ತೋಟಗಾರಿಕಾ ಇಲಾಖೆಯಿಂದ ವಿಶ್ವ ಜೇನುನೊಣ ದಿನಾಚರಣೆ
ತೋಟಗಾರಿಕಾ ಇಲಾಖೆಯಿಂದ ವಿಶ್ವ ಜೇನುನೊಣ ದಿನಾಚರಣೆ ಮೇಲಿಂದ
ಭಾರತದ ಜೇನುನೊಣ ಚಿಕಿತ್ಸಾ ಸಂಘದ ನಿರ್ದೇಶಕ ಡಾ. ಎಚ್. ಆರ್. ಭಾರ್ಗವ ಅವರನ್ನು ಕೋಲಾರ ಜಿಲ್ಲಾ ತೋಟಗಾರಿಕೆ ಇಲಾಖೆ, ಭಾರತದ ಜೇನುನೊಣಗಳ ಚಿಕಿತ್ಸಾ ಸಂಘದ ಸಹಯೋಗದೊಂದಿಗೆ ನಗರದ ತೋಟಗಾರಿಕಾ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಡೆದ ವಿಶ್ವ ಜೇನುನೊಣ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.


ಕೋಲಾರ, ೨೭ ಮೇ (ಹಿ.ಸ) :

ಆ್ಯಂಕರ್ : ಜೇನುನೊಣಗಳು ಪ್ರಕೃತಿಯ ಅತ್ಯಂತ ಪರಿಣಾಮಕಾರಿ ಪರಾಗಸ್ಪರ್ಶಕಗಳಾಗಿ ಕಾರ್ಯನಿರ್ವಹಿಸುವ ಮೂಲಕ ಅಡ್ಡ-ಪರಾಗಸ್ಪರ್ಶ ಹಣ್ಣುಗಳು, ತರಕಾರಿಗಳು ಮತ್ತು ಎಣ್ಣೆಬೀಜಗಳ ಇಳುವರಿ ಮತ್ತು ಗುಣಮಟ್ಟವನ್ನು ನೇರವಾಗಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಭಾರತದ ಜೇನುನೊಣ ಚಿಕಿತ್ಸಾ ಸಂಘದ ನಿರ್ದೇಶಕ ಡಾ. ಎಚ್. ಆರ್. ಭಾರ್ಗವ ತಿಳಿಸಿದರು.

ಜಿಲ್ಲಾ ತೋಟಗಾರಿಕೆ ಇಲಾಖೆ, ಭಾರತದ ಜೇನುನೊಣಗಳ ಚಿಕಿತ್ಸಾ ಸಂಘದ ಸಹಯೋಗದೊಂದಿಗೆ ನಗರದ ತೋಟಗಾರಿಕಾ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಡೆದ ವಿಶ್ವ ಜೇನುನೊಣ ದಿನಾಚರಣೆ ಕಾರ್ಯಕ್ರಮ, ಹಾಗೂ ವಿಶೇಷ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಈ ಕಾರ್ಯಕ್ರಮ `ರೈತರ ಸಮೃದ್ಧಿಗೆ ನಮ್ಮ ಬದ್ಧತೆ' ಎಂಬ ವಿಷಯದ ಮೇಲೆ ನಡೆಯುತ್ತಿದ್ದು, ಜೇನುನೊಣಗಳ ಪ್ರಾಥಮಿಕ ಮೌಲ್ಯವು ಜೇನು ಉತ್ಪಾದನೆಗೆ ಮಾತ್ರವೇ ಸೀಮಿತವಲ್ಲ, ಮಾನವನ ಉಳಿವು ಜೇನುನೊಣಗಳನ್ನು ರಕ್ಷಿಸುವುದರ ಮೇಲೆ ಅವಲಂಬಿತವಾಗಿದೆ. ಬೃಹತ್ ವಸಾಹತು ಕುಸಿತವನ್ನು ತಡೆಗಟ್ಟಲು ರಾಸಾಯನಿಕ ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಲು ಕರೆ ನೀಡಿದ ಅವರು, ರಸಾಯನಿಕ ಕೀಟನಾಶಕಗಳ ಬದಲಾಗಿ, ಜೇನುನೊಣಗಳ ಜನಸಂಖ್ಯೆಯನ್ನು ಮಾರಕ ರಾಸಾಯನಿಕ ಒಡ್ಡುವಿಕೆಯಿಂದ ರಕ್ಷಿಸಲು ಪರಿಸರ ಸ್ನೇಹಿ ಜೈವಿಕ-ಕೀಟನಾಶಕಗಳನ್ನು ಬೆಳೆಗಳಿಗೆ ಬಳಸಲು ಕರೆ ನೀಡಿದರು.

ಜೇನುನೊಣಗಳ ಜೀವನ ಶೈಲಿ,ಬದುಕಿನ ಕುರಿತು ವಿವರವಾಗಿ ತಿಳಿಸಿದ ಡಾ.ಭಾರ್ಗವ, ರಾಣಿ ಜೇನುನೊಣ ಪ್ರತಿದಿನ ೨ ಸಾವಿರ ಮೊಟ್ಟೆಗಳನ್ನು ಇಡುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತದೆ ಅದೇ ರೀತಿ ಡ್ರೋನ್ ಜೇನುನೊಣವಾದ ಫಲವತ್ತಾದ ಗಂಡು ಜೇನುನೊಣಗಳು ಏಕೈಕ ಜೈವಿಕ ಉದ್ದೇಶ ಸಂಯೋಗದ ಕಾರ್ಯವನ್ನು ನಿರ್ವಹಿಸುತ್ತವೆ. ಉಳಿದಂತೆ ಕೆಲಸಗಾರ ಜೇನುನೊಣಗಳು ಹೂಗಳನ್ನು ಹಾಗೂ ಮಕರಂದವನ್ನು ಹುಡುಕುವ ಮತ್ತು ಜೇನುಗೂಡಿನ ಕಾವಲು ಕಾಯುವ ಫಲವತ್ತಾದ ಹೆಣ್ಣುಗಳು ಒಂದು ಗುಂಪು ಇರುತ್ತದೆ, ಜತೆಗೆ ನರ್ಸ್ ಜೇನುನೊಣಗಳು ಲಾರ್ವಾಗಳು ಮತ್ತು ರಾಣಿಗೆ ಆಹಾರವನ್ನು ನೀಡುವ ಕಾರ್ಯವನ್ನು ಹೊಂದಿರುವ ಯುವ ಕೆಲಸಗಾರರರಂತೆ ಕೆಲಸ ಮಾಡುತ್ತವೆ ಎಂದು ತಿಳಿಸಿದರು.

ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಕುಮಾರ್ ಸ್ವಾಮಿ ಮಾತನಾಡಿ, ಜೇನುನೊಣ ಭೂಮಿಯ ಮೇಲಿಂದ ಕಣ್ಮರೆಯಾದರೆ, ಮನುಷ್ಯನಿಗೆ ನಾಲ್ಕು ವರ್ಷಗಳಿಗಿಂತ ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ ಎಂಬ ಸತ್ಯ ಅರಿಯಬೇಕು ಎಂದು ಸ್ಪಷ್ಟ ಸಂದೇಶ ನೀಡಿದ ಅವರು, ಸುಸ್ಥಿರ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಬ್ಬರೂ ಜೇನುನೊಣ ಸ್ನೇಹಿ ಹೂವುಗಳನ್ನು ನೆಡಬೇಕು ಮತ್ತು ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸಬೇಕು ಎಂದು ಸಲಹೆ ನೀಡಿದರು.

ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ.ಶಿವಾರೆಡ್ಡಿ ಮಾತನಾಡಿ, ಜೇನು ಕೃಷಿ ಹೆಚ್ಚು ಲಾಭದಾಯಕವಾಗಿದೆ ಎಂಬುದು ಮಾತ್ರವಲ್ಲ, ರೈತರ ಸ್ನೇಹಿಯಾಗಿ ಈ ನೊಣಗಳು ಕೆಲಸ ಮಾಡುತ್ತಿದ್ದು, ರೈತರು ಬೆಳೆಯುವ ಬೆಳೆಗಳಲ್ಲಿ ಪರಾಗಸ್ಪರ್ಶ ನಡೆಸಿ ಉತ್ತಮ ಇಳುವರಿಗೆ ಕಾರಣವಾಗಿವೆ. ಜೇನು ನೊಣಗಳು ಜೇನು ಉತ್ಪಾದನೆಗೆ ಸೀಮಿತವಲ್ಲ, ಇವು ನಮ್ಮ ಆಹಾರ ಉತ್ಪಾದನೆಯ ಮೇಲೆ ಅತಿ ಹೆಚ್ಚು ಪರಿಣಾಮ ಬೀರುತ್ತವೆ, ಇವುಗಳನ್ನು ಇಂದು ಬಳಸುವ ಕೀಟನಾಶಗಳು, ಪರಿಸರ ಮಾಲಿನ್ಯದಿಂದ ರಕ್ಷಿಸುವ ಕೆಲಸವನ್ನು ರೈತರು ಮಾಡಬೇಕು, ಅವುಗಳಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಬೇಕು ಎಂದು ಕೋರಿದರು.

ಸ್ಥಳೀಯ ರೈತರು, ಜೇನುಸಾಕಣೆದಾರರು ಮತ್ತು ವಿದ್ಯಾರ್ಥಿಗಳ ಜೊತೆಗೆ ಸಂವಾದವನ್ನು ನಡೆಸಲಾಯಿತು. ತರಬೇತಿ ಅಧಿವೇಶನದಲ್ಲಿ ಜೇನುನೊಣಗಳ ಜೀವನ ಶೈಲಿ, ಅವುಗಳ ರಕ್ಷಣೆ, ಜೇನು ಉತ್ಪಾದನೆ ಹೆಚ್ಚಿಸುವುದು ಮತ್ತಿತರ ಅಂಶಗಳ ಕುರಿತು ಚರ್ಚಿಸಲಾಯಿತು.

ಕಾರ್ಯಾಗಾರದಲ್ಲಿ ವೈವಿಧ್ಯಮಯ, ಹೆಚ್ಚಿನ ಮೌಲ್ಯದ ಜೇನುಸಾಕಣೆ ಉತ್ಪನ್ನಗಳನ್ನು ಕೊಯ್ಲು ಮಾಡುವ ಬಗ್ಗೆ ಪ್ರಾಯೋಗಿಕ ಮಾರ್ಗದರ್ಶನವನ್ನು ನೀಡಲಾಯಿತು. ಇವುಗಳಲ್ಲಿ ಜೇನುನೊಣ ಪರಾಗ ಜೇನುಮೇಣದಿಂದ ಸೌಂದರ್ಯವರ್ಧಕಗಳು ಮತ್ತು ಮೇಣದಬತ್ತಿಗಳು, ರಾಯಲ್ ಜೆಲ್ಲಿ ಪ್ರೋಪೋಲಿಸ್ ಬ್ಯಾಕ್ಟೀರಿಯಾ ವಿರೋಧಿ ರಾಳ, ಮತ್ತು ಜೇನುನೊಣ ವಿಷ ಸಂಧಿವಾತಕ್ಕೆ ಅಪಿಥೆರಪಿಯಲ್ಲಿ ಬಳಸುವ ಜೇನುನೊಣದ ವಿಷ ಮತ್ತಿತರ ಅಂಶಗಳ ಕುರಿತು ತಿಳಿಸಿಕೊಡಲಾಯಿತು.

ಕಾರ್ಯಕ್ರಮದಲ್ಲಿ ಮುಳಬಾಗಿಲು ತಾಲೂಕು ತೋಟಗಾರಿಕಾ ಸಹಾಯಕ ನಿರ್ದೇಶಕ ಎಸ್.ಎ.ರವಿಕುಮಾರ್, ಸಹಾಯಕ ತೋಟಗಾರಿಕೆ ಅಧಿಕಾರಿ ಎಂ.ಲಾವಣ್ಯ, ಸಂದೀಪ್, ಪುನೀತ್, ಸೌಮ್ಯ, ರಾಘವೇಂದ್ರ, ಕೆ.ಸಿ.ವಿನಯ್ ಕುಮಾರ್ ಇತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande