ತೋಟಗಾರಿಕೆ ಇಲಾಖೆಯ ನಾನಾ ಯೋಜನೆಗಳಿಗೆ ಅರ್ಜಿ ಆಹ್ವಾನ
ಗದಗ, 29 ಮೇ (ಹಿ.ಸ.) ಆ್ಯಂಕರ್ : 2026-27ನೇ ಸಾಲಿನಲ್ಲಿ ತೋಟಗಾರಿಕೆ ಬೆಳೆಗಾರರ ಅಭಿವೃದ್ಧಿ ಹಾಗೂ ಉತ್ಪಾದಕತೆ ಹೆಚ್ಚಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ವತಿಯಿಂದ ನಾನಾ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ರೈತರಿಗೆ ಹಲವು ಯೋಜನೆಗಳಡಿ ಸಹಾಯಧನ ಸೌಲಭ್ಯ ಕಲ್ಪಿಸಲಾಗಿದೆ ಎಂದು ಇಲಾಖೆ ತಿಳಿಸಿದೆ
ಫೋಟೋ


ಗದಗ, 29 ಮೇ (ಹಿ.ಸ.)

ಆ್ಯಂಕರ್ : 2026-27ನೇ ಸಾಲಿನಲ್ಲಿ ತೋಟಗಾರಿಕೆ ಬೆಳೆಗಾರರ ಅಭಿವೃದ್ಧಿ ಹಾಗೂ ಉತ್ಪಾದಕತೆ ಹೆಚ್ಚಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ವತಿಯಿಂದ ನಾನಾ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ರೈತರಿಗೆ ಹಲವು ಯೋಜನೆಗಳಡಿ ಸಹಾಯಧನ ಸೌಲಭ್ಯ ಕಲ್ಪಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಬಾಳೆ, ಪಪ್ಪಾಯ, ಮಾವು, ದಾಳಿಂಬೆ, ಪೇರಲ, ಲಿಂಬೆ, ನೇರಳೆ ಸೇರಿದಂತೆ ವಿವಿಧ ಹಣ್ಣಿನ ಬೆಳೆಗಳ ಪ್ರದೇಶ ವಿಸ್ತರಣೆಗೆ ಉತ್ತೇಜನ ನೀಡಲಾಗುತ್ತಿದೆ. ಇದೇ ಯೋಜನೆಯಡಿ ಹೈಬ್ರೀಡ್ ತರಕಾರಿ ಬೆಳೆಗಳ ಬೆಳವಣಿಗೆಗೂ ಸಹಾಯಧನ ಒದಗಿಸಲಾಗುತ್ತಿದೆ.

ಹೂವಿನ ಬೆಳೆಗಳಾದ ಗುಲಾಬಿ, ಬರ್ಡ್ ಆಫ್ ಪ್ಯಾರಡೈಸ್, ಚಂಡುಹೂವು ಹಾಗೂ ಸೇವಂತಿಗೆ ಬೆಳೆಗಾರರಿಗೂ ನೆರವು ನೀಡಲಾಗುತ್ತಿದೆ. ಅಲ್ಲದೆ ಔಷಧೀಯ ಬೆಳೆಗಳಾದ ತುಳಸಿ, ಅಶ್ವಗಂಧ ಹಾಗೂ ಶತಾವರಿ ಬೆಳೆಗಳ ಪ್ರದೇಶ ವಿಸ್ತರಣೆಗೆ ಪ್ರೋತ್ಸಾಹಧನ ನೀಡಲಾಗುವುದು.

ಜೇನು ಸಾಕಾಣಿಕೆ, ವೈಯಕ್ತಿಕ ನೀರು ಸಂಗ್ರಹಣ ಘಟಕ ಸ್ಥಾಪನೆ, ಕೋಯ್ಲೋತ್ತರ ನಿರ್ವಹಣಾ ಯೋಜನೆಯಡಿ ಪ್ಯಾಕ್ಹೌಸ್ ಘಟಕ ಹಾಗೂ ಈರುಳ್ಳಿ ಶೇಖರಣಾ ಘಟಕಗಳ ಸ್ಥಾಪನೆಗೂ ಸಹಾಯಧನ ಲಭ್ಯವಿದೆ. ತೋಟಗಾರಿಕೆ ಯಾಂತ್ರೀಕರಣ ಯೋಜನೆಯಡಿ 20 ಹೆಚ್ಪಿ ಸಾಮರ್ಥ್ಯಕ್ಕಿಂತ ಕಡಿಮೆ ಟ್ರ್ಯಾಕ್ಟರ್ ಖರೀದಿಗೆ ಸಹ ಅನುದಾನ ನೀಡಲಾಗುತ್ತಿದೆ.

ತೋಟಗಾರಿಕೆ ಉತ್ಪನ್ನಗಳ ಮಾರಾಟಕ್ಕಾಗಿ ತಳ್ಳುವ ಗಾಡಿಗಳ ಖರೀದಿಗೂ ಸಹಾಯಧನ ನೀಡಲಾಗುತ್ತಿದ್ದು, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ದಾಳಿಂಬೆ ಬೆಳೆ ಪ್ರದೇಶ ವಿಸ್ತರಣೆ ಹಾಗೂ ತರಕಾರಿ ಬೀಜಗಳ ಕಿಟ್ ವಿತರಣೆಯೂ ನಡೆಯಲಿದೆ. ರಾಜ್ಯವಲಯ ಯೋಜನೆಯಡಿ ಸಮಗ್ರ ರೋಗ ಮತ್ತು ಕೀಟ ನಿಯಂತ್ರಣ ಕಾರ್ಯಕ್ರಮಕ್ಕೂ ಸಹಾಯಧನ ಸೌಲಭ್ಯ ಕಲ್ಪಿಸಲಾಗಿದೆ.

ತಾಳೆಬೆಳೆ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ತಾಳೆ ಸಸಿಗಳಿಗೆ ಸಹಾಯಧನದ ಜೊತೆಗೆ ನಾಲ್ಕು ವರ್ಷಗಳವರೆಗೆ ನಿರ್ವಹಣಾ ವೆಚ್ಚವನ್ನು ಭರಿಸುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಅಂತರ ಬೇಸಾಯ, ತಾಳೆಬೆಳೆ ಕೃಷಿಗೆ ಅಗತ್ಯ ಯಂತ್ರೋಪಕರಣಗಳ ಖರೀದಿ, ಎರೆಹುಳು ಘಟಕ, ನೀರುಕೋಯ್ಲು ಘಟಕ ಹಾಗೂ ಎತ್ತರದ ತಾಳೆ ಮರಗಳಿಂದ ಹಣ್ಣು ಕಟಾವು ಮಾಡಲು ಪ್ರೋತ್ಸಾಹಧನ ನೀಡಲಾಗುವುದು.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಘಟಕ ಅಳವಡಿಕೆಗೆ ಎಲ್ಲಾ ವರ್ಗದ ರೈತರಿಗೆ ಐದು ಎಕರೆವರೆಗೆ ಶೇಕಡಾ 90ರಷ್ಟು ಸಹಾಯಧನ ಲಭ್ಯವಿದೆ. ಇದರ ನಂತರದ 7.20 ಎಕರೆವರೆಗೆ ಶೇಕಡಾ 45ರಷ್ಟು ಸಹಾಯಧನ ದೊರೆಯಲಿದೆ. ತರಕಾರಿ ಬೆಳೆಗಳಿಗೆ ಗರಿಷ್ಠ ಐದು ಎಕರೆವರೆಗೆ ಶೇಕಡಾ 90ರಷ್ಟು ಸಹಾಯಧನ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಾವು, ಚಿಕ್ಕು, ಲಿಂಬೆ, ದಾಳಿಂಬೆ, ಪೇರಲ, ಗೋಡಂಬಿ ಹಾಗೂ ಬದುಗಳ ಸುತ್ತಲೂ ತೆಂಗಿನ ಬೆಳೆಯ ಪ್ರದೇಶ ವಿಸ್ತರಣೆಗೆ ಕೂಲಿ ಮತ್ತು ಕೂಲಿಯೇತರ ಮೊತ್ತ ಪಾವತಿ ಸೌಲಭ್ಯವೂ ಕಲ್ಪಿಸಲಾಗಿದೆ.

ಈ ಎಲ್ಲ ಯೋಜನೆಗಳ ಪ್ರಯೋಜನ ಪಡೆಯಲು ಆಸಕ್ತ ರೈತರು ಜೂನ್ 15, 2026ರೊಳಗಾಗಿ ರೋಣ ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಬೇಕಾಗಿದೆ.

ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ರೋಣ ಹಾಗೂ ಹೋಳೆಆಲೂರು ಕೇಂದ್ರಗಳಿಗೆ 8748011644, ನರೇಗಲ್ಲ-1 ಕೇಂದ್ರಕ್ಕೆ 9739384476, ನರೇಗಲ್ಲ-2 ಕೇಂದ್ರಕ್ಕೆ 9964864464 ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದು. ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು 9972467330 ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು 9886215054 ಸಂಖ್ಯೆಯಲ್ಲಿ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ರೋಣ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande