
ನ್ಯೂಯಾರ್ಕ್, 29 ಮೇ (ಹಿ.ಸ.) :
ಆ್ಯಂಕರ್ : ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದ ಕುರಿತ ಮಾತುಕತೆಯಲ್ಲಿ ಗಮನಾರ್ಹ ಪ್ರಗತಿ ಸಾಧನೆಯಾಗಿದ್ದು, ಎರಡೂ ದೇಶಗಳು ಒಪ್ಪಂದದ ಅಂತಿಮ ಹಂತದತ್ತ ಸಾಗುತ್ತಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಜಾಗತಿಕ ವ್ಯಾಪಾರ ಮತ್ತು ಕೈಗಾರಿಕಾ ವಲಯದ ಪ್ರಮುಖರೊಂದಿಗೆ ನಡೆದ ಗೋಳಮೇಜು ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.
ಭಾರತೀಯ ಮಹಾವಾಣಿಜ್ಯ ದೂತಾವಾಸ ಮತ್ತು ಯುಎಸ್–ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಂ ಸಹಯೋಗದಲ್ಲಿ ನಡೆದ ಸಭೆಯಲ್ಲಿ 50ಕ್ಕೂ ಹೆಚ್ಚು ಜಾಗತಿಕ ಉದ್ಯಮಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದಲ್ಲಿ ನಡೆಯುತ್ತಿರುವ ವೇಗದ ಆರ್ಥಿಕ ಬೆಳವಣಿಗೆ, ಸುಧಾರಣಾ ಆಧಾರಿತ ಆಡಳಿತ ವ್ಯವಸ್ಥೆ ಮತ್ತು ಜಾಗತಿಕ ಹೂಡಿಕೆದಾರರಿಗೆ ದೊರೆಯುತ್ತಿರುವ ಹೊಸ ಅವಕಾಶಗಳ ಕುರಿತು ಪಿಯೂಷ್ ಗೋಯಲ್ ವಿವರಿಸಿದರು.
ಭಾರತ–ಅಮೆರಿಕ ನಡುವಿನ ವ್ಯಾಪಾರ, ಹೂಡಿಕೆ, ನವೀನ ತಂತ್ರಜ್ಞಾನ, ಡಿಜಿಟಲ್ ವಾಣಿಜ್ಯ ಹಾಗೂ ಸರಬರಾಜು ಸರಪಳಿ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಅವರು ತಿಳಿಸಿದರು.
ಸಭೆಯ ನಂತರ ಪಿಯೂಷ್ ಗೋಯಲ್ ಜಾಗತಿಕ ಕಂಪನಿಗಳ ಹಲವು ಮುಖ್ಯಸ್ಥರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದರು. ಮೋರ್ಗನ್ ಸ್ಟಾನ್ಲಿ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟೆಡ್ ಪಿಕ್ ಅವರೊಂದಿಗೆ ಭಾರತದಲ್ಲಿ ದೀರ್ಘಕಾಲಿಕ ಹೂಡಿಕೆ ಮತ್ತು ಸಂಸ್ಥಾತ್ಮಕ ಸಹಭಾಗಿತ್ವ ವಿಸ್ತರಣೆ ಕುರಿತು ಚರ್ಚಿಸಿದರು.
ವಾರ್ಬರ್ಗ್ ಪಿಂಕಸ್ ಸಂಸ್ಥೆಯ ಅಧ್ಯಕ್ಷ ಚಿಪ್ ಕೆ ಅವರೊಂದಿಗೆ ಜಾಗತಿಕ ಹೂಡಿಕೆ ಪರಿಸ್ಥಿತಿ ಮತ್ತು ಭಾರತದ ಉದಯೋನ್ಮುಖ ಆರ್ಥಿಕ ಅವಕಾಶಗಳ ಬಗ್ಗೆ ಮಾತುಕತೆ ನಡೆಸಲಾಯಿತು.
ಔಷಧೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಮತ್ತು ನವೀನತೆಯನ್ನು ಉತ್ತೇಜಿಸುವ ಕುರಿತು ಅಮ್ನೀಲ್ ಫಾರ್ಮಾಸ್ಯೂಟಿಕಲ್ಸ್ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ಸಹ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಿಂಟು ಪಟೇಲ್ ಅವರೊಂದಿಗೆ ಚರ್ಚೆ ನಡೆಯಿತು.
ಇದೇ ವೇಳೆ ಮಾಸ್ಟರ್ಕಾರ್ಡ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೈಕೆಲ್ ಮೀಬ್ಯಾಕ್ ಅವರೊಂದಿಗೆ ಡಿಜಿಟಲ್ ವಾಣಿಜ್ಯ, ಡಿಜಿಟಲ್ ಭದ್ರತೆ ಹಾಗೂ ಹೊಸ ತಲೆಮಾರಿನ ಪಾವತಿ ವ್ಯವಸ್ಥೆಗಳ ಕುರಿತು ಸಹಕಾರ ವಿಸ್ತರಣೆ ಬಗ್ಗೆ ಚರ್ಚಿಸಲಾಯಿತು.
ಹೂಡಿಕೆದಾರರ ವಿಶ್ವಾಸ, ವ್ಯವಹಾರ ಸ್ಥಿರತೆ ಹಾಗೂ ಬಲಿಷ್ಠ ನಿಯಂತ್ರಣಾತ್ಮಕ ವಾತಾವರಣ ಭಾರತ ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದಕ್ಕೂ ಮೊದಲು ಮೇ 25ರಿಂದ 27ರವರೆಗೆ ಪಿಯೂಷ್ ಗೋಯಲ್ ನೇತೃತ್ವದ 150ಕ್ಕೂ ಹೆಚ್ಚು ಸದಸ್ಯರ ವ್ಯಾಪಾರ ಪ್ರತಿನಿಧಿ ಮಂಡಳಿ ಕೆನಡಾ ಪ್ರವಾಸ ಕೈಗೊಂಡಿತ್ತು. ಹೂಡಿಕೆ ಆಕರ್ಷಣೆ, ವ್ಯಾಪಾರ ಸಹಕಾರ ಮತ್ತು ಮುಕ್ತ ವ್ಯಾಪಾರ ಒಪ್ಪಂದಕ್ಕೆ ವೇಗ ನೀಡುವ ಉದ್ದೇಶದಿಂದ ಈ ಭೇಟಿ ನಡೆದಿತ್ತು.
ಜೂನ್ 1ರಿಂದ 4ರವರೆಗೆ ಅಮೆರಿಕದ ಪ್ರತಿನಿಧಿ ಮಂಡಳಿ ನವದೆಹಲಿಗೆ ಭೇಟಿ ನೀಡಲಿದ್ದು, ಮಧ್ಯಂತರ ವ್ಯಾಪಾರ ಒಪ್ಪಂದದ ಕರಡು ಅಂತಿಮಗೊಳ್ಳುವ ಸಾಧ್ಯತೆ ಇದೆ. ಮಾರುಕಟ್ಟೆ ಪ್ರವೇಶ, ಸುಂಕೇತರ ಕ್ರಮಗಳು ಹಾಗೂ ಗಡಿ ಸುಗಮತೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತ ಮಾತುಕತೆ ಮುಂದುವರಿಯಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.