಕಾರ್ಯ ಹೊಂದಾಣಿಕೆ ಮಾಡುವಂತೆ ಪ್ರಸ್ತಾವನೆಯನ್ನು ಎಎಚ್ಓ ಅವರಿಗೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಎಲ್ಲ ವಸತಿ ನಿಲಯಗಳಿಗೆ ನಿಯಮಿತ ಭೇಟಿ ನೀಡಿ, ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಪ್ರತಿ 2 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಕಾರ್ಯ ನಡೆಸುವಂತೆ ಶಾಸಕರು, ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ಗಂಗಾವತಿ, ಕೊಪ್ಪಳ ತಾಲೂಕಿನ ತಹಸೀಲ್ದಾರರು ಮತ್ತು ಕಾರ್ಯ ನಿರ್ವಹಾಕ ಅಧಿಕಾರಿಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್