`ಸಾಂಸ್ಕೃತಿಕ ಸಾರ್ವಭೌಮ ಡಾ. ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕೃತ’ ಶ್ರೀಧರ ಹೆಗಡೆ
ಸಾಂಸ್ಕೃತಿಕ ಪುರಸ್ಕೃತ
`ಸಾಂಸ್ಕøತಿಕ ಸಾರ್ವಭೌಮ ಡಾ. ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕøತ’ ಶ್ರೀಧರ ಹೆಗಡೆ


ಬಳ್ಳಾರಿ, 29 ಮೇ (ಹಿ.ಸ.) :

ಆ್ಯಂಕರ್ : ಅಮೋಘ ಪರಂಪರೆಯ ವೃತ್ತಿ ರಂಗಭೂಮಿ ಚಿರನೂತನ ಯಜ್ಞಕುಂಡ. ಈ ನಿತ್ಯಾಗ್ನಿಯಲ್ಲಿ ತಮ್ಮನ್ನು ತಾವು ಅತ್ಯಂತ ಶ್ರಮ, ಶ್ರದ್ಧೆ ಹಾಗೂ ಆದರ್ಶ ಪ್ರಮಾಣಿಕತೆಯಿಂದ ಹವಿಸ್ಸಾಗಿ ಅರ್ಪಿಸಿಕೊಂಡವರನ್ನು ಆ ಅಗ್ನಿಯೇ ಮೇಲೆತ್ತಿ ಇದು ‘ಅಪ್ಪಟ ಚಿನ್ನ’ವೆಂದು ಜಗತ್ತಿಗೆ ಸಾರುತ್ತದೆ.

ಅಂತಹ ಅಪರೂಪವೇ ಮೂರ್ತರೂಪ ತಾಳಿದ ಇಂದಿನ ವೃತ್ತಿರಂಗದಲ್ಲೇ ಉತ್ತಮ ಕಲಾವಿದ, ವೃತ್ತಿ ಹಾಗೂ ಹವ್ಯಾಸಿ ಕಲಾವಿದರಲ್ಲೂ ಮೆಚ್ಚುಗೆ ಗೌರವ ಪಡೆದವರು. ರಂಗಾಂತರಂಗದ ಬಂಗಾರದ ಮನುಷ್ಯ ಶ್ರೀಧರ ಹೆಗಡೆ.

ಬಹುತೇಕ ಕಲಾವಿದರು ನಾಯಕ, ಖಳನಾಯಕ, ಹಾಸ್ಯ ಕಲಾವಿದ ಎಂದು ಪ್ರಸಿದ್ಧರಾದವರೇ ಹೆಚ್ಚು. ಶ್ರೀಧರ ಹೆಗಡೆ ಅವರು ಹಾಸ್ಯಪಾತ್ರದಿಂದ ಹಿಡಿದು ನಾಯಕ, ಖಳನಾಯಕ, ಪೋಷಕ ಪಾತ್ರ, ಸ್ತ್ರೀಪಾತ್ರವನ್ನೂ ಯಶಸ್ವಿಯಾಗಿ ನಿಭಾಯಿಸಿದ್ದಲ್ಲದೇ ನೂರಾರು ಸಹಕಲಾವಿದರಿಗೆ ನಟನೆಯ ಸೂತ್ರಗಳನ್ನು ಕಲಿಸಿದ ಗುರು, ನಾಟಕಗಳ ನಿರ್ದೇಶಕ, ಕಂಪನಿ ಕಟ್ಟಿ ನಡೆಸಿದ ಮಾಲಿಕ, ಬೇರೆಯವರ ಕಂಪನಿಯ ಸಂಘಟಕ, ನಾಟಕಗಳ ಸಂಚಾಲಕ ಹೀಗೆ ರಂಗಭೂಮಿಯ ಎಲ್ಲ ಮಜಲುಗಳಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದವರು. ಯಾರಿಗೂ ಎಂದಿಗೂ ಮೋಸ ಮಾಡದ, ಸುಳ್ಳು ಹೇಳದ, ಇನ್ನೊಬ್ಬರದನ್ನು ಆಶಿಸದ ತನ್ನನ್ನೇ ತಾನು ಅಗ್ನಿ ದಿವ್ಯದಲ್ಲಿ ಬೆಳಗಿಸಿಕೊಂಡು ಇತರರಿಗೆ ಬೆಳಕಾದವರು.

ಕಾರವಾರ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೆರೆಹೊಂಡ ಎಂಬ ಗ್ರಾಮದ ತುಂಬು ಕುಟುಂಬದ ಹುಡುಗ ಶ್ರೀಧರ ತಮ್ಮ ಬಾಲ್ಯದಿಂದಲೇ ತಂದೆಯ ಜೊತೆ ಕೃಷಿ ಮಾಡುತ್ತ ಎಸ್.ಎಸ್.ಎಲ್.ಸಿ. ಓದಿದರು. ಕಾಲೇಜು ಸೇರುವ ಹಂಬಲವಿದ್ದರೂ ಹಿರಿ ಅಣ್ಣಂದಿರನ್ನು ನೆನೆದು ಕಾಲೇಜು ಫೀಜ್ ಎಂದು ತಂದೆ ಕೊಟ್ಟ 136 ರೂ ತೆಗೆದುಕೊಂಡು ತಂದೆಗೆ ಪತ್ರ ಬರೆದು ಊರು ಬಿಟ್ಟ ಶ್ರೀಧರ ಬೆಳಗಾವಿಯಲ್ಲಿ ಸೈನ್ಯಕ್ಕೆ ಸೇರಬೇಕೆಂದು ಬಂದು ನಿರಾಶರಾಗಿ ಬೆಳಗಾವಿ ನಾಟಕ ಕಂಪನಿ ಸೇರಬೇಕಾಯಿತು.

ಬದುಕಿನ ಹಂಬಲ ತೀವ್ರವಿದ್ದ ಶ್ರೀಧರ ಬಹು ಬೇಗನೇ ಮಾಲೀಕರ ಪ್ರಶಂಸೆ ಗಳಿಸಿ ಕೇವಲ 20 ದಿನಗಳಲ್ಲೇ ‘ಬದುಕು ಬಂಗಾರವಾಯ್ತು’ ನಾಟಕದ ನಾಯಕರಾಗಿ ಮೆಚ್ಚುಗೆ ಗಳಿಸಿದ ಅವರು ಅಭಿನಯದಲ್ಲಿ ಹಿಂದೆ ಬೀಳಲೇ ಇಲ್ಲ. ಇಂದಿನ 70ರ ಹರೆಯದಲ್ಲಿಯೂ ಒಂದು ಕಂಪನಿಯ ಸಂಚಾಲಕರಾಗಿದ್ದೂ ಬಹು ಬೇಡಿಕೆಯಲ್ಲಿರುವ ನಟರಾಗಿದ್ದಾರೆ.

ಕಂಪನಿಗಳು ಕಷ್ಟ ನಷ್ಟದಲ್ಲಿರುವಾಗ ಸಿನಿತಾರೆಯರ ಕರೆಸಿ ಕಷ್ಟ ನಿಭಾಯಿಸುವುದು ವೃತ್ತಿರಂಗ ಮೊದಲಿನಿಂದಲೂ ಕಂಡಿದೆ. ಆದರೆ ಕಲಾವಿದ ಕೈಕೊಟ್ಟಾಗ ಕಂಪನಿಯ ಮಾನ ಉಳಿಸಿ ನಿಭಾಯಿಸಲು ನೆರವಾದವರು ಶ್ರೀಧರ ಹೆಗಡೆ ಅವರು. ಇಂದಿಗೂ ಬೇರೆ ಬೇರೆ ಕಂಪನಿಗಳಿಗೆ, ಬೇರೆ ಬೇರೆ ನಾಟಕಗಳಲ್ಲಿ ಪಾತ್ರಕ್ಕೆ ಬೇಡಿಕೆ ಇರುವ ಅಪರೂಪದ ಕಲಾವಿದ.

ದಿನನಿತ್ಯದ ಪತ್ರಿಕೆಯ ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ವಿಷಯಗಳನ್ನು ಇಂದಿಗೂ ತಮ್ಮ ಅಭಿನಯದಲ್ಲಿ ಪಾತ್ರದ ಔಚಿತ್ಯ ಮೀರದಂತೆ ಪ್ರಸ್ತಾಪಿಸುತ್ತ ಸಾಮಾಜಿಕ ಕಳಕಳಿ ಮೆರೆಯುತ್ತಾರೆ. ಈ ವಿಷಯದಲ್ಲಿ ಇವರು ಈಗ ನಮ್ಮೊಡನಿರುವ ‘ಮಾಸ್ಟರ್ ಹಿರಣ್ಣಯ್ಯ’ ಎನ್ನಬಹುದು. ನಟ, ನಿರ್ದೇಶಕ, ಮಾಲಿಕರಾಗಿಯೂ ಸಹ ಕಲಾವಿದರ ಕಷ್ಟ ಕೋಟಲೆಗಳಿಗೆ ಸ್ಪಂದಿಸುತ್ತ ಹಿರಿಯ ಕಲಾವಿದರೊಂದಿಗೆ ಅತ್ಯಂತ ಸ್ನೇಹ ಜೀವಿಯಾಗಿದ್ದಾರೆ.

ರಂಗಭೂಮಿಯ ಹಾಸ್ಯದ ಮೇರು ನಟ ಫಕ್ಕೀರಪ್ಪ ವರವಿ-ಶ್ರೀಧರ ಹೆಗಡೆ ಜೋಡಿ ಹತ್ತಾರು ವರ್ಷ ಅನುಪಮ ಮೋಡಿ ಮಾಡಿದೆ. ಹಾಸ್ಯ ಕಲಾವಿದ, ನಾಯಕ ನಟ ಇಬ್ಬರ ಅಭಿನಯ ಜೀವಂತಿಕೆ ಎಷ್ಟೋಬಾರಿ ಕಂಪನಿಗಳನ್ನು ನಷ್ಟದಿಂದ ಪಾರು ಮಾಡಿವೆ.

ಕಡಪಟ್ಟಿ ಕಂಪನಿಯಿಂದ ರಂಗ ಜೀವನ ಆರಂಭಗೊಂಡು ಹತ್ತಾರು ಕಂಪನಿಗಳಲ್ಲಿ ಪಾತ್ರ ಮಾಡುತ್ತಾ, ತಮ್ಮದೇ ಸ್ವಂತ ವೃತ್ತಿ ಕಂಪನಿ ಶ್ರೀ ರಾಘವೇಂದ್ರ ನಾಟ್ಯ ಸಂಘ ಆರಂಭಿಸಿದಾಗ ಸಂಗೀತ ಮಾಸ್ತರ್ ಆಗಿ ಪರಿಚಯವಾದವರು ಎಲ್.ಬಿ. ಶೇಖ ಮಾಸ್ತರ್.

1988ರಿಂದ ಒಂದುಗೂಡಿದ ಈ ಜೋಡಿ ರಂಗಭೂಮಿಯಲ್ಲಿ ದಾಖಲೆಯ ಮೋಡಿ ಮಾಡಿದ್ದು ಈಗ ಇತಿಹಾಸ. ಶೇಖ ಮಾಸ್ತರ್ ಅವರ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ ಹಾನಗಲ್ ಕಂಪನಿಯಲ್ಲಿ ಶೇಖ ಮಾಸ್ತರ್ ಮಾಲೀಕರಾದರೂ ಸಂಪೂರ್ಣ ಜವಾಬ್ದಾರಿ ಶ್ರೀಧರ ಹೆಗಡೆ ಅವರದಾಯಿತು. 45 ವರ್ಷಕ್ಕೂ ಮಿಕ್ಕಿದ ಶೇಖಮಾಸ್ತರ-ಶ್ರೀಧರ ಹೆಗಡೆ ಸ್ನೇಹ ಸಂಬಂಧ ಇಂದಿಗೂ ಕೇವಲ ದಾಖಲೆ ಮಾತ್ರವಲ್ಲ ಮಾದರಿಯೂ ಆಗಿದೆ.

ಒಂದು ಕಂಪನಿ ಒಂದೂರಲ್ಲಿ ಹೆಚ್ಚೆಂದರೆ 1-2 ವರ್ಷ ಪ್ರದರ್ಶನ ನೀಡಿರಬಹುದು. ಆದರೆ ‘ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ’ ಹಾನಗಲ್ ಇತರ ಕಂಪನಿಗಳಂತೆ ಊರೂರು ಸಂಚರಿಸಿದರೂ ಕಲಬುರ್ಗಿ ನಗರದಲ್ಲಿ ಇದುವರೆಗೂ ಯಾರೂ ಮಾಡಿರದ ದಾಖಲೆ ನಿರ್ಮಿಸಿದೆ. ಅದರ ರೂವಾರಿಗಳು ಶೇಖಮಾಸ್ತರ್-ಶ್ರೀಧರ ಹೆಗಡೆ ಜೋಡಿ.

ಕಲಬುರ್ಗಿ ನಗರದಲ್ಲಿ ಈ ಕಂಪನಿ ನಿರಂತರವಾಗಿ 13 ವರ್ಷ ಒಂದೇ ಜಾಗೆಯಲ್ಲಿ ನಾಟಕಗಳ ಪ್ರದರ್ಶನ ನೀಡಿದೆ. ಈ ಅವಧಿಯಲ್ಲಿ 24 ನಾಟಕಕಾರರ 60 ಬೇರೆ ಬೇರೆ ನಾಟಕಗಳ 9000ಕ್ಕೂ ಹೆಚ್ಚು ಪ್ರದರ್ಶನಗಳು ನಿರಂತರ ಒಂದೇ ಸ್ಥಳದಲ್ಲಿ ನಡೆದಿದ್ದು ಇತಿಹಾಸ. ಈ ಎಲ್ಲ ಪ್ರದರ್ಶನಗಳಲ್ಲೂ ಶ್ರೀಧರ ಹೆಗಡೆ ನಟರಾಗಿ, ನಿರ್ದೇಶಕರಾಗಿ, ಸಂಚಾಲಕರಾಗಿ ಪಾತ್ರ ನಿರ್ವಹಿಸಿದ್ದಾರೆ.

ಅವರೂ ಮಾಲೀಕರ ಸರಿಸಮವಾಗಿದ್ದರೂ, ಇಂದಿಗೂ ನಾನು ‘ಸಂಚಾಲಕ’ ಎಂದೇ ಹೇಳಿಕೊಳ್ಳುತ್ತಾರೆ. ‘ಆಸ್ತಿಗಿಂತ ದೋಸ್ತಿ ದೊಡ್ಡದು’ ಎನ್ನುವ ನಾಟಕದಲ್ಲಿ ನಾಯಕ ಪಾತ್ರದಲ್ಲಿ ಸಾಕಷ್ಟು ಬಾರಿ ಅಭಿನಯಿಸಿದ ಶ್ರೀಧರ ಹೆಗಡೆಯವರು ನಿಜ ಜೀವನದಲ್ಲೂ ಅದರಂತೆ ನಡೆಯುತ್ತಿದ್ದಾರೆ.

ಚಿನ್ನದಗೊಂಬೆ, ಕಿವುಡ ಮಾಡಿದ ಕಿತಾಪತಿ, ಬದುಕು ಬಂಗಾರವಾಯ್ತು, ಮುದುಕನ ಮದುವೆ, ಚೆನ್ನಪ್ಪ ಚೆನ್ನಗೌಡ, ಮರಳಿ ಪಡೆದ ಮಾಂಗಲ್ಯ, ಸಾಕ್ಷಿಗೆ ಬಂದ ಸಾವಿತ್ರಿ, ಬಸ್ ಕಂಡಕ್ಟರ್, ಛಲ ಬಿಡದ ಹೆಣ್ಣು, ಮಾತಂಗಕನ್ಯ, ಚಿತ್ರಾಂಗದಾ, ನೀನೂ ಸಾಹುಕಾರನಾಗು, ಗೌರಿ ಹೋದಳು ಗಂಗೆ ಬಂದಳು, ಕಳ್ಳ ಗುರು ಸುಳ್ಳ ಶಿಷ್ಯ ಹೀಗೆ ಅವರ ಅಭಿನಯಿಸಿದ ನಾಟಕಗಳ ಪಟ್ಟಿ ದೊಡ್ಡದಿದೆ. ರಂಗ ಕಲಾವಿದೆ ಶ್ರೀಮತಿ ರಾಜೇಶ್ವರಿಯನ್ನು ವರಿಸಿರುವ ಹೆಗಡೆ, ಮಗಳು ಸುನಂದಾಳನ್ನು ಅಡ್ವೋಕೇಟ್ ಆಗಿಸಿ ಮದುವೆ ಮಾಡಿ ಸಂಸಾರವನ್ನು ಸಂತೋಷದಿಂದ ನಿಭಾಯಿಸುತ್ತಿದ್ದಾರೆ.

ಇವರ ಕಲಾಸೇವೆಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಮೇಘಮಲ್ಹಾರ ಪ್ರಶಸ್ತಿ, ಕಲಾಜ್ಯೋತಿ ಬಿರುದು ನೀಡಿ ಸನ್ಮಾನ, ಹಾರಕೂಡ ಚೆನ್ನವೀರಶ್ರೀಗಳಿಂದ ಚಿನ್ನದ ಉಂಗುರ ತೊಡಿಸಿ ಸನ್ಮಾನ, ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸನ್ಮಾನ, ಚೆನ್ನಬಸವೇಶ್ವರ ಮಠದ ಶ್ರೀಗಳಿಂದ ‘ಚೆನ್ನರತ್ನ’ ಪ್ರಶಸ್ತಿ ಸಂದಿವೆ. ಕರ್ನಾಟಕ ಸರ್ಕಾರದ ಎಲ್ಲ ರಂಗಾಯಣಗಳ ನಿರ್ದೇಶನದ ರಂಗಸಮಾಜದ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಬದುಕು ಬಂಗಾರವಾಯ್ತು, ಚಿನ್ನದಗೊಂಬೆಯಿಂದ ರಂಗ ಜೀವನ ಆರಂಭಿಸಿದ ಶ್ರೀಧರ ಹೆಗಡೆ ರಂಗಭೂಮಿಗೆ ಹವಿಸ್ಸಿನಂತೆ ತಮ್ಮನ್ನೇ ಸಮರ್ಪಿಸಿಕೊಂಡು 70 ಈ ವಯಸ್ಸಿನಲ್ಲೂ ಬೇಡಿಕೆ ಹೊಂದಿರುವುದು ಅವರ ಕಲಾ ಬದುಕಿನ ಸಾರ್ಥಕತೆ. ಇವರಿಗೆ ರಂಗಾಂತರಂಗದ ಬಂಗಾರದ ಮನುಷ್ಯ ಅಭಿದಾನದೊಂದಿಗೆ 2025ನೇ ಸಾಲಿನ ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡ ರಂಗತೋರಣ ರಂಗಪುರಸ್ಕಾರವನ್ನು ಗೌರವದೊಂದಿಗೆ ನೀಡಲಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande