
ಗದಗ, 27 ಮೇ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆ ಡೆಂಗೀ, ಮಲೇರಿಯಾ, ಚಿಕೂನ್ಗುನ್ಯಾ ಸೇರಿದಂತೆ ವಿವಿಧ ಕೀಟಜನ್ಯ ರೋಗಗಳು ಹರಡದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗದಗ ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯ ಸಭಾಂಗಣದಲ್ಲಿಂದು ನಡೆದ ರಾಷ್ಟ್ರೀಯ ಡೆಂಗೀ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೀಟಜನ್ಯ ರೋಗಗಳ ನಿಯಂತ್ರಣವು ಕೇವಲ ಆರೋಗ್ಯ ಇಲಾಖೆಯ ಜವಾಬ್ದಾರಿಯಲ್ಲ; ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಪರಿಣಾಮಕಾರಿ ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಮಲೇರಿಯಾ, ಡೆಂಗೀ ಹಾಗೂ ಚಿಕೂನ್ಗುನ್ಯಾ ರೋಗಗಳು ಹರಡದಂತೆ ಮುಂಚಿತ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ, ಆರೋಗ್ಯ ಜಾಗೃತಿ ಮತ್ತು ಸೊಳ್ಳೆ ನಿಯಂತ್ರಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಾರ್ವಜನಿಕ ನಲ್ಲಿಗಳು, ಕೊಳವೆಬಾವಿಗಳು ಹಾಗೂ ನೀರು ನಿಲ್ಲುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ನಿಯಮಿತ ಪರಿಶೀಲನೆ ನಡೆಸಿ, ನೀರು ಸರಾಗವಾಗಿ ಹರಿದು ಹೋಗುವಂತೆ ಸೂಕ್ತ ವ್ಯವಸ್ಥೆ ಮಾಡಬೇಕು. ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ಪತ್ತೆಹಚ್ಚಿ, ಅಲ್ಲಿ ಸೊಳ್ಳೆನಾಶಕ ದ್ರಾವಣ ಸಿಂಪಡಿಸುವ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳನ್ನು ಆಯೋಜಿಸಿ, ಡೆಂಗೀ ಹಾಗೂ ಇತರೆ ಕೀಟಜನ್ಯ ರೋಗಗಳ ಕುರಿತು ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳ ಮೂಲಕ ಕುಟುಂಬಗಳಲ್ಲಿಯೂ ಸ್ವಚ್ಛತೆ ಹಾಗೂ ಮುನ್ನೆಚ್ಚರಿಕೆ ಕುರಿತು ಅರಿವು ಹೆಚ್ಚಿಸುವ ಕಾರ್ಯ ನಡೆಯಬೇಕು ಎಂದು ಹೇಳಿದರು.
ಸಾರ್ವಜನಿಕ ಸಾರಿಗೆ ಕೇಂದ್ರಗಳು, ಬಸ್ ಡಿಪೋಗಳು ಹಾಗೂ ವಾಹನ ನಿಲ್ದಾಣಗಳಲ್ಲಿ ಖಾಲಿ ಟೈರ್ಗಳು, ಪ್ಲಾಸ್ಟಿಕ್ ವಸ್ತುಗಳು ಹಾಗೂ ಘನ ತ್ಯಾಜ್ಯಗಳಲ್ಲಿ ನೀರು ನಿಲ್ಲದಂತೆ ವಿಶೇಷ ಗಮನ ಹರಿಸಬೇಕು. ವಿಶೇಷವಾಗಿ ಖಾಲಿ ಟೈರ್ಗಳ ಮೇಲೆ ಟಾರ್ಪಾಲಿನ್ ಮುಚ್ಚಿ, ಅವುಗಳನ್ನು ತಕ್ಷಣವೇ ವಿಲೇವಾರಿ ಮಾಡುವ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಪರಿಸರ ಸ್ವಚ್ಛತೆ ಕುರಿತಂತೆ ಸಾರ್ವಜನಿಕರಲ್ಲಿ ನಿರಂತರ ಜಾಗೃತಿ ಮೂಡಿಸಬೇಕು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜನರು ತಮ್ಮ ಮನೆ, ಅಂಗಣ, ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಂಡು ಸೊಳ್ಳೆಗಳ ಉತ್ಪತ್ತಿಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ, ಜಿಲ್ಲೆಯಲ್ಲಿ 2026ರ ಜನವರಿಯಿಂದ ಏಪ್ರಿಲ್ವರೆಗೆ ಕೀಟಜನ್ಯ ರೋಗಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಮಂಡಿಸಿದರು.
ಅವರ ಮಾಹಿತಿ ಪ್ರಕಾರ, ಮಲೇರಿಯಾ ಪ್ರಕರಣಗಳ ಪತ್ತೆಗಾಗಿ 1,20,029 ರಕ್ತ ಲೇಪನ ಪರೀಕ್ಷೆಗಳು ನಡೆಸಲಾಗಿದ್ದು, ಅದರಲ್ಲಿ 2 ಮಲೇರಿಯಾ ಪ್ರಕರಣಗಳು ಖಚಿತಗೊಂಡಿವೆ.
ಇದೇ ಅವಧಿಯಲ್ಲಿ ಡೆಂಗೀ ರೋಗ ಪತ್ತೆಗಾಗಿ 607 ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 17 ಡೆಂಗೀ ಪ್ರಕರಣಗಳು ದೃಢಪಟ್ಟಿವೆ. ಅಲ್ಲದೆ, ಚಿಕೂನ್ಗುನ್ಯಾ ಪ್ರಕರಣಗಳಿಗೆ ಸಂಬಂಧಿಸಿದಂತೆ 109 ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 7 ಪ್ರಕರಣಗಳು ಖಚಿತಗೊಂಡಿವೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಡೆಂಗೀ ಹಾಗೂ ಕೀಟಜನ್ಯ ರೋಗಗಳ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಜನರಿಗೆ ಕೀಟಜನ್ಯ ರೋಗಗಳು ಬಾರದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ತಿಳುವಳಿಕೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಮನೆಗಳ ಮುಂದೆ, ಮೇಲ್ಛಾವಣಿಗಳ ಮೇಲೆ, ತೋಟಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಕಸದ ಸರಿಯಾದ ವಿಲೇವಾರಿ, ಸ್ವಚ್ಛತೆ ಕಾಪಾಡಿಕೊಳ್ಳುವುದು ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಕಸ ವಿಲೇವಾರಿ ವಾಹನಗಳ ಮೂಲಕವೂ ಸಾರ್ವಜನಿಕರಿಗೆ ಆರೋಗ್ಯ ಜಾಗೃತಿ ಸಂದೇಶಗಳನ್ನು ತಲುಪಿಸುವ ಕೆಲಸ ನಡೆಯುತ್ತಿದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಡೆಂಗೀ ಜ್ವರ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಸಹಾಯಕ ಕೀಟಶಾಸ್ತ್ರಜ್ಞೆ ಅನ್ನಪೂರ್ಣ ಶೆಟ್ಟರ್ ಅವರು ಡೆಂಗೀ ಹಾಗೂ ಇತರೆ ಕೀಟಜನ್ಯ ರೋಗಗಳ ನಿಯಂತ್ರಣ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಸೊಳ್ಳೆಯ ಜೀವನಚಕ್ರ, ಲಾರ್ವಾ ಉತ್ಪತ್ತಿ ಹಂತಗಳು ಹಾಗೂ ಲಾರ್ವಾಹಾರಿ ಮೀನುಗಳ ಬಳಕೆಯ ಮೂಲಕ ಸೊಳ್ಳೆ ನಿಯಂತ್ರಣ ಮಾಡುವ ವಿಧಾನಗಳ ಕುರಿತು ವಿವರಿಸಿದರು.
ಸಭೆಯ ಆರಂಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಅವರು ಸಭೆಯ ಉದ್ದೇಶವನ್ನು ವಿವರಿಸಿ ಸ್ವಾಗತಿಸಿದರು.
ಸಭೆಯಲ್ಲಿ ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಮೀನಾಕ್ಷಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಿ.ಸಿ. ಕರಿಗೌಡ್ರ, ಡಾ. ರಾಜೇಂದ್ರ ಬಸರಿಗಿಡದ, ಡಾ. ಅರುಂಧತಿ ಕುಲಕರ್ಣಿ, ತಾಲೂಕು ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಡೆಂಗೀ ಜ್ವರದ ಬಗ್ಗೆ ಸಾರ್ವಜನಿಕರು ತಿಳಿಯಬೇಕಾದ ಪ್ರಮುಖ ಅಂಶಗಳು
ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಂತೆ, ಡೆಂಗೀ ಜ್ವರವು “ಈಡಿಸ್ ಈಜಿಪ್ಟೆ” ಎಂಬ ಸೊಳ್ಳೆಯ ಕಚ್ಚುವಿಕೆಯಿಂದ ಹರಡುವ ರೋಗವಾಗಿದೆ. ಸೋಂಕಿತ ಸೊಳ್ಳೆ ಕಚ್ಚಿದ ಬಳಿಕ ಸಾಮಾನ್ಯವಾಗಿ 4ರಿಂದ 8 ದಿನಗಳೊಳಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಈ ರೋಗಕ್ಕೆ ನಿರ್ದಿಷ್ಟ ಔಷಧಿ ಲಭ್ಯವಿಲ್ಲದ ಕಾರಣ, ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಜ್ವರ ಕಾಣಿಸಿಕೊಂಡ ನಂತರ ವಿಶೇಷವಾಗಿ 4ನೇ ದಿನದಿಂದ 7ನೇ ದಿನದವರೆಗೆ ಹೆಚ್ಚಿನ ಎಚ್ಚರಿಕೆ ವಹಿಸಿ ವೈದ್ಯರ ಸಲಹೆ ಪಡೆಯುವುದು ಅಗತ್ಯ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ ಹಾಗೂ ಚಿಕಿತ್ಸಾ ಸೌಲಭ್ಯಗಳು ಲಭ್ಯವಿದ್ದು, ಸಾರ್ವಜನಿಕರು ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.
ಡೆಂಗೀ ತಡೆಗಟ್ಟಲು ಮನೆ, ಕಚೇರಿ ಹಾಗೂ ಸಂಸ್ಥೆಗಳ ಸುತ್ತಮುತ್ತ ಒಡೆದ ಮಡಿಕೆಗಳು, ತೆಂಗಿನಚಿಪ್ಪು, ಖಾಲಿ ಬಾಟಲಿಗಳು, ಟೈರುಗಳು, ಪ್ಲಾಸ್ಟಿಕ್ ಲೋಟಗಳು ಹಾಗೂ ನೀರು ನಿಲ್ಲುವ ಯಾವುದೇ ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP