
ಹೈದರಾಬಾದ್, 27 ಮೇ (ಹಿ.ಸ.) :
ಆ್ಯಂಕರ್ : ತೆಲಂಗಾಣದ ಭೂಭಾರತಿ ಕಾಯ್ದೆ ದೇಶಕ್ಕೆ ಮಾದರಿಯಾಗುತ್ತಿದೆ ಎಂದು ತೆಲಂಗಾಣ ರಾಜ್ಯದ ಆದಾಯ ಮತ್ತು ಗೃಹ ನಿರ್ಮಾಣ ಸಚಿವ ಪೊಂಗುಲೆಟಿ ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ. ಹಿಂದೂಸ್ಥಾನ್ ಸಮಾಚಾರಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಚುನಾವಣಾ ಭರವಸೆಗಳ ಅನುಷ್ಠಾನ, ಭೂಭಾರತಿ ಸುಧಾರಣೆಗಳು, ಆದಾಯ ಇಲಾಖೆಯ ಡಿಜಿಟಲೀಕರಣ, ಎನಿಮಿ ಪ್ರಾಪರ್ಟಿಗಳ ರಕ್ಷಣೆ, ಇಂದಿರಮ್ಮ ಗೃಹ ಯೋಜನೆ, ಹೂಡಿಕೆ, ಉದ್ಯೋಗ, ಹೈದರಾಬಾದ್ ಅಭಿವೃದ್ಧಿ, ವಿಮಾನ ನಿಲ್ದಾಣ ವಿಸ್ತರಣೆ, ರೈತರ ಕಲ್ಯಾಣ ಹಾಗೂ ತೆಲಂಗಾಣದ ರಾಜಕೀಯ ಭವಿಷ್ಯದ ಕುರಿತು ವಿವರವಾಗಿ ಮಾತನಾಡಿದರು.
ಭೂಭಾರತಿ ಕಾಯ್ದೆ ದೇಶದ ಇತರೆ ರಾಜ್ಯಗಳಿಗೆ ಮಾರ್ಗದರ್ಶಕ ಮಾದರಿಯಾಗಿ ಹೊರಹೊಮ್ಮುತ್ತಿದೆ, ₹10,000 ಕೋಟಿ ಮೌಲ್ಯದ ಸಣ್ಣ ಆಸ್ತಿಗಳ ರಕ್ಷಣೆಗೆ ಕಠಿಣ ಕ್ರಮ ಕೈಗೊಂಡಿದ್ದು, ಇಂದಿರಮ್ಮ ಗೃಹ ನಿರ್ಮಾಣ ಯೋಜನೆ ವೇಗವಾಗಿ ಜಾರಿಯಲ್ಲಿದೆ ಎಂದು ತಿಳಿಸಿದರು.
ಹೂಡಿಕೆ, ಮೂಲಸೌಕರ್ಯ ಹಾಗೂ ಉದ್ಯೋಗ ಸೃಷ್ಟಿಗೆ ತೆಲಂಗಾಣ ಸರ್ಕಾರದ ಆದ್ಯತೆ ನಿಡಿದ್ದು, ಬಿಆರ್ಎಸ್ ಪಕ್ಷದ ಅಧ್ಯಾಯ ತೆಲಂಗಾಣದಲ್ಲಿ ಮುಕ್ತಾಯಗೊಂಡಿದೆ” ಎಂದಿದ್ದಾರೆ.
ಸಂದರ್ಶನದ ಪ್ರಮುಖ ಅಂಶಗಳು:
ಪ್ರಶ್ನೆ: ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರದ ಎರಡುವರೆ ವರ್ಷದ ಆಡಳಿತದಲ್ಲಿ ಚುನಾವಣಾ ಭರವಸೆಗಳನ್ನು ಎಷ್ಟು ಮಟ್ಟಿಗೆ ಈಡೇರಿಸಿದ್ದೀರಿ?
ಉತ್ತರ: ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಗಳಲ್ಲಿ ಸುಮಾರು 80 ಶೇಕಡಾವನ್ನು ನಾವು ಜಾರಿಗೆ ತಂದಿದ್ದೇವೆ. ಜೊತೆಗೆ ಚುನಾವಣಾ ಘೋಷಣೆಯಲ್ಲಿ ಸ್ಪಷ್ಟವಾಗಿ ಹೇಳದಿದ್ದ ಹಲವಾರು ಹೊಸ ಯೋಜನೆಗಳನ್ನೂ ಆರಂಭಿಸಿದ್ದೇವೆ. ಅಂದಿನ ಪಾದಯಾತ್ರೆಗಳ ವೇಳೆ ಈಗಿನ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಉಪ ಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ನೀಡಿದ್ದ ಮಾತುಗಳನ್ನು ಸರ್ಕಾರ ರಚನೆಯಾದ ತಕ್ಷಣವೇ ಜಾರಿಗೊಳಿಸಲಾಯಿತು.
ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ‘ಧರಣಿ’ ಪೋರ್ಟಲ್ನಿಂದ ಲಕ್ಷಾಂತರ ರೈತರು ಮತ್ತು ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದರು. ಅದನ್ನು ರದ್ದುಪಡಿಸಿ, ಸಮಾಜದ ಎಲ್ಲಾ ವರ್ಗಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ‘ಭೂಭಾರತಿ ಕಾಯ್ದೆ’ ರೂಪಿಸಲಾಗಿದೆ. ಈ ಕಾಯ್ದೆ ಈಗ ದೇಶದ ಇತರೆ ರಾಜ್ಯಗಳಿಗೆ ದಿಕ್ಕು ತೋರಿಸುವ ಮಾದರಿಯಾಗಿದೆ.
ಪ್ರಶ್ನೆ: ಭೂಭಾರತಿ ಪೋರ್ಟಲ್ ಹಾಗೂ ಅದರ ಸೇವೆಗಳ ಬಗ್ಗೆ ವಿವರಿಸಿ.
ಉತ್ತರ: ರೈತರಿಗೆ ಪಾರದರ್ಶಕ ಹಾಗೂ ಸುಲಭ ಸೇವೆ ಒದಗಿಸುವ ಉದ್ದೇಶದಿಂದ ಭೂಮಿ, ಸರ್ವೇ ಹಾಗೂ ನೋಂದಣಿ ಇಲಾಖೆಗಳನ್ನು ಒಗ್ಗೂಡಿಸಿ ‘ಭೂಭಾರತಿ’ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ. ರೈತರು ಮನೆಯಲ್ಲಿ ಭೂಸಂಬಂಧಿತ ಸೇವೆಗಳನ್ನು ಪಡೆಯುವಂತೆ ವ್ಯವಸ್ಥೆ ಮಾಡಿದ್ದೇವೆ. ಮೊದಲು ಇದ್ದಂತೆ ‘ಮೀಸೇವಾ’ ಕೇಂದ್ರಗಳಿಗೆ ತೆರಳಬೇಕಾದ ಅಗತ್ಯವಿಲ್ಲ.
ಕೃಷಿ ಭೂಮಿ ನೋಂದಣಿಯ ವೇಳೆ ಸರ್ವೇ ನಕ್ಷೆಯನ್ನು ಕಡ್ಡಾಯವಾಗಿ ಜೋಡಿಸುವ ನಿಯಮ ಜಾರಿಗೊಳಿಸಲಾಗಿದೆ. ಪ್ರತಿಯೊಂದು ಸರ್ವೇ ನಕ್ಷೆಗೆ ವಿಶಿಷ್ಟ ಎಲ್ಪಿಎಂ ಸಂಖ್ಯೆ ಹಾಗೂ ಪ್ರತಿ ಸರ್ವೇ ಸಂಖ್ಯೆಗೆ ಆಧಾರ್ ಮಾದರಿಯ ‘ಭೂಧಾರ್’ ಸಂಖ್ಯೆ ನೀಡಲಾಗುತ್ತಿದೆ. ಪ್ರಾಯೋಗಿಕವಾಗಿ ಐದು ಮಂಡಲಗಳಲ್ಲಿ ಯೋಜನೆ ಆರಂಭಿಸಲಾಗಿದೆ.
ಪ್ರಶ್ನೆ: ಎನಿಮಿ ಪ್ರಾಪರ್ಟಿ ಹಾಗೂ ವಿವಾದಿತ ಸರ್ಕಾರಿ ಭೂಮಿಗಳ ರಕ್ಷಣೆಗೆ ಸರ್ಕಾರ ಏನು ಮಾಡುತ್ತಿದೆ?
ಉತ್ತರ: ರಾಜ್ಯದಾದ್ಯಂತ ಇರುವ ಎನಿಮಿ ಪ್ರಾಪರ್ಟಿಗಳ ರಕ್ಷಣೆ ಹಾಗೂ ಅಕ್ರಮ ಅತಿಕ್ರಮಣ ತಡೆಯುವ ಕೆಲಸಕ್ಕೆ ಆದ್ಯತೆ ನೀಡಲಾಗಿದೆ. ರಾಜ್ಯದಲ್ಲಿ ಸುಮಾರು ₹10,000 ಕೋಟಿ ಮೌಲ್ಯದ ಎನಿಮಿ ಪ್ರಾಪರ್ಟಿಗಳು ಇವೆ.
ಈ ಆಸ್ತಿಗಳ ಸಮಗ್ರ ಸರ್ವೇ ಹಾಗೂ ದಾಖಲೆಗಳ ಡಿಜಿಟಲೀಕರಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ‘ಕಸ್ಟೋಡಿಯನ್ ಆಫ್ ಎನಿಮಿ ಪ್ರಾಪರ್ಟಿ ಫಾರ್ ಇಂಡಿಯಾ’ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಭೂಮಿಗಳ ಗುರುತು ಹಾಗೂ ರಕ್ಷಣಾ ಕಾರ್ಯ ವೇಗಗೊಳಿಸಲಾಗಿದೆ.
ಪ್ರಶ್ನೆ: ಚುನಾವಣಾ ಭರವಸೆಗಳನ್ನು ಈಡೇರಿಸಿಲ್ಲ ಎಂಬ ವಿರೋಧ ಪಕ್ಷದ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಉತ್ತರ: ಹಿಂದಿನ ಭಾರತ ರಾಷ್ಟ್ರ ಸಮಿತಿ ಸರ್ಕಾರ ₹8 ಲಕ್ಷ ಕೋಟಿಗೂ ಅಧಿಕ ಸಾಲದ ಹೊರೆ ಇರುವ ರಾಜ್ಯವನ್ನು ನಮಗೆ ಬಿಟ್ಟಿತ್ತು. ಪ್ರತಿ ತಿಂಗಳು ₹6,500 ಕೋಟಿ ಬಡ್ಡಿ ಪಾವತಿಸಬೇಕಾಗಿದೆ. ಆದರೂ ಹಣಕಾಸು ಶಿಸ್ತನ್ನು ಪಾಲಿಸಿಕೊಂಡೇ ಕಲ್ಯಾಣ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದೇವೆ.
ಕರ್ನಾಟಕದ ನಂತರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಗೆ ತಂದ ದೇಶದ ಎರಡನೇ ಕಾಂಗ್ರೆಸ್ ಸರ್ಕಾರ ತೆಲಂಗಾಣವೇ. ನಂತರ ಆಂಧ್ರಪ್ರದೇಶ ಸೇರಿ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳು ಇದೇ ಮಾದರಿಯನ್ನು ಅನುಸರಿಸಿವೆ.
ಪ್ರಶ್ನೆ: ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆ ಯಾವುದು?
ಉತ್ತರ: ರಾಜ್ಯದಲ್ಲಿ ಸುಮಾರು 100 ಹೊಸ ಯೋಜನೆಗಳು ಜಾರಿಯಲ್ಲಿವೆ. ಅವುಗಳಲ್ಲಿ ‘ಇಂದಿರಮ್ಮ ಗೃಹ ಯೋಜನೆ’ ದೇಶಕ್ಕೇ ಮಾದರಿಯಾಗಿದೆ. ಸ್ವಂತ ಜಾಗವಿದ್ದರೂ ಮನೆ ಕಟ್ಟಲು ಸಾಧ್ಯವಾಗದ ಬಡ ಕುಟುಂಬಗಳಿಗೆ ₹5 ಲಕ್ಷ ಆರ್ಥಿಕ ನೆರವು ನೀಡಲಾಗುತ್ತಿದೆ.
ಮೊದಲ ವರ್ಷದಲ್ಲೇ 3.60 ಲಕ್ಷ ಮನೆಗಳಿಗೆ ಮಂಜೂರು ನೀಡಲಾಗಿದೆ. ಅವುಗಳಲ್ಲಿ 2 ಲಕ್ಷ ಮನೆಗಳಲ್ಲಿ ಈಗಾಗಲೇ ಗೃಹ ಪ್ರವೇಶ ನಡೆದಿದೆ. ಮುಂದಿನ ಮೂರು ಹಂತಗಳಲ್ಲಿ ಇನ್ನಷ್ಟು ಮನೆಗಳನ್ನು ಮಂಜೂರು ಮಾಡುತ್ತೇವೆ. ಜೂನ್ 2ರಂದು ಆಸಿಫಾಬಾದ್ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಎರಡನೇ ಹಂತಕ್ಕೆ ಚಾಲನೆ ನೀಡಲಿದ್ದಾರೆ.
ಪ್ರಶ್ನೆ: ಯೋಜನೆ ಜಾರಿಯಲ್ಲಿ ನಿಮಗೆ ಹೆಚ್ಚು ಮನಸ್ಸಿಗೆ ತಟ್ಟಿದ ಘಟನೆ ಯಾವುದು?
ಉತ್ತರ: ಹಲವು ಭಾವನಾತ್ಮಕ ಕ್ಷಣಗಳಿವೆ. ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿ ವಾಸಿಸಿದ್ದ ಮಹಿಳೆಯರು “ಇದು ನಮ್ಮ ಸ್ವಂತ ಮನೆ” ಎಂದು ಹೇಳಿದ ಕ್ಷಣಗಳು ಮರೆಯಲಾಗದು. ಒಬ್ಬ ವೃದ್ಧೆ “ನಾನು ಸಾಯುವ ಮೊದಲು ನನ್ನ ಹೆಸರಿನ ಮನೆ ಸಿಗುತ್ತದೆ ಎಂದು ಕನಸಲ್ಲೂ ಭಾವಿಸಿರಲಿಲ್ಲ” ಎಂದಿದ್ದರು.
ಅನೇಕ ಫಲಾನುಭವಿಗಳು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಫೋಟೋ ಹಿಡಿದು ಗೃಹಪ್ರವೇಶ ಮಾಡಿದ್ದ ದೃಶ್ಯಗಳು ಸ್ಮರಣೀಯ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಯೋಜನೆಯ ಬಗ್ಗೆ ವಿಶೇಷ ಆಸಕ್ತಿ ತೋರಿದ್ದಾರೆ.
ಪ್ರಶ್ನೆ: ‘ತೆಲಂಗಾಣ ರೈಸಿಂಗ್ ಗ್ಲೋಬಲ್ ಸಮಿಟ್–2025’ ರಾಜ್ಯಕ್ಕೆ ಎಷ್ಟು ಲಾಭ ತಂದಿತು?
ಉತ್ತರ: ತೆಲಂಗಾಣವನ್ನು ದೇಶದ ಭವಿಷ್ಯದ ಆರ್ಥಿಕ ಶಕ್ತಿಯಾಗಿ ರೂಪಿಸುವ ಉದ್ದೇಶದಿಂದ ಹೈದರಾಬಾದ್ನಲ್ಲಿ ಸಮಿಟ್ ಆಯೋಜಿಸಲಾಯಿತು. ಈ ವೇಳೆ 100ಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಮಾಡಲಾಗಿದೆ. ಸುಮಾರು ₹5.75 ಲಕ್ಷ ಕೋಟಿ ಹೂಡಿಕೆ ಆಸಕ್ತಿ ವ್ಯಕ್ತವಾಗಿದ್ದು, ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.
ಪ್ರಶ್ನೆ: ಉದ್ಯೋಗ ಹಾಗೂ ಆದಾಯ ಇಲಾಖೆಯ ಸುಧಾರಣೆಗಳ ಪ್ರಗತಿ ಹೇಗಿದೆ?
ಉತ್ತರ: ಕಳೆದ ಹತ್ತು ವರ್ಷಗಳಿಂದ ನಿಂತಿದ್ದ ನೇಮಕಾತಿ ಪ್ರಕ್ರಿಯೆಯನ್ನು ಪುನರಾರಂಭಿಸಿದ್ದೇವೆ. ಇದುವರೆಗೆ ಸುಮಾರು 70,000 ಮಂದಿಗೆ ಉದ್ಯೋಗ ನೀಡಲಾಗಿದೆ. 10,954 ಗ್ರಾಮಗಳನ್ನು ಕ್ಲಸ್ಟರ್ಗಳಾಗಿ ವಿಭಾಗಿಸಿ ಗ್ರಾಮ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ್ದೇವೆ. 5,520 ಪರವಾನಗಿ ಪಡೆದ ಸರ್ವೇಯರ್ಗಳು ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಶ್ನೆ: ಹೈದರಾಬಾದ್ ಅಭಿವೃದ್ಧಿಗೆ ಸರ್ಕಾರದ ಯೋಜನೆ ಏನು?
ಉತ್ತರ: ಹೈದರಾಬಾದ್ ಅನ್ನು ಅಂತಾರಾಷ್ಟ್ರೀಯ ಮಟ್ಟದ ನಗರವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಮೆಟ್ರೋ ರೈಲು ವಿಸ್ತರಣೆ ಆರಂಭವಾಗಿದೆ. ಕ್ಯಾಂಟೋನ್ಮೆಂಟ್ ಪ್ರದೇಶವನ್ನು ಜಿಎಚ್ಎಂಸಿಗೆ ವಿಲೀನಗೊಳಿಸಲಾಗಿದೆ.
30,000 ಎಕರೆ ಪ್ರದೇಶದಲ್ಲಿ “ಫ್ಯೂಚರ್ ಸಿಟಿ” ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದೆ. ರಾಜ್ಯವನ್ನು ಮೂರು ವಲಯಗಳಾಗಿ ವಿಭಜಿಸಲಾಗಿದೆ — ಔಟರ್ ರಿಂಗ್ ರಸ್ತೆ ಒಳಗಿನ ಪ್ರದೇಶ “ಕೋರ್ ಅರ್ಬನ್ ತೆಲಂಗಾಣ”, ಅದರ ಹೊರಭಾಗ “ಅರ್ಬನ್ ತೆಲಂಗಾಣ” ಮತ್ತು ಅದರಾಚೆಯ ಭಾಗ “ರೂರಲ್ ತೆಲಂಗಾಣ” ಎಂದು ಗುರುತಿಸಲಾಗಿದೆ.
ವಾರಂಗಲ್, ಆದಿಲಾಬಾದ್, ರಾಮಗುಂಡಂ, ಕೊತ್ತಗುಡೇಂ ಸೇರಿದಂತೆ ಹಲವು ಕಡೆ ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆ ಯೋಜನೆಯಲ್ಲಿದೆ.
ಪ್ರಶ್ನೆ: ರೈತರಿಗಾಗಿ ಸರ್ಕಾರ ಯಾವ ಯೋಜನೆಗಳನ್ನು ಜಾರಿಗೊಳಿಸಿದೆ?
ಉತ್ತರ: ರೈತು ಭರೋಸಾ ಯೋಜನೆಯಡಿ ರೈತರಿಗೆ ವರ್ಷಕ್ಕೆ ಪ್ರತಿ ಎಕರೆಗೆ ₹12,000 ನೆರವು ನೀಡಲಾಗುತ್ತಿದೆ. 2018ರಿಂದ 2023ರೊಳಗಿನ ₹2 ಲಕ್ಷದವರೆಗಿನ ಬೆಳೆ ಸಾಲ ಮನ್ನಾ ಪ್ರಕ್ರಿಯೆ ಆರಂಭಿಸಲಾಗಿದೆ.
ಉತ್ತಮ ಗುಣಮಟ್ಟದ ಭತ್ತಕ್ಕೆ ಎಂಎಸ್ಪಿ ಜೊತೆಗೆ ಪ್ರತಿ ಕ್ವಿಂಟಾಲ್ಗೆ ₹500 ಬೋನಸ್ ನೀಡಲಾಗುತ್ತಿದೆ. ರೈತ ಸಾವನ್ನಪ್ಪಿದರೆ ಕುಟುಂಬಕ್ಕೆ ₹5 ಲಕ್ಷ ವಿಮೆ ಸೌಲಭ್ಯ ಮುಂದುವರಿಸಲಾಗಿದೆ.
ರೈತು ಭರೋಸಾ ಯೋಜನೆಯಡಿ ಈಗಾಗಲೇ ₹18,000 ಕೋಟಿಗೂ ಅಧಿಕ ಮೊತ್ತವನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕೃಷಿ ಕಲ್ಯಾಣಕ್ಕಾಗಿ ₹1 ಲಕ್ಷ ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗಿದೆ.
ಪ್ರಶ್ನೆ: ಬಿಹಾರ ಮತ್ತು ಕೇರಳ ಚುನಾವಣಾ ಪ್ರಚಾರದ ಅನುಭವ ಹೇಗಿತ್ತು?
ಉತ್ತರ: ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಪ್ರಚಾರದಲ್ಲಿ ಭಾಗವಹಿಸಿದ್ದೆ. ಬಿಹಾರದಲ್ಲಿ ಮೂರು ಕ್ಷೇತ್ರಗಳ ವೀಕ್ಷಕರಾಗಿ ಕೆಲಸ ಮಾಡಿದೆ. ಅವುಗಳಲ್ಲಿ ಒಂದರಲ್ಲಿ ಗೆಲುವು ಸಾಧಿಸಿದ್ದೇವೆ.
ಕೇರಳದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿದಂತೆ ಹಲವು ಸಚಿವರು ಪ್ರಚಾರ ನಡೆಸಿದರು. ರಾಹುಲ್ ಗಾಂಧಿ ಅವರ ಪ್ರಭಾವ ಸ್ಪಷ್ಟವಾಗಿ ಕಂಡುಬಂತು.
ಪ್ರಶ್ನೆ: 2029ರಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ನಿಮಗೆ ಎಷ್ಟು ವಿಶ್ವಾಸ ಇದೆ?
ಉತ್ತರ: 119 ವಿಧಾನಸಭಾ ಕ್ಷೇತ್ರಗಳಲ್ಲಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಜನರು ನಮ್ಮೊಂದಿಗಿದ್ದಾರೆ. ಭ್ರಷ್ಟಾಚಾರವಿಲ್ಲದ ಆಡಳಿತ ಮತ್ತು ಜನಕಲ್ಯಾಣ ಯೋಜನೆಗಳೇ ನಮ್ಮ ಬಲ.
ಸಂಸದೀಯ ಚುನಾವಣೆ, ಉಪಚುನಾವಣೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಬೆಂಬಲ ನೀಡಿದ್ದಾರೆ. ಬಿಆರ್ಎಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಕನಸು ಕಾಣುತ್ತಿದೆ. ಆದರೆ ತೆಲಂಗಾಣದಲ್ಲಿ ಆ ಪಕ್ಷದ ಅಧ್ಯಾಯ ಮುಕ್ತಾಯಗೊಂಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.