
ಕೋಲಾರ, ೨೮ ಮೇ (ಹಿ.ಸ) :
ಆ್ಯಂಕರ್ : ವಿಶ್ವ ಹಸಿವು ದಿನಾಚರಣೆಯ ಅಂಗವಾಗಿ ಹಸಿವು ಮುಕ್ತ ಸಮಾಜದ ನಿರ್ಮಾಣದ ಸಂಕಲ್ಪದೊ0ದಿಗೆ ಮಾಲೂರು ಫುಡ್ ಬ್ಯಾಂಕ್ ಹಾಗೂ ಜಯಮಂಗಲ ಗಾನಸುಧಾ ಸಾಂಸ್ಕೃತಿಕ ಕಲಾ ಸಂಸ್ಥೆ ಸಂಯುಕ್ತ ಆಶ್ರಯ ಸಮಾಜ ಸೇವಾ ಟ್ರಸ್ಟ್ನ ನಿರಾಶ್ರಿತ ಹಿರಿಯ ನಾಗರಿಕರಿಗೆ ಆಹಾರ ಮತ್ತು ಹಣ್ಣು ಹಂಪಲು ವಿತರಿಸುವ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕೆ. ಗೌತಮ್ ಅವರು ಹಿರಿಯ ನಾಗರಿಕರಿಗೆ ಹಣ್ಣು, ಬ್ರೆಡ್ ಹಾಗೂ ಬಿಸ್ಕೆಟ್ ಸೇರಿದಂತೆ ಇತರ ಪೌಷ್ಟಿಕ ಆಹಾರ ಪದಾರ್ಥಗಳನ್ನು ವಿತರಿಸಿ ಮಾತನಾಡಿದರು. ಸಮಾಜದಲ್ಲಿ ಹಸಿವಿನ ಬಿಕ್ಕಟ್ಟು ಅತ್ಯಂತ ಭೀಕರವಾಗಿದೆ ಎಂದು ವಿಷಾದಿಸಿದ ಅವರು, ಇಂದಿನ ಆಧುನಿಕ ಸಮಾಜದಲ್ಲಿ ಒಂದು ಕಡೆ ಎಷ್ಟು ಜನ ಸುಖವಾಗಿ ಊಟ ಮಾಡುತ್ತಿದ್ದಾರೋ, ಅದೇ ರೀತಿ ಮತ್ತೊಂದು ಕಡೆ ಅಷ್ಟೇ ಸಂಖ್ಯೆಯ ಜನರು ಒಂದು ಹೊತ್ತಿನ ಊಟವೂ ಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರ ಹಂಚುವುದು ಎಂದರೆ ಕೇವಲ ಹೊಟ್ಟೆ ತುಂಬಿಸುವುದಲ್ಲ, ಬದಲಾಗಿ ಅವರಲ್ಲಿ ಮಾನವೀಯತೆಯನ್ನು ಹಂಚುವುದಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಮಾಲೂರು ಫುಡ್ ಬ್ಯಾಂಕ್ನ 'ಹಸಿವಿಲ್ಲದ ಸಮಾಜ ನಮ್ಮ ಗುರಿ' ಮತ್ತು 'ಅನಾಥ, ನಿರಾಶ್ರಿತರಿಗೆ ನಮ್ಮ ಸೇವೆ' ಎಂಬ ಧ್ಯೇಯೋದ್ದೇಶಗಳ ಅಡಿಯಲ್ಲಿ ಆಯೋಜಿಸಲಾಗಿದ್ದ ಈ ಮಾನವೀಯ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಗಣ್ಯರು ಭಾಗವಹಿಸಿ ಸಾಥ್ ನೀಡಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ಎಸ್.ಜೆ. ಸುಬ್ರಮಣಿ, ಪ್ರಮುಖರಾದ ಪ್ರದೀಪ್ ಎನ್., ಪ್ರಜ್ವಲ್ ಹಾಗೂ ಭಗತ್ ಉಪಸ್ಥಿತರಿದ್ದು, ಸಂಸ್ಥೆಯ ಈ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಆಶ್ರಯ ಸಮಾಜ ಸೇವಾ ಟ್ರಸ್ಟ್ನ ಪದಾಧಿಕಾರಿಗಳು ಹಾಗೂ ಹಿರಿಯ ನಾಗರಿಕರು ತಮಗೆ ಒದಗಿಸಿದ ಆಸರೆ ಮತ್ತು ಹಣ್ಣು-ಆಹಾರ ವಿತರಣೆಗೆ ಮಾಲೂರು ಫುಡ್ ಬ್ಯಾಂಕ್ ಹಾಗೂ ಗಾನಸುಧಾ ಸಂಸ್ಥೆಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್