
ಕೊಪ್ಪಳ, 28 ಮೇ (ಹಿ.ಸ.) :
ಆ್ಯಂಕರ್ : ಕೇಂದ್ರ ಚುನಾವಣಾ ಆಯೋಗವು ಜಾರಿಗೆ ತರುತ್ತಿರುವ ಮತದಾರರ ತೀವ್ರ ಪರಿಷ್ಕರಣೆ (ಎಸ್.ಐ.ಆರ್.) ಪ್ರಕ್ರಿಯೆಯನ್ನು ವಿರೋಧಿಸಿ ಮತ್ತು ರಾಜ್ಯದ ಮತದಾರರ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿ ಮೇ 30 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೊದಲ ಸುತ್ತಿನ ಎಸ್.ಐ.ಆರ್. ಕರ್ನಾಟಕ ಪ್ರತಿರೋಧ ಬೃಹತ್ ಹಕ್ಕೊತ್ತಾಯ ಚಳವಳಿಯನ್ನು ಆಯೋಜಿಸಲಾಗಿದೆ. ಈ ಪ್ರತಿಭಟನೆಯಲ್ಲಿ ಸಾಹಿತಿಗಳು, ಚಿಂತಕರು, ಪ್ರಗತಿಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ.
ಪ್ರತಿಭಟನೆಯ ಹಿನ್ನೆಲೆ ಮತ್ತು ಆತಂಕಗಳು : ಕೋಟಿಗಟ್ಟಲೆ ಮತದಾರರ ಹಕ್ಕು ಚ್ಯುತಿ: ದೇಶದ 13 ರಾಜ್ಯಗಳಲ್ಲಿ ಈಗಾಗಲೇ ಎಸ್.ಐ.ಆರ್. ಪ್ರಕ್ರಿಯೆ ನಡೆಸಿ, ಕನಿಷ್ಠ 5 ಕೋಟಿ ಅರ್ಹ ಮತದಾರರು ಸೇರಿದಂತೆ ಒಟ್ಟು 6.5 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಹೊರಹಾಕಲಾಗಿದೆ.
ಹೊಸದಾಗಿ ಹೆಸರು ನೋಂದಾಯಿಸಲು 2025ರ ಜೊತೆಗೆ 2002ರ ಮತದಾರರ ಪಟ್ಟಿಯ ದಾಖಲೆ ಅಥವಾ ಕಠಿಣವಾದ 11 ದಸ್ತಾವೇಜುಗಳನ್ನು ಕೇಳಲಾಗುತ್ತಿದೆ.
ದುರ್ಬಲ ವರ್ಗಗಳ ಗುರಿ: ಲಾಜಿಕಲ್ ಡಿಸ್ಕ್ರಿಪೆನ್ಸಿ (ಹೆಸರು, ವಿಳಾಸದ ಸಣ್ಣಪುಟ್ಟ ವ್ಯತ್ಯಾಸ) ನೆಪದಲ್ಲಿ ವಿವಾಹಿತ ಮಹಿಳೆಯರು, ಅಲೆಮಾರಿಗಳು, ದಲಿತರು, ಗ್ರಾಮೀಣ ಬಡವರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಉದ್ದೇಶಪೂರ್ವಕವಾಗಿ ಕಟಾವು ಮಾಡಲಾಗುತ್ತಿದೆ. ಇದು ವಿರೋಧ ಪಕ್ಷಗಳ ಮತ ಬ್ಯಾಂಕ್ ಕುಗ್ಗಿಸುವ ಮತ್ತು ಜನರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವ ಮನುವಾದಿ ಹುನ್ನಾರವಾಗಿದೆ ಎಂದು ಸಂಘಟಕರು ಆರೋಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್