
ಬೆಂಗಳೂರು, 29 ಮೇ (ಹಿ.ಸ.):
ಆ್ಯಂಕರ್ : ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸಂಸ್ಥೆಯ 45ನೇ ವಾರ್ಷಿಕೋತ್ಸವ ಸಮಾರಂಭವು ಬೆಂಗಳೂರಿನಲ್ಲಿ ಭವ್ಯವಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು “ಆಂತರಿಕ ಶಾಂತಿಯೇ ಬಾಹ್ಯ ಸಾಮರಸ್ಯದ ಅಡಿಪಾಯ” ಎಂದು ಹೇಳಿದರು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆ “ವಸುಧೈವ ಕುಟುಂಬಕಂ” ಎಂಬ ಭಾರತೀಯ ತತ್ವಶಾಸ್ತ್ರಕ್ಕೆ ಜೀವ ತುಂಬಿದ್ದು, ವಿಶ್ವವನ್ನು ಒಂದು ಕುಟುಂಬವೆಂದು ಕಾಣುವ ಭಾರತದ ಚಿಂತನೆಗೆ ಜಾಗತಿಕ ವೇದಿಕೆಯಲ್ಲಿ ಹೊಸ ಅರ್ಥ ನೀಡಿದೆ ಎಂದು ಅವರು ಅಭಿಪ್ರಾಯಪಟ್ಟರು.
“ಆಧುನಿಕತೆ ಮತ್ತು ಪ್ರಾಚೀನ ಪರಂಪರೆ ಪರಸ್ಪರ ವಿರುದ್ಧವಲ್ಲ; ಅವು ಪರಸ್ಪರ ಪೂರಕವಾಗಿವೆ ಎಂಬ ಸ್ಪಷ್ಟ ಸಂದೇಶವನ್ನು ಆರ್ಟ್ ಆಫ್ ಲಿವಿಂಗ್ ಜಗತ್ತಿಗೆ ನೀಡುತ್ತಿದೆ” ಎಂದು ಉಪರಾಷ್ಟ್ರಪತಿಗಳು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಶ್ರೀ ಶ್ರೀ ರವಿಶಂಕರ್, ದೇಶ–ವಿದೇಶಗಳ ಗಣ್ಯರು, ಸಂಸ್ಥೆಯ ಸದಸ್ಯರು, ಸಾವಿರಾರು ಭಕ್ತರು ಮತ್ತು ಸ್ವಯಂಸೇವಕರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಉಪರಾಷ್ಟ್ರಪತಿಗಳು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವಾರ್ಷಿಕೋತ್ಸವದ ಸ್ಮರಣಾರ್ಥ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕತೆ, ಮಾನವೀಯ ಮೌಲ್ಯಗಳು, ವಿಶ್ವಶಾಂತಿ ಹಾಗೂ ಸಮಾಜಸೇವೆಯ ಮಹತ್ವವನ್ನು ಒತ್ತಿಹೇಳಲಾಯಿತು. ವಿಶ್ವದ ಅನೇಕ ದೇಶಗಳಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಮಾನಸಿಕ ಆರೋಗ್ಯ, ಯೋಗ, ಧ್ಯಾನ ಮತ್ತು ಸಾಮಾಜಿಕ ಸೇವಾ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದನ್ನು ಗಣ್ಯರು ಪ್ರಶಂಸಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.