ಬೆಣಕಲ್ಲು : ಜೂನ್ 4, 5 ರ ಜಾತ್ರೆ, ಕುಂಭೋತ್ಸವ ನಿಷೇಧ ಆದೇಶ
ಬಳ್ಳಾರಿ, 28 ಮೇ (ಹಿ.ಸ.) : ಆ್ಯಂಕರ್ : ಬಳ್ಳಾರಿ ತಾಲ್ಲೂಕಿನ ಯರಗುಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಣಕಲ್ಲು ಗ್ರಾಮದಲ್ಲಿ ಜೂನ್ 4 ಮತ್ತು 5 ರಂದು ಆಯೋಜಿಸಲಾಗಿದ್ದ ಶ್ರೀ ದುರುಗಮ್ಮ ಮತ್ತು ಮರಿಗಮ್ಮ ದೇವಿಯ ದೇವರ ಜಾತ್ರೆ ಹಾಗೂ ಕುಂಭೋತ್ಸವ ಕಾರ್ಯಕ್ರಮಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್
ಬೆಣಕಲ್ಲು : ಜೂನ್ 4, 5 ರ ಜಾತ್ರೆ, ಕುಂಭೋತ್ಸವ ನಿಷೇಧ ಆದೇಶ


ಬಳ್ಳಾರಿ, 28 ಮೇ (ಹಿ.ಸ.) :

ಆ್ಯಂಕರ್ : ಬಳ್ಳಾರಿ ತಾಲ್ಲೂಕಿನ ಯರಗುಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಣಕಲ್ಲು ಗ್ರಾಮದಲ್ಲಿ ಜೂನ್ 4 ಮತ್ತು 5 ರಂದು ಆಯೋಜಿಸಲಾಗಿದ್ದ ಶ್ರೀ ದುರುಗಮ್ಮ ಮತ್ತು ಮರಿಗಮ್ಮ ದೇವಿಯ ದೇವರ ಜಾತ್ರೆ ಹಾಗೂ ಕುಂಭೋತ್ಸವ ಕಾರ್ಯಕ್ರಮಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ನಾಗೇಂದ್ರ ಪ್ರಸಾದ್ ಕೆ. ಅವರು ಆದೇಶ ಹೊರಡಿಸಿದ್ದಾರೆ.

ಬೆಣಕಲ್ಲು ಗ್ರಾಮದಲ್ಲಿ ಸುಮಾರು 18 ವರ್ಷಗಳ ಹಿಂದೆ (2009ರಲ್ಲಿ) ಸಾಂಪ್ರದಾಯಿಕ ಕುಂಭೋತ್ಸವ ನಡೆದಿತ್ತು. ಆ ಬಳಿಕ ವಿವಿಧ ಕಾರಣಗಳಿಂದಾಗಿ ಕಳೆದ 18 ವರ್ಷಗಳಿಂದ ಈ ಕಾರ್ಯಕ್ರಮ ನಡೆದಿರಲಿಲ್ಲ. ಪ್ರಸಕ್ತ ಸಾಲಿನಲ್ಲಿ ಶ್ರೀ ದುರುಗಮ್ಮ ಮತ್ತು ಮರಿಗಮ್ಮ ದೇವಿಯ ಟ್ರಸ್ಟ್ ಸಮಿತಿಯವರು ಜಾತ್ರೆ ಮತ್ತು ಕುಂಭೋತ್ಸವವನ್ನು ಆಯೋಜಿಸಿದ್ದರು.

ಈ ಕಾರ್ಯಕ್ರಮದ ಕುರಿತು ಗ್ರಾಮದ ಎರಡು ಗುಂಪುಗಳ ನಡುವೆ ತೀವ್ರ ಭಿನ್ನಾಭಿಪ್ರಾಯಗಳು ಮೂಡಿದ್ದವು. ಫೆಬ್ರವರಿ 24ರಂದು ಸಿರುಗುಪ್ಪ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಾಗೂ ಮೇ 19ರಂದು ಸಹಾಯಕ ಆಯುಕ್ತರ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲೂ ಗ್ರಾಮಸ್ಥರ ನಡುವೆ ದಿನಾಂಕ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಒಮ್ಮತ ಮೂಡಿರಲಿಲ್ಲ.

ಒಂದು ವೇಳೆ ಈ ಪರಿಸ್ಥಿತಿಯಲ್ಲಿ ಜಾತ್ರೆ ಮತ್ತು ಕುಂಭೋತ್ಸವ ಜರುಗಿದಲ್ಲಿ ಗ್ರಾಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬರುವ ಸಂಭವ ಇರುವುದರಿಂದ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಸಹಾಯಕ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.

ಪೊಲೀಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ವರದಿಗಳನ್ನು ಪರಿಗಣಿಸಿ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು, ಗ್ರಾಮದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಕಲಂ 163 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಕಲಂ 35 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜೂನ್ 04 ಮತ್ತು 05 ರಂದು ನಡೆಯಬೇಕಿದ್ದ ಎಲ್ಲಾ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande