ಬೀಜೋಪಚಾರ ನಿರ್ಲಕ್ಷಿಸಬೇಡಿ; ಉತ್ತಮ ಇಳುವರಿಗೆ ವೈಜ್ಞಾನಿಕ ಕೃಷಿ ಅಗತ್ಯ : ಐ.ಎಸ್. ಪಾಟೀಲ
ಗದಗ, 29 ಮೇ (ಹಿ.ಸ.) : ಆ್ಯಂಕರ್ : ಮುಂಗಾರು ಬಿತ್ತನೆ ಸಂದರ್ಭದಲ್ಲಿ ರೈತರು ಯಾವುದೇ ಕಾರಣಕ್ಕೂ ಬೀಜೋಪಚಾರವನ್ನು ನಿರ್ಲಕ್ಷಿಸಬಾರದು. ಬೀಜೋಪಚಾರ ಮಾಡಿದರೆ ಬೆಳೆಗಳಿಗೆ ರೋಗಬಾಧೆ ಕಡಿಮೆಯಾಗುವುದರ ಜೊತೆಗೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.
ಫೋಟೋ


ಗದಗ, 29 ಮೇ (ಹಿ.ಸ.) :

ಆ್ಯಂಕರ್ : ಮುಂಗಾರು ಬಿತ್ತನೆ ಸಂದರ್ಭದಲ್ಲಿ ರೈತರು ಯಾವುದೇ ಕಾರಣಕ್ಕೂ ಬೀಜೋಪಚಾರವನ್ನು ನಿರ್ಲಕ್ಷಿಸಬಾರದು. ಬೀಜೋಪಚಾರ ಮಾಡಿದರೆ ಬೆಳೆಗಳಿಗೆ ರೋಗಬಾಧೆ ಕಡಿಮೆಯಾಗುವುದರ ಜೊತೆಗೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ ಹೇಳಿದರು.

ಗದಗ ಜಿಲ್ಲೆ ರೋಣ ಪಟ್ಟಣದ ಬಸ್ ನಿಲ್ದಾಣ ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ಆಯೋಜಿಸಿದ್ದ ರಿಯಾಯಿತಿ ದರದ ಮುಂಗಾರು ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಬಾರಿ ಮುಂಗಾರು ಪೂರ್ವ ಉತ್ತಮ ಮಳೆಯಾಗಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ. ಈಗಾಗಲೇ ರೈತರು ಜಮೀನುಗಳನ್ನು ಹದಗೊಳಿಸಿ ರೋಹಿಣಿ ಮಳೆಯ ನಿರೀಕ್ಷೆಯಲ್ಲಿದ್ದು, ಕೃಷಿ ಇಲಾಖೆಯೂ ಬಿತ್ತನೆ ಬೀಜ ವಿತರಣೆಗೆ ಸಜ್ಜಾಗಿದೆ ಎಂದು ತಿಳಿಸಿದರು.

ರೈತರು ಸಾವಯವ ಗೊಬ್ಬರ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಾವಯವ ಗೊಬ್ಬರ ಬಳಕೆಯಿಂದ ಜಮೀನಿನ ಫಲವತ್ತತೆ ಹೆಚ್ಚುವುದರ ಜೊತೆಗೆ ಉತ್ತಮ ಗುಣಮಟ್ಟದ ಬೆಳೆ ಪಡೆಯಲು ಸಾಧ್ಯವಾಗುತ್ತದೆ. ರೈತರು ವೈಜ್ಞಾನಿಕ ಕೃಷಿ ಪದ್ಧತಿಗಳತ್ತ ಹೆಚ್ಚಿನ ಗಮನ ಹರಿಸುವುದು ಅಗತ್ಯ ಎಂದು ಸಲಹೆ ನೀಡಿದರು.

“ಬೀಜೋಪಚಾರ ಮಾಡಿದರೆ ಬೆಳೆಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸಾವಯವ ಗೊಬ್ಬರ ಬಳಕೆಯಿಂದ ಜಮೀನಿನ ಫಲವತ್ತತೆ ಕಾಪಾಡಬಹುದು. ರೈತರು ಆಧುನಿಕ ಹಾಗೂ ವೈಜ್ಞಾನಿಕ ಕೃಷಿ ಕ್ರಮಗಳನ್ನು ಅನುಸರಿಸಬೇಕು” ಎಂದು ಐ.ಎಸ್. ಪಾಟೀಲ ಹೇಳಿದರು.

ಇದೇ ವೇಳೆ ಕೃಷಿ ಇಲಾಖೆಯ ಅಧಿಕಾರಿಗಳು ಬಿತ್ತನೆ ಬೀಜಗಳ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕೃಷಿ ಇಲಾಖೆಯ ಉಪನಿರ್ದೇಶಕ ಪಾಲಾಕ್ಷಗೌಡ ಮಾತನಾಡಿ, ತಾಲೂಕಿನಲ್ಲಿ ಸುಮಾರು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬೆಳೆ ಬಿತ್ತನೆಯಾಗುವ ನಿರೀಕ್ಷೆ ಇದ್ದು, ಬೀಜ ಹಾಗೂ ರಸಗೊಬ್ಬರ ವಿತರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿರುವುದರಿಂದ ಜಮೀನಿನ ತೇವಾಂಶ ಹಾಗೂ ತಂಪು ಉಳಿಯಲು ಸಹಕಾರಿಯಾಗಿದೆ. ರೈತರು ಗದ್ದಲ ಸೃಷ್ಟಿಸದೇ ಸಮರ್ಪಕವಾಗಿ ಬೀಜಗಳನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಮಾಧ್ಯಮಗಳಿಗೆ ಮಾಹಿತಿ ನೀಡದೆ ಕಾರ್ಯಕ್ರಮ?

ರೈತರಿಗೆ ನೇರವಾಗಿ ಸಂಬಂಧಿಸಿದ ಮಹತ್ವದ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದ ಬಗ್ಗೆ ಮಾಧ್ಯಮಗಳಿಗೆ ಪೂರ್ವ ಮಾಹಿತಿ ನೀಡದೆ ಕಾರ್ಯಕ್ರಮ ನಡೆಸಿರುವುದು ಚರ್ಚೆಗೆ ಕಾರಣವಾಗಿದೆ.

ರೋಣ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲವೇ ರೈತರ ಸಮ್ಮುಖದಲ್ಲಿ ಬೀಜ ವಿತರಣೆಗೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕ ಮಾಹಿತಿ ಹಂಚಿಕೆಯಲ್ಲಿ ಕೃಷಿ ಇಲಾಖೆ ನಿರ್ಲಕ್ಷ್ಯ ತೋರಿದೆಯೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ಈ ಕುರಿತು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಎಫ್. ತಹಶೀಲ್ದಾರರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ ಎನ್ನಲಾಗಿದೆ.

ಕಾರ್ಯಕ್ರಮದಲ್ಲಿ ಯಚ್ಚರಗೌಡ ಗೋವಿಂದಗೌಡ್ರ, ಬಸವರಾಜ ನವಲಗುಂದ, ಶಿವಪ್ಪ ಅರಹುಣಸಿ, ಸಂಜಯ ದೊಡ್ಡಮನಿ, ಎಸ್.ಎಫ್. ತಹಶೀಲ್ದಾರ ಸೇರಿದಂತೆ ರೈತರು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಇದೇ ವೇಳೆ ಐ.ಎಸ್. ಪಾಟೀಲ ಅವರು ರೈತರಿಗೆ ಸಾಂಕೇತಿಕವಾಗಿ ಬಿತ್ತನೆ ಬೀಜ ವಿತರಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande