ಅಕ್ರಮ ಮರಳು ದಂಧೆಗೆ ಅಧಿಕಾರಿಗಳ ಪರೋಕ್ಷ ಬೆಂಬಲ : ಕರವೇ ಸ್ವಾಭಿಮಾನಿ ಸೇನೆ ಆರೋಪ
ಗದಗ, 29 ಮೇ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದಕ್ಕೆ ಕೆಲ ಅಧಿಕಾರಿಗಳ ಪರೋಕ್ಷ ಬೆಂಬಲವಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಶರಣು ಗೋಡಿ ಗಂಭೀರ ಆರೋಪ
ಫೋಟೋ


ಗದಗ, 29 ಮೇ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದಕ್ಕೆ ಕೆಲ ಅಧಿಕಾರಿಗಳ ಪರೋಕ್ಷ ಬೆಂಬಲವಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಶರಣು ಗೋಡಿ ಗಂಭೀರ ಆರೋಪ ಮಾಡಿದರು.

ಪಟ್ಟಣದ ತಹಸೀಲ್ದಾರರ ಕಚೇರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ತಾಲೂಕಿನ ಅಕ್ಕಿಗುಂದ, ಬಟ್ಟೂರ, ಅಮರಾಪೂರ, ಹುಲ್ಲೂರು, ಹಿರೇಮಲ್ಲಾಪುರ, ನೇಲೋಗಲ್, ಆದರಹಳ್ಳಿ, ಬಡ್ಡಿ ಹಾಗೂ ಮಾಡಳ್ಳಿ ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ದಂಧೆ ನಿರಂತರವಾಗಿ ನಡೆಯುತ್ತಿದೆ ಎಂದು ದೂರಿದರು.

ಅಕ್ರಮ ಮರಳು ದಂಧೆಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ರೂಪಾಯಿ ನಷ್ಟ ಉಂಟಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು.

“ಒಂದೇ ಪಾಸ್ನಲ್ಲಿ ನಾಲ್ಕೈದು ಟ್ರಿಪ್”

ಕೆಲವು ಟಿಪ್ಪರ್ ಹಾಗೂ ಲಾರಿಗಳು ನೀಡಲಾಗಿರುವ ಪಾಸ್ಗಳನ್ನು ದುರುಪಯೋಗಪಡಿಸಿಕೊಂಡು ಒಂದೇ ಪಾಸ್ನಲ್ಲಿ ನಾಲ್ಕೈದು ಟ್ರಿಪ್ ಮರಳು ಸಾಗಾಣಿಕೆ ನಡೆಸುತ್ತಿವೆ. ಜಿಪಿಎಸ್ ವ್ಯವಸ್ಥೆ ಅಳವಡಿಕೆ ಇದ್ದರೂ ಅದನ್ನು ಸ್ಥಗಿತಗೊಳಿಸಿ, ಮರಳು ಗುತ್ತಿಗೆದಾರರು ಹಾಗೂ ಕೆಲ ಅಧಿಕಾರಿಗಳ ಹೊಂದಾಣಿಕೆಯಲ್ಲಿ ಸಕ್ರಮದ ಹೆಸರಿನಲ್ಲಿ ಅಕ್ರಮ ದಂಧೆ ನಡೆಯುತ್ತಿದೆ ಎಂದು ಶರಣು ಗೋಡಿ ಆರೋಪಿಸಿದರು.

ತಾಲೂಕಿನಲ್ಲಿ ರಾತ್ರಿ ವೇಳೆ ಅಕ್ರಮ ಮರಳು ಸಾಗಾಟ ಹೆಚ್ಚಾಗಿ ನಡೆಯುತ್ತಿದ್ದು, ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಸರ್ಕಾರದ ಕಾನೂನುಗಳನ್ನು ಗಾಳಿಗೆ ತೂರಿ ಕಣ್ಮುಚ್ಚಿ ಕುಳಿತಂತಾಗಿದೆ ಎಂದು ಟೀಕಿಸಿದರು.

ಒಂದು ವಾರದೊಳಗೆ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ರಸ್ತೆ ತಡೆ, ಕಚೇರಿ ಮುತ್ತಿಗೆ ಸೇರಿದಂತೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ತಾಲೂಕು ಅಧ್ಯಕ್ಷ ನಾಗೇಶ ಅಮರಾಪೂರ ಮಾತನಾಡಿ, ತಾಲೂಕು ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಸಂಬಂಧಪಟ್ಟ ಇಲಾಖೆಯ ಕೆಲ ಅಧಿಕಾರಿಗಳು ಅಕ್ರಮ ಮರಳು ದಂಧೆಕೋರರಿಂದ “ತಿಂಗಳ ಪ್ರಸಾದ” ಪಡೆದು ಕ್ರಮ ಕೈಗೊಳ್ಳದೆ ಕುಳಿತಿದ್ದಾರೆ ಎಂಬ ಗಂಭೀರ ಸಾರ್ವಜನಿಕ ಆರೋಪಗಳು ಕೇಳಿ ಬರುತ್ತಿವೆ ಎಂದು ಹೇಳಿದರು. ಗ್ರೇಡ್–2 ತಹಸೀಲ್ದಾರ್ ಮಂಜುನಾಥ ಅಮಾಸಿ ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾಂತೇಶ ಮಣಕವಾಡ, ಪ್ರವೀಣ ಆಚಾರಿ, ಮಹಾಂತೇಶ ಉಮಚಗಿ, ಕೈಸರ್ ಮೊಹಮ್ಮದ್ ಅಲಿ, ಸುಲೇಮಾನ್ ಆಡೂರ, ಮಲಿಕ್ ಕಡಕೋಳ, ಬಸವರಾಜ ಅಮರಾಪುರ, ರಾಜು ಅಮರಾಪುರ, ಅಯ್ಯಪ್ಪ ಪಾಟೀಲ, ಅಶೋಕ ಕುರಿ, ಖಾದರಬಾಷಾ ಶಿರಹಟ್ಟಿ, ಜಿಲಾನಿ ಸಿದ್ದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande