
ಬೆಂಗಳೂರು, 28 ಮೇ (ಹಿ.ಸ.) :
ಆ್ಯಂಕರ್ : ಕರ್ನಾಟಕ ಕೃಷಿ ವಿಶ್ವವಿದ್ಯಾನಿಲಯಗಳ ಕುಲಪತಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಅರ್ಹತಾಧಾರಿತ ವ್ಯವಸ್ಥೆ ಜಾರಿಗೆ ಬರಬೇಕೆಂದು ಆಗ್ರಹಿಸಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಅಧ್ಯಾಪಕರು, ವಿಜ್ಞಾನಿಗಳು ಹಾಗೂ ಹಳೆ ವಿದ್ಯಾರ್ಥಿಗಳು ರಾಜ್ಯಪಾಲರಿಗೆ ಸಾಮೂಹಿಕ ಮನವಿ ಸಲ್ಲಿಸಿದ್ದಾರೆ.
ಇತ್ತೀಚೆಗೆ ಬೀದರ್ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿಶ್ರಾಂತ ಕುಲಪತಿ ಹಾಗೂ ನಿವೃತ್ತ ಹಣಕಾಸು ಅಧಿಕಾರಿಯ ಬಂಧನವಾಗಿರುವ ಘಟನೆ ವ್ಯವಸ್ಥೆಯ ಮೇಲಿನ ಆತಂಕವನ್ನು ಹೆಚ್ಚಿಸಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದು “ಹಿಮಪರ್ವತದ ತುದಿ” ಮಾತ್ರವಾಗಿದ್ದು, ಒಳಮಟ್ಟದಲ್ಲಿ ಇನ್ನಷ್ಟು ಗಂಭೀರ ಅಕ್ರಮಗಳು ಇರುವ ಸಾಧ್ಯತೆ ಇದೆ ಎಂಬ ಶಂಕೆಯನ್ನು ನಿವೃತ್ತರು ವ್ಯಕ್ತಪಡಿಸಿದ್ದಾರೆ.
ಮನವಿಯಲ್ಲಿ, ಕುಲಪತಿ ಆಯ್ಕೆ ಪ್ರಕ್ರಿಯೆಯಲ್ಲಿನ ಶೋಧನಾ ಸಮಿತಿಯ ಪಾತ್ರ ಅತ್ಯಂತ ನಿರ್ಣಾಯಕವಾಗಿದ್ದು, ಅದರ ರಚನೆ ಹಾಗೂ ಕಾರ್ಯವೈಖರಿಯಲ್ಲಿ ರಾಜಕೀಯ ಪ್ರಭಾವ, ಹಣದ ಒತ್ತಡ ಮತ್ತು ಶೈಕ್ಷಣಿಕೇತರ ಹಸ್ತಕ್ಷೇಪ ಹೆಚ್ಚುತ್ತಿರುವ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಶೋಧನಾ ಸಮಿತಿಗಳ ಕಾರ್ಯವೈಖರಿಯಲ್ಲಿ ಸಂಪೂರ್ಣ ಪಾರದರ್ಶಕತೆ, ಅಭ್ಯರ್ಥಿಗಳ ನಡವಳಿಕೆ ಪರಿಶೀಲನೆ ಹಾಗೂ ಫೊರೆನ್ಸಿಕ್ ಹಣಕಾಸು ಪರಿಶೀಲನೆ ಮತ್ತು ಆಸ್ತಿ ಪರಿಶೀಲನೆಗಳನ್ನು ಕಡ್ಡಾಯಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.