ಸಿಕ್ಕಿಂ ಪೊಲೀಸರಿಗೆ ಇಂದು ರಾಷ್ಟ್ರಪತಿ ‘ನಿಶಾನ್’ ಗೌರವ
ಪ್ರಶಸ್ತಿ
President


ಗ್ಯಾಂಗ್ಟಾಕ್, 28 ಮೇ (ಹಿ.ಸ.) :

ಆ್ಯಂಕರ್ : ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಸಿಕ್ಕಿಂ ಪೊಲೀಸರಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪೊಲೀಸ್ ಕಲರ್ ಪ್ರಶಸ್ತಿ ‘ನಿಶಾನ್’ ಪ್ರದಾನ ಮಾಡಲಿದ್ದಾರೆ. ರಾಜಧಾನಿ ಗ್ಯಾಂಗ್ಟಾಕ್ನ ಪಾಲ್ಜೋರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಈ ಗೌರವ ಪ್ರದಾನವಾಗಲಿದ್ದು, ರಾಜ್ಯ ಪೊಲೀಸ್ ಇಲಾಖೆಗೆ ಇದು ಐತಿಹಾಸಿಕ ಕ್ಷಣವಾಗಿ ಪರಿಣಮಿಸಿದೆ.

ರಾಜ್ಯದ ಜನರ ಭದ್ರತೆ, ಶಿಸ್ತಿನ ಪಾಲನೆ ಹಾಗೂ ಸಾರ್ವಜನಿಕ ಸೇವೆಯಲ್ಲಿ ತೋರಿದ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪರಿಗಣಿಸಿ ಸಿಕ್ಕಿಂ ಪೊಲೀಸರಿಗೆ ಈ ಗೌರವ ನೀಡಲಾಗುತ್ತಿದೆ. ರಾಷ್ಟ್ರಪತಿ ಪೊಲೀಸ್ ಕಲರ್ ಅವಾರ್ಡ್ ‘ನಿಶಾನ್’ ಪಡೆಯುತ್ತಿರುವ ದೇಶದ 15ನೇ ರಾಜ್ಯವಾಗಿ ಸಿಕ್ಕಿಂ ಗುರುತಿಸಿಕೊಂಡಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇ 26ರಂದು ಮೂರು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಸಿಕ್ಕಿಂಗೆ ಆಗಮಿಸಿದ್ದರು. ಪ್ರವಾಸದ ಮೊದಲ ದಿನ ಗ್ಯಾಂಗ್ಟಾಕ್ನ ಮೈತ್ರೇಯ ಮಂಜರಿ ಆವರಣದಲ್ಲಿರುವ ಆರ್ಕಿಡೇರಿಯಂಗೆ ಭೇಟಿ ನೀಡಿ ರಾಜ್ಯದ ಸಾಂಸ್ಕೃತಿಕ ಮತ್ತು ಪರಿಸರ ವೈಶಿಷ್ಟ್ಯಗಳನ್ನು ವೀಕ್ಷಿಸಿದರು. ಬಳಿಕ ದೇವರಾಲಿಯಲ್ಲಿರುವ ನಮ್ಗ್ಯಾಲ್ ಇನ್ಸ್ಟಿಟ್ಯೂಟ್ ಆಫ್ ಟಿಬೆಟಾಲಜಿ ಸಂಸ್ಥೆಗೆ ಭೇಟಿ ನೀಡಿ ಟಿಬೆಟಿಯನ್ ಸಂಸ್ಕೃತಿ ಮತ್ತು ಅಧ್ಯಯನಗಳ ಬಗ್ಗೆ ಮಾಹಿತಿ ಪಡೆದರು.

ಎರಡನೇ ದಿನ ಮಹಿಳೆಯರ ಸುರಕ್ಷಿತ ಹಾಗೂ ಸುಲಭ ಸಂಚಾರಕ್ಕಾಗಿ ಆರಂಭಿಸಲಾದ ‘ಪಿಂಕ್ ಸಿಟಿ ರನ್ನರ್’ ಬಸ್ ಸೇವೆಗೆ ಚಾಲನೆ ನೀಡಿದರು. ನಂತರ ಸಿಕ್ಕಿಂ ಕೇಂದ್ರ ವಿಶ್ವವಿದ್ಯಾಲಯದ ಏಳನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ಭಾರತ-ಚೀನಾ ಗಡಿಯ ಸಮೀಪದ ನಾಥುಲಾ ಪ್ರದೇಶಕ್ಕೆ ರಾಷ್ಟ್ರಪತಿಯವರ ಭೇಟಿ ನಿಗದಿಯಾಗಿದ್ದರೂ, ಅನಾನುಕೂಲ ಹವಾಮಾನದ ಕಾರಣದಿಂದ ಕಾರ್ಯಕ್ರಮವನ್ನು ರದ್ದುಪಡಿಸಲಾಯಿತು.

ಇಂದು ನಡೆಯಲಿರುವ ‘ನಿಶಾನ್’ ಪ್ರಶಸ್ತಿ ಪ್ರದಾನ ಸಮಾರಂಭದೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಿಕ್ಕಿಂ ಪ್ರವಾಸ ಅಂತ್ಯಗೊಳ್ಳಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande