ಅಂಗಾಂಶ ಕೃಷಿ ಬಾಳೆ ಬೇಸಾಯ’ಕ್ಕೆ ರೈತರು ಮುಂದಾಗಲಿ : ತೋಟಗಾರಿಕೆ ಇಲಾಖೆ ಕರೆ
ಗದಗ, 29 ಮೇ (ಹಿ.ಸ.) : ಆ್ಯಂಕರ್ : ರಾಜ್ಯದಲ್ಲಿ ಬಾಳೆ ಬೆಳೆಯ ಉತ್ಪಾದಕತೆ ಹೆಚ್ಚಿಸುವ ಹಾಗೂ ರೈತರ ಆದಾಯ ವೃದ್ಧಿಸುವ ಉದ್ದೇಶದಿಂದ ಸಾಂಪ್ರದಾಯಿಕ ಬಾಳೆ ಕಂದುಗಳ ಬದಲಿಗೆ ವೈಜ್ಞಾನಿಕ ತಂತ್ರಜ್ಞಾನದ ಅಂಗಾಂಶ ಕೃಷಿ (ಟಿಶ್ಯೂ ಕಲ್ಚರ್) ಬಾಳೆ ಸಸಿಗಳನ್ನು ಬಳಸುವಂತೆ ತೋಟಗಾರಿಕೆ ಇಲಾಖೆ ರೈತರಿಗೆ ಕರೆ ನೀಡಿದ
ಫೋಟೋ


ಗದಗ, 29 ಮೇ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿ ಬಾಳೆ ಬೆಳೆಯ ಉತ್ಪಾದಕತೆ ಹೆಚ್ಚಿಸುವ ಹಾಗೂ ರೈತರ ಆದಾಯ ವೃದ್ಧಿಸುವ ಉದ್ದೇಶದಿಂದ ಸಾಂಪ್ರದಾಯಿಕ ಬಾಳೆ ಕಂದುಗಳ ಬದಲಿಗೆ ವೈಜ್ಞಾನಿಕ ತಂತ್ರಜ್ಞಾನದ ಅಂಗಾಂಶ ಕೃಷಿ (ಟಿಶ್ಯೂ ಕಲ್ಚರ್) ಬಾಳೆ ಸಸಿಗಳನ್ನು ಬಳಸುವಂತೆ ತೋಟಗಾರಿಕೆ ಇಲಾಖೆ ರೈತರಿಗೆ ಕರೆ ನೀಡಿದೆ.

ದೇಶದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಬಾಳೆ ಬೆಳೆಗೂ ಪ್ರಮುಖ ಸ್ಥಾನವಿದೆ. ಭಾರತದಲ್ಲಿ ವಾರ್ಷಿಕವಾಗಿ ಸುಮಾರು 9 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆ ಬೆಳೆಯಲಾಗುತ್ತಿದ್ದು, ಸುಮಾರು 383 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಆಗುತ್ತಿದೆ. ದೇಶದಲ್ಲಿ ಪ್ರತಿ ಹೆಕ್ಟೇರ್ಗೆ ಸರಾಸರಿ 42 ಮೆಟ್ರಿಕ್ ಟನ್ ಉತ್ಪಾದಕತೆ ದಾಖಲಾಗಿದ್ದರೂ, ಕರ್ನಾಟಕದಲ್ಲಿ ಮಾತ್ರ 46 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೇವಲ 12 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಆಗುತ್ತಿದ್ದು, ಪ್ರತಿ ಹೆಕ್ಟೇರ್ಗೆ ಕೇವಲ 26 ಮೆಟ್ರಿಕ್ ಟನ್ ಉತ್ಪಾದಕತೆ ಮಾತ್ರ ದಾಖಲಾಗುತ್ತಿದೆ.

ರಾಜ್ಯದ ಬಾಳೆ ಉತ್ಪಾದನೆ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿರುವುದು ಆತಂಕದ ಸಂಗತಿಯಾಗಿದ್ದು, ರೈತರು ಇನ್ನೂ ಸಾಂಪ್ರದಾಯಿಕ ಬಾಳೆ ಕಂದುಗಳನ್ನು ಬಳಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಇಲಾಖೆ ತಿಳಿಸಿದೆ.

ರೈತರಲ್ಲಿ ವೈಜ್ಞಾನಿಕ ಕೃಷಿ ವಿಧಾನಗಳ ಕುರಿತು ಸಮರ್ಪಕ ಮಾಹಿತಿ ಕೊರತೆಯಿರುವುದರಿಂದ ಹಳೆಯ ಪದ್ಧತಿಗಳೇ ಮುಂದುವರಿದಿವೆ. ಈ ಹಿನ್ನೆಲೆ ಅಂಗಾಂಶ ಕೃಷಿ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಹೆಚ್ಚಿನ ಇಳುವರಿ, ಗುಣಮಟ್ಟದ ಹಣ್ಣುಗಳು ಹಾಗೂ ದೀರ್ಘಾವಧಿಯ ಆರ್ಥಿಕ ಲಾಭ ಪಡೆಯಬಹುದು ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

ರೋಗರಹಿತ ಹಾಗೂ ಆರೋಗ್ಯಕರ ಗಿಡಗಳು

ಸಾಂಪ್ರದಾಯಿಕ ಬಾಳೆ ಕಂದುಗಳಲ್ಲಿ ರೋಗ ಮತ್ತು ಕೀಟಗಳು ವೇಗವಾಗಿ ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ. ಒಂದು ಗಿಡದಲ್ಲಿ ಕಾಣಿಸಿಕೊಳ್ಳುವ ರೋಗ ಇಡೀ ತೋಟಕ್ಕೆ ವ್ಯಾಪಿಸುವ ಅಪಾಯವೂ ಹೆಚ್ಚಾಗಿರುತ್ತದೆ. ಆದರೆ ಅಂಗಾಂಶ ಕೃಷಿ ಬಾಳೆ ಸಸಿಗಳು ಪ್ರಯೋಗಾಲಯದ ನಿಯಂತ್ರಿತ ವಾತಾವರಣದಲ್ಲಿ ವೈಜ್ಞಾನಿಕ ವಿಧಾನದಲ್ಲಿ ಸಿದ್ಧಪಡಿಸಲಾಗುವುದರಿಂದ ಅವು ಸಂಪೂರ್ಣ ರೋಗರಹಿತ ಮತ್ತು ಆರೋಗ್ಯಕರವಾಗಿರುತ್ತವೆ.

ಈ ಸಸಿಗಳ ಜೀವಂತಿಕೆ ಪ್ರಮಾಣವೂ ಹೆಚ್ಚು ಇರುವುದರಿಂದ ರೈತರಿಗೆ ಉತ್ತಮ ಬೆಳವಣಿಗೆಯ ಭರವಸೆ ದೊರೆಯುತ್ತದೆ. ಸಾಂಪ್ರದಾಯಿಕ ಕಂದುಗಳಲ್ಲಿ ಕಂಡುಬರುವ ಗಿಡಗಳ ಬದುಕುಳಿಯುವ ಸಮಸ್ಯೆ ಅಂಗಾಂಶ ಕೃಷಿಯಲ್ಲಿ ಬಹುತೇಕ ಕಾಣಿಸದು ಎಂದು ಇಲಾಖೆ ವಿವರಿಸಿದೆ.

ಏಕರೂಪ ಬೆಳವಣಿಗೆ – ಒಂದೇ ಸಮಯದಲ್ಲಿ ಕೊಯ್ಲು ಸಾಮಾನ್ಯವಾಗಿ ಸಾಂಪ್ರದಾಯಿಕ ಬಾಳೆ ಕಂದುಗಳನ್ನು ನಾಟಿ ಮಾಡಿದಾಗ ತೋಟದ ಎಲ್ಲಾ ಗಿಡಗಳು ಒಂದೇ ರೀತಿಯಲ್ಲಿ ಬೆಳೆಯುವುದಿಲ್ಲ. ಕೆಲವು ಗಿಡಗಳು ವೇಗವಾಗಿ ಬೆಳೆಯುವುದಾದರೆ, ಕೆಲವು ಹಿಂದುಳಿಯುತ್ತವೆ. ಇದರಿಂದ ಕೊಯ್ಲು ಬೇರೆ ಬೇರೆ ಸಮಯದಲ್ಲಿ ನಡೆಯಬೇಕಾಗಿ ಬಂದು ಮಾರುಕಟ್ಟೆ ನಿರ್ವಹಣೆ ಕಷ್ಟಕರವಾಗುತ್ತದೆ.

ಆದರೆ ಅಂಗಾಂಶ ಕೃಷಿ ಬಾಳೆ ಸಸಿಗಳು ಒಂದೇ ಸಮನಾಗಿ ಮತ್ತು ಏಕರೂಪವಾಗಿ ಬೆಳೆಯುತ್ತವೆ. ಇದರ ಪರಿಣಾಮ ಇಡೀ ತೋಟದ ಬೆಳೆ ಒಂದೇ ಸಮಯದಲ್ಲಿ ಕೊಯ್ಲಿಗೆ ಬರುವುದರಿಂದ ರೈತರು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಸುಲಭವಾಗಿ ಮಾರಾಟ ಮಾಡಬಹುದು.

ಹೆಚ್ಚಿನ ಇಳುವರಿ – ಉತ್ತಮ ಗುಣಮಟ್ಟದ ಹಣ್ಣು

ಅಂಗಾಂಶ ಕೃಷಿ ಬಾಳೆ ಬೇಸಾಯದ ಪ್ರಮುಖ ಲಾಭಗಳಲ್ಲಿ ಒಂದು ಹೆಚ್ಚಿನ ಹಾಗೂ ಸ್ಥಿರವಾದ ಇಳುವರಿ. ಈ ವಿಧಾನದಲ್ಲಿ ಬೆಳೆಯುವ ಹಣ್ಣುಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಒಂದೇ ರೀತಿಯ ಆಕಾರ ಹಾಗೂ ಉತ್ತಮ ಗುಣಮಟ್ಟ ಹೊಂದಿರುತ್ತವೆ. ಮಾರುಕಟ್ಟೆಯಲ್ಲಿ ಇಂತಹ ಹಣ್ಣುಗಳಿಗೆ ಉತ್ತಮ ಬೇಡಿಕೆ ಹಾಗೂ ಉತ್ತಮ ಬೆಲೆ ದೊರೆಯುವ ಸಾಧ್ಯತೆ ಹೆಚ್ಚಿರುತ್ತದೆ.

ಇದಕ್ಕೆ ವಿರುದ್ಧವಾಗಿ ಸಾಂಪ್ರದಾಯಿಕ ಕಂದುಗಳಲ್ಲಿ ಇಳುವರಿ ಅಸ್ಥಿರವಾಗಿರುತ್ತದೆ. ಹಣ್ಣುಗಳ ಗಾತ್ರ, ಗುಣಮಟ್ಟ ಹಾಗೂ ಉತ್ಪಾದನೆಯಲ್ಲಿ ವ್ಯತ್ಯಾಸ ಕಂಡುಬರುವುದರಿಂದ ರೈತರಿಗೆ ನಿರೀಕ್ಷಿತ ಆದಾಯ ದೊರೆಯದ ಸಂದರ್ಭಗಳು ಎದುರಾಗುತ್ತವೆ.

ನೀರು, ಗೊಬ್ಬರ ಬಳಕೆಯಲ್ಲಿ ಉಳಿತಾಯ

ಸಾಂಪ್ರದಾಯಿಕ ಬಾಳೆ ಬೇಸಾಯದಲ್ಲಿ ನೀರು ಮತ್ತು ಗೊಬ್ಬರ ಬಳಕೆಯು ಹೆಚ್ಚು ಆಗುವ ಸಾಧ್ಯತೆ ಇದೆ. ಜೊತೆಗೆ ರೋಗ ನಿರ್ವಹಣೆಗಾಗಿ ಹೆಚ್ಚುವರಿ ವೆಚ್ಚ ಹಾಗೂ ಶ್ರಮವೂ ಬೇಕಾಗುತ್ತದೆ. ಆದರೆ ಅಂಗಾಂಶ ಕೃಷಿ ಸಸಿಗಳಲ್ಲಿ ನೀರು ಮತ್ತು ಗೊಬ್ಬರವನ್ನು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ.

ರೋಗದ ಪ್ರಮಾಣ ಕಡಿಮೆ ಇರುವುದರಿಂದ ನಿರ್ವಹಣೆಯೂ ಸುಲಭವಾಗುತ್ತದೆ. ಇದರಿಂದ ರೈತರ ಕೃಷಿ ವೆಚ್ಚದಲ್ಲಿ ಕಡಿತವಾಗುವುದರ ಜೊತೆಗೆ ಉತ್ಪಾದಕತೆ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಇಲಾಖೆ ತಿಳಿಸಿದೆ.

ಆರಂಭಿಕ ವೆಚ್ಚ ಹೆಚ್ಚು, ಆದರೆ ದೀರ್ಘಾವಧಿ ಲಾಭ ಅಧಿಕ

ಅಂಗಾಂಶ ಕೃಷಿ ಸಸಿಗಳ ಆರಂಭಿಕ ಖರೀದಿ ವೆಚ್ಚ ಸಾಂಪ್ರದಾಯಿಕ ಬಾಳೆ ಕಂದುಗಳಿಗಿಂತ ಸ್ವಲ್ಪ ಹೆಚ್ಚಿರಬಹುದು. ಆದರೆ ದೀರ್ಘಾವಧಿಯಲ್ಲಿ ನೋಡಿದರೆ ರೈತರಿಗೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ಇಲಾಖೆ ತಿಳಿಸಿದೆ.

ಸಾಂಪ್ರದಾಯಿಕ ಪದ್ಧತಿಯಲ್ಲಿ ಮಣ್ಣಿನಲ್ಲಿ ರೋಗ ಸಂಗ್ರಹವಾಗುವ ಸಾಧ್ಯತೆ ಹೆಚ್ಚಿದ್ದು, ಕಾರ್ಮಿಕ ನಿರ್ವಹಣಾ ವೆಚ್ಚವೂ ಅಧಿಕವಾಗುತ್ತದೆ. ಇದರಿಂದ ಲಾಭದಲ್ಲಿ ಅಸ್ಥಿರತೆ ಉಂಟಾಗುತ್ತದೆ. ಆದರೆ ಅಂಗಾಂಶ ಕೃಷಿ ವಿಧಾನದಲ್ಲಿ ಸುಲಭ ನಿರ್ವಹಣೆ, ಕಡಿಮೆ ಕಾರ್ಮಿಕ ವೆಚ್ಚ, ಉತ್ತಮ ಗುಣಮಟ್ಟದ ಹಣ್ಣು ಹಾಗೂ ಉತ್ತಮ ಮಾರುಕಟ್ಟೆ ಬೆಲೆ ಸಿಗುವುದರಿಂದ ರೈತರಿಗೆ ಹೆಚ್ಚು ಆದಾಯ ಲಭ್ಯವಾಗುತ್ತದೆ.

ಅಂಗಾಂಶ ಕೃಷಿ ಬಾಳೆ ಸಸಿಗಳ ದರ ಪ್ರಕಟ

ತೋಟಗಾರಿಕೆ ಇಲಾಖೆ ವಿವಿಧ ಹಂತದ ಅಂಗಾಂಶ ಕೃಷಿ ಬಾಳೆ ಸಸಿಗಳ ದರಗಳನ್ನು ಸಹ ಪ್ರಕಟಿಸಿದೆ.

ಎಕ್ಸ್ ಅಗಾರ್ ಹಂತದ ಸಸಿ – ಪ್ರತಿ ಸಸಿಗೆ ರೂ.6

98 ಕ್ಯಾವಿಟಿಯ ಪ್ರೋಟ್ರೇ ಸಸಿ – ಪ್ರತಿ ಸಸಿಗೆ ರೂ.7

4×6 ಪಾಲಿಬ್ಯಾಗ್ ಸಸಿ – ಪ್ರತಿ ಸಸಿಗೆ ರೂ.12

ರೈತರು ಖಾಸಗಿ ವ್ಯಕ್ತಿಗಳಿಂದ ವಂಚನೆಗೆ ಒಳಗಾಗದೆ, ಇಲಾಖೆಯ ಅಧಿಕೃತ ಹಾಗೂ ವಿಶ್ವಾಸಾರ್ಹ ಮೂಲಗಳಿಂದಲೇ ಸಸಿಗಳನ್ನು ಖರೀದಿಸುವಂತೆ ಮನವಿ ಮಾಡಲಾಗಿದೆ.

ಉತ್ತಮ ಗುಣಮಟ್ಟದ, ರೋಗರಹಿತ ಅಂಗಾಂಶ ಕೃಷಿ ಬಾಳೆ ಸಸಿಗಳನ್ನು ಬೆಂಗಳೂರಿನ ಹುಳಿಮಾವಿನಲ್ಲಿರುವ ಜೈವಿಕ ಕೇಂದ್ರದಲ್ಲಿ, ರಾಯಲ್ ಮೀನಾಕ್ಷಿ ಮಾಲ್ ಎದುರಿನಿಂದ ನ್ಯಾಯೋಚಿತ ದರದಲ್ಲಿ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ರೈತರು ಇಲಾಖೆಯ ಅಧಿಕಾರಿಗಳನ್ನು 7975736459 ಅಥವಾ 9880234281 ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande