
ಗದಗ, 29 ಮೇ (ಹಿ.ಸ.) :
ಆ್ಯಂಕರ್ : ರಾಜ್ಯ ರಾಜಕೀಯ ವಿದ್ಯಮಾನಗಳ ನಡುವೆ ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಸ್ಥಾನಾರೋಹಣದ ವಿಚಾರ ಈಗ ರಾಜಕೀಯ ವಲಯದ ಜೊತೆಗೆ ಧಾರ್ಮಿಕ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಪ್ರಸಿದ್ಧ ಮುಕ್ತಿ ಮಂದಿರಕ್ಕೆ ಡಿಕೆ ಶಿವಕುಮಾರ್ ಭೇಟಿ ನೀಡಿ ವಿಶೇಷ ಪೂಜೆ, ಧ್ಯಾನ, ಜಪ, ತಪ ನಡೆಸಿ ಸಂಕಲ್ಪ ಮಾಡಿದ ಸುಮಾರು 40 ದಿನಗಳಲ್ಲೇ ಮುಖ್ಯಮಂತ್ರಿ ಪಟ್ಟ ಒಲಿದಿದೆ ಎಂಬ ಮಾತುಗಳು ಅವರ ಬೆಂಬಲಿಗರು ಹಾಗೂ ಭಕ್ತರ ವಲಯದಲ್ಲಿ ಕೇಳಿ ಬರುತ್ತಿವೆ.
ಕಳೆದ ಏಪ್ರಿಲ್ 19 ರಂದು ಯಾವುದೇ ಮುನ್ಸೂಚನೆ ಅಥವಾ ಸಾರ್ವಜನಿಕ ಮಾಹಿತಿ ನೀಡದೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಗುಪ್ತವಾಗಿ ಮುಕ್ತಿ ಮಂದಿರಕ್ಕೆ ಭೇಟಿ ನೀಡಿದ್ದರು ಎಂದು ತಿಳಿದು ಬಂದಿದೆ. ಮುಕ್ತಿ ಮಂದಿರದ ಲಿಂಗೈಕ್ಯ ವೀರ ಗಂಗಾಧರ ಮಹಾಸ್ವಾಮಿಗಳ ಕರ್ತೃಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದ ಅವರು, ದೀರ್ಘಕಾಲ ಧ್ಯಾನ, ಜಪ ಹಾಗೂ ತಪದಲ್ಲಿ ತೊಡಗಿದ್ದರು.
ಈ ವೇಳೆ ಗರ್ಭಗುಡಿಗೆ ಮಾಧ್ಯಮ ಪ್ರತಿನಿಧಿಗಳು ಹಾಗೂ ಹಲವು ಮುಖಂಡರಿಗೆ ಪ್ರವೇಶ ನೀಡದೆ ವಿಶೇಷ ಪೂಜಾ ವಿಧಾನಗಳನ್ನು ನೆರವೇರಿಸಲಾಗಿತ್ತು. ಮುಕ್ತಿಮಂದಿರದ ವಿಮಲರೇಣುಕಾ ವೀರಮುಕ್ತಿ ಮುನಿ ಶಿವಾಚಾರ್ಯರು ಹಾಗೂ ಅರ್ಚಕರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಭೇಟಿ ವೇಳೆ ಮುಕ್ತಿ ಮಂದಿರಕ್ಕೆ ಪೊಲೀಸ್ ಭದ್ರತೆಯನ್ನೂ ಒದಗಿಸಲಾಗಿತ್ತು.
ಡಿ.ಕೆ. ಶಿವಕುಮಾರ್ ಅವರಿಗೆ ರಂಭಾಪೂರಿ ಪೀಠದ ವೀರ ಗಂಗಾಧರ ಶಿವಾಚಾರ್ಯರ ಮೇಲೆ ಅಪಾರ ಭಕ್ತಿ ಇದ್ದು, ತಮ್ಮ ರಾಜಕೀಯ ಬದುಕಿನ ಅನೇಕ ಮಹತ್ವದ ಕ್ಷಣಗಳಲ್ಲಿ ಆಧ್ಯಾತ್ಮಿಕ ಮಾರ್ಗದರ್ಶನವನ್ನು ಸ್ಮರಿಸುತ್ತಾರೆ “ಏನೇ ಸವಾಲು ಬಂದರೂ ನಮ್ಮ ಅಜ್ಜಯ್ಯ ನಮ್ಮ ಜೊತೆ ಇದ್ದಾರೆ” ಎಂಬ ವಿಶ್ವಾಸದೊಂದಿಗೆ ಅವರು ಹೆಜ್ಜೆ ಇಡುತ್ತಿದ್ದರು ಎಂಬುದು ಅವರ ಆಪ್ತ ವಲಯದ ಮಾತು.
ರಾಜ್ಯದ ವಿವಿಧ ಮಠ, ಮಂದಿರ ಹಾಗೂ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದನ್ನು ತಮ್ಮ ನಿತ್ಯ ಆಚರಣೆಯ ಭಾಗವಾಗಿಸಿಕೊಂಡಿರುವ ಡಿಕೆ ಶಿವಕುಮಾರ್ ಅವರು ಮುಕ್ತಿ ಮಂದಿರದಲ್ಲಿಯೂ ಸುಮಾರು ಎರಡು ಗಂಟೆಗಳ ಕಾಲ ರುದ್ರಾಭಿಷೇಕ, ಅಷ್ಟಮಂಗಲೋತ್ರ ಸೇರಿದಂತೆ ವಿವಿಧ ಅಭಿಷೇಕ ಹಾಗೂ ಮಹಾಮಂಗಳಾರತಿ ನೆರವೇರಿಸಿದ್ದರು ಎನ್ನಲಾಗಿದೆ. ಬಳಿಕ ಕರ್ತೃಗದ್ದುಗೆಯ ಮುಂದೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಧ್ಯಾನಮಗ್ನರಾಗಿ ಪ್ರಾರ್ಥನೆ ಸಲ್ಲಿಸಿದ್ದರು.
ಇದರ ಮಧ್ಯೆ ಗದಗ ಜಿಲ್ಲೆಯಲ್ಲೇ ಮತ್ತೊಂದು ವಿಚಾರವೂ ಈಗ ಚರ್ಚೆಗೆ ಕಾರಣವಾಗಿದೆ. ಹುಲಿಗೇಮ್ಮ ದೇವಿಯ ಆರಾಧಕಿಯಾಗಿ ಪರಿಚಿತರಾಗಿರುವ ಗದಗ ನಗರದ ರಾಚೋಟೇಶ್ವರ ನಿವಾಸಿ ಬೈಲಮ್ಮ ಬಾಳಣ್ಣವರ ಅವರು ಕಳೆದ 2025ರ ನವೆಂಬರ್ 23ರಂದು ನೀಡಿದ್ದ ಭವಿಷ್ಯವಾಣಿ ಇದೀಗ ಮತ್ತೆ ಗಮನ ಸೆಳೆದಿದೆ. ಆ ಸಂದರ್ಭದಲ್ಲಿ ಮಾತನಾಡಿದ್ದ ಅವರು, “ಸಿದ್ದರಾಮಯ್ಯ ಅವರು ನಗುನಗುತ್ತಾ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡುತ್ತಾರೆ.
ನಂತರ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ. ಮುಂದಿನ ಅವಧಿಯಲ್ಲಿ ಸರ್ಕಾರವನ್ನು ಉತ್ತಮವಾಗಿ ಮುನ್ನಡೆಸುತ್ತಾರೆ. ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಅವರಿಗೆ ಮಾರ್ಗದರ್ಶನ ಮಾಡುತ್ತಾರೆ” ಎಂದು ಭವಿಷ್ಯ ನುಡಿದಿದ್ದರು.
ಈಗ ರಾಜಕೀಯ ವಿದ್ಯಮಾನಗಳು ಆ ದಿಕ್ಕಿನಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಬೈಲಮ್ಮ ಬಾಳಣ್ಣವರ ಭವಿಷ್ಯ ನಿಜವಾಯಿತೇ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳು ಹಾಗೂ ರಾಜಕೀಯ ವಲಯದಲ್ಲಿ ತೀವ್ರಗೊಂಡಿದೆ.
ಇನ್ನು ಕೆಲ ತಿಂಗಳುಗಳ ಹಿಂದೆಯೇ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ದೊರೆಯಬೇಕಿತ್ತು. ಆದರೆ ವಿವಿಧ ರಾಜಕೀಯ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ ಎನ್ನುವ ವಿಶ್ಲೇಷಣೆಗಳೂ ಕೇಳಿ ಬಂದಿದ್ದವು. ಇದೀಗ ಮುಖ್ಯಮಂತ್ರಿ ಸ್ಥಾನ ದೊರೆತಿರುವ ವಿದ್ಯಮಾನ ಅವರ ಬೆಂಬಲಿಗರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.
ಆಧ್ಯಾತ್ಮಿಕ ನಂಬಿಕೆ, ರಾಜಕೀಯ ಸಂಕಲ್ಪ ಹಾಗೂ ಭವಿಷ್ಯವಾಣಿಗಳ ನಡುವಿನ ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಮುಕ್ತಿ ಮಂದಿರದ ಭೇಟಿಯಿಂದ ಹಿಡಿದು ಬೈಲಮ್ಮ ಬಾಳಣ್ಣವರ ಭವಿಷ್ಯದವರೆಗೆ ಹಲವು ಸಂಗತಿಗಳು ಸಾರ್ವಜನಿಕ ಕುತೂಹಲವನ್ನು ಹೆಚ್ಚಿಸಿವೆ.
ಹಿಂದೂಸ್ತಾನ್ ಸಮಾಚಾರ್ / lalita MP