
ಬೆಂಗಳೂರು, 29 ಮೇ (ಹಿ.ಸ.) :
ಆ್ಯಂಕರ್ : ಬೆಂಗಳೂರು ನಗರದಲ್ಲಿ ಶುಕ್ರವಾರ ಸಂಜೆ ಏಕಾಏಕಿ ಸುರಿದ ಗುಡುಗು-ಮಿಂಚು ಸಹಿತ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲಸ ಮುಗಿಸಿ ಮನೆಗಳಿಗೆ ತೆರಳುತ್ತಿದ್ದ ವಾಹನ ಸವಾರರು ಟ್ರಾಫಿಕ್ ಜಾಮ್ ಹಾಗೂ ಜಲಾವೃತ ರಸ್ತೆಗಳ ನಡುವೆ ಪರದಾಡುವಂತಾಯಿತು.
ಸದಾಶಿವನಗರ, ಮೆಖ್ರಿ ಸರ್ಕಲ್, ಮೆಜೆಸ್ಟಿಕ್, ಶೇಷಾದ್ರಿಪುರಂ, ರೇಸ್ ಕೋರ್ಸ್, ರಾಜಾಜಿನಗರ, ಮಲ್ಲೇಶ್ವರಂ, ಶಿವಾಜಿನಗರ ಹಾಗೂ ವಸಂತನಗರ ಭಾಗಗಳಲ್ಲಿ ಜೋರಾಗಿ ಮಳೆಯಾಗಿದೆ. ಇದೇ ವೇಳೆ ಕಾರ್ಪೋರೇಶನ್ ವೃತ್ತ, ಕೆಆರ್ ಮಾರ್ಕೆಟ್, ಯುಬಿ ಸಿಟಿ, ರಿಚ್ಮಂಡ್ ಸರ್ಕಲ್, ಶಿವಾನಂದ ಸರ್ಕಲ್, ಜಯನಗರ, ಪ್ಯಾಲೇಸ್ ಗುಟ್ಟಹಳ್ಳಿ, ಲಾಲ್ಬಾಗ್, ಜೆಪಿ ನಗರ, ಬನ್ನೇರುಘಟ್ಟ ರಸ್ತೆ, ಯಶವಂತಪುರ ಹಾಗೂ ವಿಜಯನಗರ ಭಾಗಗಳಲ್ಲೂ ಮಳೆ ಸುರಿದಿದೆ.
ಮಳೆಯಿಂದಾಗಿ ಶೇಷಾದ್ರಿಪುರಂ ಮುಖ್ಯ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆ ಮೇಲೆ ನೀರು ಹರಿಯುತ್ತಿರುವ ದೃಶ್ಯ ಕಂಡು ಬಂದಿದೆ. ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರೋಡ್ ಹಾಗೂ ಶಿವಾನಂದ ಸರ್ಕಲ್ ಅಂಡರ್ಪಾಸ್ನಲ್ಲಿ ಮಳೆ ನೀರು ತುಂಬಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪರಿಣಾಮ ಶಿವಾನಂದ ಸರ್ಕಲ್ ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್ ನಿರ್ಮಾಣವಾಗಿದೆ.
ಮಳೆಯ ತೀವ್ರತೆಗೆ ಹಲವೆಡೆ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿದರೆ, ದ್ವಿಚಕ್ರ ವಾಹನ ಸವಾರರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತಾಯಿತು. ಕಚೇರಿಗಳಿಂದ ಮನೆಗಳಿಗೆ ತೆರಳುತ್ತಿದ್ದ ಸಾರ್ವಜನಿಕರು ಮಳೆ ಮತ್ತು ಟ್ರಾಫಿಕ್ನಿಂದ ಸಂಕಷ್ಟ ಅನುಭವಿಸಿದರು.
ಹವಾಮಾನ ಇಲಾಖೆ ಮುಂದಿನ ಮೂರು ಗಂಟೆಗಳ ಕಾಲ ನಗರದಲ್ಲಿ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಸಂಚರಿಸದಂತೆ ಹಾಗೂ ಜಲಾವೃತ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.