
ಹಾವೇರಿ, 28 ಮೇ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಕುರಿತು ಮಾಜಿ ಸಚಿವ ಬಿ.ಸಿ. ಪಾಟೀಲ್ ಭಾವುಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ಸಿದ್ದರಾಮಯ್ಯ ಅವರ ರಾಜೀನಾಮೆ ಮತ್ತು ವಿದಾಯ ತನ್ನೊಳಗೆ ಅನಿರೀಕ್ಷಿತ ನೋವನ್ನುಂಟುಮಾಡಿದೆ ಎಂದು ಹೇಳಿದ್ದಾರೆ.
“ನಾನು ಆ ಪಕ್ಷದಲ್ಲಿ ಇರದಿದ್ದರೂ ಅವರೊಂದಿಗೆ ನನ್ನ ಒಡನಾಟವನ್ನು ಮರೆಯಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.
ತಮ್ಮ ರಾಜಕೀಯ ಪಯಣವನ್ನು ನೆನಪಿಸಿಕೊಂಡ ಅವರು, 2004ರಿಂದ ಶಾಸಕರಾಗಿ ಸಿದ್ದರಾಮಯ್ಯ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.
2006ರಲ್ಲಿ ಅವರು ಕಾಂಗ್ರೆಸ್ಗೆ ಸೇರ್ಪಡೆಗೊಂಡ ಸಂದರ್ಭ ವಿರೋಧ ಇದ್ದರೂ, ನಂತರದ ದಿನಗಳಲ್ಲಿ ಸಂಬಂಧ ಸುಧಾರಿತವಾಗಿದ್ದನ್ನು ಅವರು ವಿವರಿಸಿದರು.
2008ರಲ್ಲಿ ಕಾಂಗ್ರೆಸ್ಗೆ ಬಂದ ಬಳಿಕ ಸಿದ್ದರಾಮಯ್ಯ ಅವರು ತಮ್ಮನ್ನು ಯಾವುದೇ ವೈಷಮ್ಯವಿಲ್ಲದೆ ಬೆಂಬಲಿಸಿದ್ದಾಗಿ ಬಿ.ಸಿ. ಪಾಟೀಲ್ ಹೇಳಿದರು. “ನನ್ನನ್ನು ‘ಬಿಸಿ’ ಎಂದು ಆತ್ಮೀಯವಾಗಿ ಕರೆಯುತ್ತಿದ್ದರು” ಎಂದು ಅವರು ನೆನಪಿಸಿಕೊಂಡಿದ್ದಾರೆ.
2013ರಲ್ಲಿ ಚುನಾವಣೆಯಲ್ಲಿ ಸೋತ ಸಂದರ್ಭದಲ್ಲೂ ತಮ್ಮ ಕ್ಷೇತ್ರಕ್ಕೆ ನಾಲ್ಕು ನೀರಾವರಿ ಯೋಜನೆಗಳನ್ನು ನೀಡಿದುದನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದರು. “ಅದನ್ನು ನನ್ನ ಕ್ಷೇತ್ರದ ಜನರೂ ಎಂದಿಗೂ ಮರೆಯುವುದಿಲ್ಲ” ಎಂದು ಹೇಳಿದರು.
ಸಿದ್ದರಾಮಯ್ಯ ಅವರ ನಾಯಕತ್ವ ಶೈಲಿ, ಗಂಭೀರತೆ ಮತ್ತು ಅಧಿಕಾರದ ಮೇಲೆ ಅವರ ಹಿಡಿತವು ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ತಂದುಕೊಟ್ಟಿತ್ತು ಎಂದು ಅವರು ಪ್ರಶಂಸಿಸಿದರು. ಅಧಿಕಾರ ಶಾಶ್ವತವಲ್ಲ ಎಂಬುದನ್ನು ಅವರು ತಮ್ಮ ರಾಜೀನಾಮೆಯ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಅವರು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ, ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಬೇಕು ಎಂದು ಬಿ.ಸಿ. ಪಾಟೀಲ್ ಹಾರೈಸಿದರು. “ಅವರು ಇತಿಹಾಸಕಾರ, ಅರ್ಥಶಾಸ್ತ್ರಜ್ಞ, ಚಾಣಾಕ್ಷ ಹಾಗೂ ನೇರ ನಿಷ್ಠುರ ನಾಯಕ” ಎಂದು ಬಿ.ಸಿ.ಪಾಟೀಲ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.