
ಧಾರವಾಡ, 29 ಮೇ (ಹಿ.ಸ.) :
ಆ್ಯಂಕರ್ : ಧಾರವಾಡ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನಿರಂತರವಾಗಿ 28 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ, ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದುತ್ತಿರುವ ವಾಹನ ಚಾಲಕ ಮಲ್ಲಿಕಾರ್ಜುನ ಕಂಪಲಿ ಅವರಿಗೆ ನಾಳೆ ಮಧ್ಯಾಹ್ನ 3 ಗಂಟೆಗೆ ವಾರ್ತಾ ಭವನದಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬೆಳಗಾವಿ, ಧಾರವಾಡ, ಹುಬ್ಬಳ್ಳಿ ಕಚೇರಿಗಳಲ್ಲಿ ವಾಹನ ಚಾಲಕರಾಗಿ ಸೇವೆ ಸಲ್ಲಿಸಿರುವ ಮಲ್ಲಿಕಾರ್ಜುನ ಕಂಪಲಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದವರು.
ಅಸುಂಡಿ ಗ್ರಾಮದಲ್ಲಿ ಎಸ್.ಎಸ್.ಎಲ್.ಸಿ. ವರೆಗೆ ಪ್ರಾಥಮಿಕ ಶಿಕ್ಷಣ ಪಡೆದಿರುವ ಕಂಪಲಿ ಅವರು 1998 ರಲ್ಲಿ ವಾರ್ತಾ ಇಲಾಖೆ ಸೇವೆಗೆ ಸೇರಿದ್ದಾರೆ.
ಮಧ್ಯಮ ವರ್ಗ ಕುಟುಂಬದ ಇವರು ತಮ್ಮ ಇಬ್ಬರು ಮಕ್ಕಳಿಗೆ ಎಂ.ಬಿ.ಬಿ.ಎಸ್. ಉನ್ನತ ಶಿಕ್ಷಣ ಕೊಡಿಸಿದ್ದಾರೆ. ಇವರ ಪುತ್ರರಾದ ಡಾ.ಮಿಥುನ ಮ.ಕಂಪಲಿ ಅವರು ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ತಾಲೂಕು ಆಸ್ಪತ್ರೆಯಲ್ಲಿ ಮತ್ತು ಇನ್ನೊರ್ವ ಪುತ್ರ ಡಾ.ಮಹೇಶ ಮ.ಕಂಪಲಿ ಅವರು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ, ಮಲ್ಲಿಕಾರ್ಜುನ ಕಂಪಲಿ ಅವರು ಸರಳ, ಸಜ್ಜನ ವ್ಯಕ್ತಿತ್ವ ಹೊಂದಿದ್ದಾರೆ. ಇವರು ವಾಹನ ಚಾಲಕರಾಗಿ ವಿನಯದಿಂದ ನಿರಂತರವಾಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ವಾರ್ತಾ ಇಲಾಖೆಯ ಅನೇಕ ಅಧಿಕಾರಿಗಳಿಗೆ, ಪತ್ರಕರ್ತರಿಗೆ ಪ್ರೀತಿ ಪಾತ್ರರಾಗಿದ್ದಾರೆ.
ಇಂತಹ ಸರಳ, ಸದ್ವಿನಯಶೀಲ ಸಿಬ್ಬಂದಿಗೆ ಧಾರವಾಡ ವಾರ್ತಾ ಭವನದಲ್ಲಿ ನಾಳೆ ಮಧ್ಯಾಹ್ನ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಅವರ ವೈದ್ಯ ಮಕ್ಕಳು ಸೇರಿದಂತೆ ವಾರ್ತಾ ಇಲಾಖೆಯ ಅಧಿಕಾರಿಗಳು, ನಿವೃತ್ತ ಹಿರಿಯ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ
ಹಿಂದೂಸ್ತಾನ್ ಸಮಾಚಾರ್ / Rakesh.M.B.