ರಸ್ತೆ ಸಂಪರ್ಕಕ್ಕೆ ತೊಂದರೆ ; ವಿಂಡ್ ಪವರ್ ಕಂಪನಿ ವಿರುದ್ಧ ಗ್ರಾಮಸ್ಥರ ಆಕ್ರೋಶ
ಗದಗ, 27 ಮೇ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ನರೇಗಲ್ಲ ಪಟ್ಟಣ ಸೇರಿದಂತೆ ಹೋಬಳಿಯ ಜಕ್ಕಲಿ, ಅಬ್ಬಿಗೇರಿ, ಬೂದಿಹಾಳ, ಮಾರನಬಸರಿ, ನಿಡಗುಂದಿ, ನಿಡಗುಂದಿ ಕೊಪ್ಪ, ಹಾಳಕೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಜೆ ಎರಡು ತಾಸಿಗೂ ಅಧಿಕ ಕಾಲ ಸುರಿದ ಉತ್ತಮ ಮಳೆ ರೈತರಲ್ಲಿ ಸಂತಸ ಮೂಡಿಸಿದ್ದು, ಮತ್ತೊಂ
ಫೋಟೋ


ಗದಗ, 27 ಮೇ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ನರೇಗಲ್ಲ ಪಟ್ಟಣ ಸೇರಿದಂತೆ ಹೋಬಳಿಯ ಜಕ್ಕಲಿ, ಅಬ್ಬಿಗೇರಿ, ಬೂದಿಹಾಳ, ಮಾರನಬಸರಿ, ನಿಡಗುಂದಿ, ನಿಡಗುಂದಿ ಕೊಪ್ಪ, ಹಾಳಕೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಜೆ ಎರಡು ತಾಸಿಗೂ ಅಧಿಕ ಕಾಲ ಸುರಿದ ಉತ್ತಮ ಮಳೆ ರೈತರಲ್ಲಿ ಸಂತಸ ಮೂಡಿಸಿದ್ದು, ಮತ್ತೊಂದೆಡೆ ಕೆಲವೆಡೆ ಅವಾಂತರಗಳಿಗೂ ಕಾರಣವಾಗಿದೆ.

ಕಳೆದ ಹಲವು ದಿನಗಳಿಂದ ಬಿಸಿಲಿನ ತಾಪಮಾನ ಹೆಚ್ಚಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಉರಿ ಬಿಸಿಲಿನಿಂದ ಕಂಗೆಟ್ಟಿದ್ದು, ಸುರಿದ ಧಾರಾಕಾರ ಮಳೆಯಿಂದ ನಿರಾಳರಾಗಿದ್ದು, ವಾತಾವರಣದಲ್ಲಿ ತಂಪು ಆವರಿಸಿದೆ. ಮುಂಗಾರು ಪೂರ್ವ ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಮಳೆ ಹೊಸ ಭರವಸೆ ಮೂಡಿಸಿದ್ದು, ಕೃಷಿ ಚಟುವಟಿಕೆಗಳಿಗೆ ಚೈತನ್ಯ ತುಂಬಿದೆ.

ಮಳೆಯ ಪರಿಣಾಮ ಹೊಲಗಳಲ್ಲಿ ಸಾಕಷ್ಟು ತೇವಾಂಶ ಸಂಗ್ರಹವಾಗಿದ್ದು, ರೈತರು ಬಿತ್ತನೆ ಕಾರ್ಯಕ್ಕೆ ಸಿದ್ಧತೆ ಆರಂಭಿಸಿದ್ದಾರೆ. ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಈ ವರ್ಷದ ಕೃಷಿ ಚಟುವಟಿಕೆಗಳು ಉತ್ತಮವಾಗುವ ನಿರೀಕ್ಷೆಯಲ್ಲಿ ರೈತ ಸಮುದಾಯ ಕಾಣುತ್ತಿದೆ. ವಿಶೇಷವಾಗಿ ಮಳೆ ಆಶ್ರಿತ ಕೃಷಿ ಮಾಡುವ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ಭಾರೀ ಮಳೆಯು ಜಕ್ಕಲಿ ಗ್ರಾಮದಲ್ಲಿ ಸಮಸ್ಯೆಗಳಿಗೂ ಕಾರಣವಾಗಿದೆ. ಗ್ರಾಮದ ಅಗಸರ ಹಳ್ಳ ತುಂಬಿ ಹರಿದ ಪರಿಣಾಮ ಹಳ್ಳದ ನೀರಿನ ಒತ್ತಡಕ್ಕೆ ಮುಳ್ಳಿನ ಕೊಂಪೆ ದಾರಿಗೆ ಅಡ್ಡವಾಗಿ ಬಿದ್ದಿದ್ದು, ಜಕ್ಕಲಿ–ರೋಣ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.

ರಸ್ತೆ ಸಂಪರ್ಕ ಕಡಿತಗೊಂಡ ಕಾರಣ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ರವಿವಾರ ಬೆಳಿಗ್ಗೆ ರೋಣದಿಂದ ಜಕ್ಕಲಿ ಕಡೆಗೆ ಬರುತ್ತಿದ್ದ ಕೆಲವು ಬಸ್ಗಳು ದಾರಿಯಲ್ಲಿ ಬಿದ್ದಿದ್ದ ಮುಳ್ಳಿನ ಕೊಂಪೆಯಿಂದ ಮುಂದೆ ಸಾಗಲು ಸಾಧ್ಯವಾಗದೆ ಮಧ್ಯದಲ್ಲೇ ಮರಳಿ ರೋಣಕ್ಕೆ ಹಿಂದಿರುಗಿದವು ಎಂದು ತಿಳಿದು ಬಂದಿದೆ.

ಹಳ್ಳದಲ್ಲಿ ರಭಸವಾಗಿ ಹರಿದ ನೀರು ಸುತ್ತಮುತ್ತಲಿನ ಕೃಷಿ ಜಮೀನುಗಳಿಗೂ ನುಗ್ಗಿದ್ದು, ರೈತರಲ್ಲಿ ಆತಂಕ ಉಂಟುಮಾಡಿದೆ. ಕೆಲ ಹೊಲಗಳಲ್ಲಿ ನೀರು ನಿಂತು ಬೆಳೆ ಹಾನಿಯಾಗುವ ಸಾಧ್ಯತೆ ಎದುರಾಗಿರುವುದರಿಂದ ರೈತರು ಚಿಂತೆಗೆ ಒಳಗಾಗಿದ್ದಾರೆ.

ಈ ನಡುವೆ ಸಮಸ್ಯೆ ಗಂಭೀರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ಮುಂದಾಗಿ ತೆರವು ಕಾರ್ಯಾಚರಣೆ ಕೈಗೊಂಡರು. ದಾರಿಗೆ ಅಡ್ಡವಾಗಿ ಬಿದ್ದಿದ್ದ ಮುಳ್ಳಿನ ಕೊಂಪೆಯನ್ನು ತೆರವುಗೊಳಿಸಿ ರಸ್ತೆ ಸಂಚಾರ ಪುನಃ ಆರಂಭವಾಗುವಂತೆ ಕ್ರಮ ಕೈಗೊಂಡರು. ಗ್ರಾಮಸ್ಥರ ತಕ್ಷಣದ ಕಾರ್ಯಾಚರಣೆಯಿಂದ ವಾಹನ ಸಂಚಾರಕ್ಕೆ ಅನುವು ಕಲ್ಪಿಸಲಾಯಿತು.

ಘಟನೆಗೆ ಸಂಬಂಧಿಸಿದಂತೆ ವಿಂಡ್ ಪವರ್ ಕಂಪನಿಯ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಗಸರ ಹಳ್ಳಕ್ಕೆ ಕಂಪನಿ ಅಡ್ಡಲಾಗಿ ರಸ್ತೆ ನಿರ್ಮಿಸಿದ್ದು, ಅದರ ಕೆಳಭಾಗದಲ್ಲಿ ನೀರು ಹರಿಯಲು ಅತಿ ಸಣ್ಣ ಪ್ರಮಾಣದ ಪೂಲ್ಗಳನ್ನು ನಿರ್ಮಿಸಿರುವುದರಿಂದ ನೀರಿನ ಸಹಜ ಹರಿವಿಗೆ ಅಡ್ಡಿಯಾಗಿದೆ ಎಂದು ಆರೋಪಿಸಿದ್ದಾರೆ.

“ಹಳ್ಳದ ನೀರು ಸರಾಗವಾಗಿ ಹರಿಯಬೇಕಾದ ಸ್ಥಳದಲ್ಲಿ ಅಸಮರ್ಪಕ ಕಾಮಗಾರಿ ನಡೆಸಿರುವುದೇ ಈ ಅವಾಂತರಕ್ಕೆ ಕಾರಣವಾಗಿದೆ. ಮಳೆಯ ಸಂದರ್ಭದಲ್ಲಿ ನೀರು ಸರಿಯಾಗಿ ಹರಿಯದೆ ರಸ್ತೆಯ ಮೇಲೆ ಒತ್ತಡ ಹೆಚ್ಚಾಗಿ ಹೀಗೆ ಸಮಸ್ಯೆ ಉಂಟಾಗಿದೆ,” ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಕೂಡಲೇ ವಿಂಡ್ ಪವರ್ ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಡ್ಡಲಾಗಿ ನಿರ್ಮಿಸಿರುವ ರಸ್ತೆಯನ್ನು ತೆರವುಗೊಳಿಸಿ, ನೀರು ಸರಾಗವಾಗಿ ಹರಿಯಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆಯಾಗಿ ಉತ್ತಮ ಮಳೆಯು ರೈತರಲ್ಲಿ ಆಶಾಭಾವನೆ ಮೂಡಿಸಿದರೂ, ಮೂಲಸೌಕರ್ಯಗಳ ದೋಷ ಮತ್ತು ನೀರಿನ ಹರಿವಿನ ಸಮಸ್ಯೆಗಳು ಗ್ರಾಮೀಣ ಭಾಗದಲ್ಲಿ ಹೊಸ ಆತಂಕಕ್ಕೂ ಕಾರಣವಾಗಿರುವುದು ಬೆಳಕಿಗೆ ಬಂದಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande