ಸಾಂಸ್ಕೃತಿಕ ಸಾರ್ವಭೌಮ ಡಾ. ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕರಿತೆ’ ಶ್ರೀಮತಿ ವೀಣಾ ಆದವಾನಿ
ಬಳ್ಳಾರಿ, 29 ಮೇ (ಹಿ.ಸ.) : ಆ್ಯಂಕರ್ : ಅರಮನೆಯ ಅಂಕದ ಪರದೆ ಮೇಲೇರಿದೊಡನೆ ಝಗಮಗಿಸುವ ಬೆಳಕಿನ ಆಸ್ಥಾನ ವೈಭವ.... ಗೆಜ್ಜೆ ಶಬ್ಧಗಳ ನಿನಾದದೊಡನೆ ಸುರಸುಂದರಿಯ ನೃತ್ಯ! ರಂಗ ಸ್ಥಳದಲ್ಲಿ ಅರಸು, ವಂದಿಮಾಗಧರೂ ಚಪ್ಪಾಳೆ ತಟ್ಟಿದಂತೆ ನೆರೆದಿರುವ ಪ್ರೇಕ್ಷಕರೂ ಖುಷ್!! ಇಂಥಹಾ ರಸಮಯ ಸನ್ನಿವೇಶಗಳಲ್ಲಿ ಬ
`ಸಾಂಸ್ಕøತಿಕ ಸಾರ್ವಭೌಮ ಡಾ. ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕರಿತೆ’ ಶ್ರೀಮತಿ ವೀಣಾ ಆದವಾನಿ


ಬಳ್ಳಾರಿ, 29 ಮೇ (ಹಿ.ಸ.) :

ಆ್ಯಂಕರ್ : ಅರಮನೆಯ ಅಂಕದ ಪರದೆ ಮೇಲೇರಿದೊಡನೆ ಝಗಮಗಿಸುವ ಬೆಳಕಿನ ಆಸ್ಥಾನ ವೈಭವ.... ಗೆಜ್ಜೆ ಶಬ್ಧಗಳ ನಿನಾದದೊಡನೆ ಸುರಸುಂದರಿಯ ನೃತ್ಯ! ರಂಗ ಸ್ಥಳದಲ್ಲಿ ಅರಸು, ವಂದಿಮಾಗಧರೂ ಚಪ್ಪಾಳೆ ತಟ್ಟಿದಂತೆ ನೆರೆದಿರುವ ಪ್ರೇಕ್ಷಕರೂ ಖುಷ್!!

ಇಂಥಹಾ ರಸಮಯ ಸನ್ನಿವೇಶಗಳಲ್ಲಿ ಬಾಲ್ಯದಿಂದಲೇ ನಾಟಕ ರಂಗಕ್ಕೆ ಬಂದು ನರ್ತಿಸುತ್ತಲೇ ಸುಶ್ರಾವ್ಯ ಗಾಯಕಿಯಾಗಿ, ತನ್ನದೇ ಆಸಕ್ತಿಯ ತಾದಾತ್ಮತೆಯಿಂದ ನಾಯಕಿ, ಖಳನಾಯಕಿ, ಹಾಸ್ಯ ನಟಿಯಾಗಿ ಈ 70 ವರ್ಷಗಳು ಮೀರಿದ ಪ್ರಾಯದಲ್ಲೂ ಬೇಡಿಕೆ ಇರಿಸಿಕೊಂಡಿರುವ ಬಳ್ಳಾರಿ ಗಡಿನಾಡು ಆದವಾನಿಯ ಅಪ್ಪಟ ಕನ್ನಡ ಕಲಾವಿದೆ ಶ್ರೀಮತಿ ಬಿ.ವೀಣಾ ಕುಮಾರಿ ಆದವಾನಿಯವರು.

ತಮ್ಮ ಬಾಲ್ಯದ 7ನೇ ವಯಸ್ಸಿನಲ್ಲಿಯೇ ‘ಅಣ್ಣ ತಮ್ಮ’ ನಾಟಕದ ಮೂಲಕ ರಂಗ ಪ್ರವೇಶ ಮಾಡಿದ ವೀಣಾಕುಮಾರಿ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳಲ್ಲಿ ಎಲ್ಲ ವಿಧದ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು ಇದುವರೆಗೂ ಸುಮಾರು 3,500ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಇವರು ಪಾತ್ರವಹಿಸಿದ್ದರೂ ಖ್ಯಾತಿಯ ಅಹಂ ತಲೆಗೇರಲು ಬಿಡದ ಸುವಿಖ್ಯಾತ ನಟಿ.

ಹಾಗೆಯೇ ಇತ್ತೀಚೆಗೆ ಕೊರೊನಾ ಕಾಲದಲ್ಲಿ ತೆರೆ ಹಿಂದೆ ಸರಿದ ನಾಡಿನ ಖ್ಯಾತ ಗಾಯಕಿ ಅನುಪಮ ಅಭಿನೇತ್ರಿ ಸುಭದ್ರಮ್ಮ ಮನ್ಸೂರು ಅವರ ಸ್ಥಾನವನ್ನು ಸುಲಲಿತವಾಗಿ ತುಂಬಿರುವುದು ಇವರ ನಟನೆಯ ಶ್ರದ್ಧೆಗೆ ಸಾಕ್ಷಿ.

ತಮಗೆ ಕಲಿಸಿದ ಗುರುಗಳ ಪ್ರೋತ್ಸಾಹಿಸಿದ ಹಿರಿಯ ಕಾಲವಿದರನ್ನು ಸದಾ ಸ್ಮರಿಸುವ ಇವರು ವರದರಾಜ್ ಅಯ್ಯಂಗಾರ್ ಅವರ ಬಳಿ ಭರತನಾಟ್ಯ, ನಟರಾಜ ಕೃಷ್ಣಮೂರ್ತಿ ಅವರ ಬಳಿ ಕೂಚುಪುಡಿ, ಆಕಾಶವಾಣಿ ಕಲಾವಿದರ ಕೆ.ಬಾಲಯ್ಯ ಅವರ ಬಳಿ ಸಂಗೀತ ಅಭ್ಯಾಸ ಮಾಡಿದ್ದಾರೆ.

ರಂಗಭೂಮಿಯಲ್ಲಿ ಪ್ರೋತ್ಸಾಹಿಸಿ ಬೆಳೆಸಿದ ಬಳ್ಳಾರಿ ಹಿರಿಯ ರಂಗ ಕಲಾವಿದರಾದ ಕಂಪ್ಲಿ ವಾದಿರಾಜ, ಮದಿರೆ ಮರಿಸ್ವಾಮಿ, ಸಿರಿಗೇರಿ ನಾಗನಗೌಡರು, ನಾಡೋಜ ಬೆಳಗಲ್ಲು ವೀರಣ್ಣ, ಮೊದಲಾದವರನ್ನು ಗೌರವದಿಂದ ಸ್ಮರಿಸುತ್ತಾರೆ.

ಬಸ್ಕಂಡೆಕ್ಟರ್, ಆಶಾಲತಾ, ಮದುಕನ ಮದುವೆ, ಕಲಿತ ಕಳ್ಳ, ಅಣ್ಣ ತಂಗಿ, ಆದರ್ಶ ಪ್ರೇಮ, ದಾರಿದೀಪ, ಬಂಜೆ ತೊಟ್ಟಿಲು, ಗೌಡ್ರಗದ್ಲ, ಗೌರಿಗೆದ್ದಳು, ಪುತ್ಥಳಿ, ಮಂಗಳಾ ನನ್ನ ಅತ್ತಿಗೆ ಹೀಗೆ ಸಾಮಾಜಿಕ ನಾಟಕಗಳಲ್ಲಿ ನಾಯಕಿ, ಖಳನಾಯಕಿ, ಹಾಸ್ಯ ನಟಿಯಾಗಿ ಅಭಿನಯಿಸಿದ್ದಾರೆ. ಪೌರಾಣಿಕ ನಾಟಕ ‘ರಕ್ತರಾತ್ರಿ’ಗೆ ಇವರು ಇಂದಿಗೂ ಬಹು ಬೇಡಿಕೆಯ ಕಲಾವಿದೆ.

ಕುರುಕ್ಷೇತ್ರ, ವೀರ ಅಭಿಮನ್ಯು, ಬಾಣಸಿಗ ಭೀಮ, ನರವೀರ ಪಾರ್ಥ, ಲವಕುಶ, ಚಿತ್ರಾಂಗದೆ, ಮೋಹಿನಿ ಭಸ್ಮಾಸುರ ಇವರಿಗೆ ಖ್ಯಾತಿ ತಂದ ನಾಟಕಗಳು. ಹೇಮರೆಡ್ಡಿ ಮಲ್ಲಮ್ಮ ಇಂದಿಗೂ ಗ್ರಾಮಾಂತರಗಳಲ್ಲಿ ನಿರಂತರವಾಗಿ ನಡೆಯುತ್ತಿದ್ದು ಪ್ರಧಾನ ನಾಯಕಿಯಾಗಿ ಊರೂರು ತಿರುಗಿ ಅಭಿನಯಿಸುತ್ತಿದ್ದಾರೆ. ಜಗಜ್ಯೋತಿ ಬಸವೇಶ್ವರ, ಮೌನೇಶ್ವರ ಮಹಾತ್ಮೆ ಸೇರಿದಂತೆ ನೂರಾರು ಭಕ್ತಿ ಪ್ರದಾನ ಪ್ರದರ್ಶನಗಳಿಗೆ ಇವರ ಅಭಿನಯ ಇರಲೇಬೇಕು.

ಗ್ರಾಮೀಣ ವೃತ್ತಿ ರಂಗ ಕಲಾವಿದೆಯಾದರೂ ಗುಡಗೇರಿ ಬಸವರಾಜ ಕಂಪನಿ, ಆಶಾಪುರ ಸಂಗಮೇಶ ಕಂಪನಿ, ಏಣಗಿ ಬಾಳಪ್ಪ ನವರ ಕಲಾ ವೈಭವ ಕಂಪನಿ, ಮಂಡಲಗೇರಿ ಕಂಪನಿ ಹೀಗೆ ಹಲವಾರು ನಾಟಕ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಹಂಪಿ ಉತ್ಸವ, ಮೈಸೂರು ದಸರಾ, ಲಕ್ಕುಂಡಿ ಉತ್ಸವ, ಚಾಲುಕ್ಯ ಉತ್ಸವದಂತಹ ಅನೇಕ ಸರ್ಕಾರಿ ಹಾಗೂ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಗಾಯನ, ನೃತ್ಯ, ನಾಟಕ ಪ್ರದರ್ಶನ ನೀಡಿದ್ದಾರೆ.

ಇವರ ಕಲಾ ಸೇವೆಗೆ 2015ರ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ರಂಗಗೌರವ, ಬಳ್ಳಾರಿ ರಾಘವ ಜಿಲ್ಲಾ ಪ್ರಶಸ್ತಿ, ಇಳಕಲ್ಲು ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥೆಯ ‘ಕಲಾಭೂಷಣ ಪ್ರಶಸ್ತಿ’ ಸಂದಿವೆ ಇವರ ಭರತ ನಾಟ್ಯ, ಕುಚುಪುಡಿ ಕಾರ್ಯಕ್ರಮಗಳು ಕರ್ನಾಟಕವಲ್ಲದೇ ಮುಂಬಯಿ, ಆಂಧ್ರ ಪ್ರದೇಶ ಹಾಗೂ ದೆಹಲಿಯಲ್ಲಿ ನಡೆದಿದ್ದು ‘ಸುಸ್ವರ ಗಾಯನಿ’ ಎಂದು ಖ್ಯಾತನಾಮರಾಗಿದ್ದಾರೆ.

ಕಲೆ ಕೈ ಬೀಸಿ ಕರೆದರೂ ಸ್ವಸಾಮಥ್ರ್ಯ, ಶ್ರದ್ಧೆ ಹಾಗೂ ಗೌರವ, ಸ್ವಾಭಿಮಾನ, ವಿನಯವಂತಿಕೆಯ ಭೂಷಣಗಳಿಂದಲೇ ರಂಗಭೂಮಿಯಲ್ಲಿ ನೆಲೆಯೂರಲು ಸಾಧ್ಯವೆಂಬುದಕ್ಕೆ ಬಿ.ವೀಣಾಕುಮಾರಿ ಆದವಾನಿ ಅವರು ಸ್ಪಷ್ಟ ಉದಾಹರಣೆ. ನಮ್ಮದೇ ಅಂಗಳ ರಂಗಭೂಮಿಯಲ್ಲಿ ಅರಳಿ ರಾಜ್ಯ, ಹೊರರಾಜ್ಯಗಳಲ್ಲೂ ಕಂಗೊಳಿಸಿದ ಶ್ರೀಮತಿ ವೀಣಾ ಆದವಾನಿ ಇವರಿಗೆ ಸುಸ್ವರ ಗಾಯನಿಯೊಂದಿಗೆ ನಟನಾಟ್ಯ ಶಾರದೆ ಅಭಿನಾಮದೊಂದಿಗೆ 2024ನೇ ಸಾಲಿನ ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡರ ರಂಗತೋರಣ ‘ರಂಗ ಪುರಸ್ಕಾರ’ ಗೌರವದೊಂದಿಗೆ ನೀಡಲಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande