ಕನಿಷ್ಠ ವೇತನಕ್ಕಾಗಿ ಒತ್ತಾಯಿಸಿ ಮೇ ೩೦ ರಂದು ಸಿಐಟಿಯು ಪ್ರತಿಭಟನೆ
ಕಾರ್ಮಿಕರ ಕನಿಷ್ಠ ವೇತನಕ್ಕಾಗಿ ಒತ್ತಾಯಿಸಿ ಸಿಐಟಿಯು ನಿಂದ ಮೇ.೩೦ ರಂದು ಪ್ರತಿಭಟನೆ
ಮೇ.೩೦ ರಂದು ನಡೆಯಲಿರುವ ಕಾರ್ಮಿಕರ ಪ್ರತಿಭಟನೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಘಟಕದ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾಹಿತಿ ನೀಡಿದರು.


ಕೋಲಾರ, ೨೭ ಮೇ (ಹಿ.ಸ) :

ಆ್ಯಂಕರ್ : ಕಾರ್ಮಿಕರ ಕನಿಷ್ಠ ವೇತನವನ್ನು ತಿಂಗಳಿಗೆ ೩೬ ಸಾವಿರಕ್ಕೆ ಹೆಚ್ಚಿಸಬೇಕು, ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಟ್ಟು, ನಾಲ್ಕು ಕಾನೂನು ಸಂಹಿತೆಗಳನ್ನು ರದ್ದು ಮಾಡಿ ಕಾರ್ಮಿಕರ ರಕ್ಷಣೆಗೆ ಆಗ್ರಹಿಸಿ ಮೇ ೩೦ ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಿಐಟಿಯು ಜಿಲ್ಲಾ ಘಟಕದ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶವು ತೀವ್ರ ಸಾಮಾಜಿಕ ಹಾಗೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಗಳ ಪರಿಣಾಮ ಉತ್ಪಾದನಾ ವಲಯ ಕುಸಿತ ಕಂಡಿದೆ. ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ದೇಶದ ಆರ್ಥಿಕತೆ ಅಭಿವೃದ್ಧಿಯ ಹಾದಿಯಲ್ಲಿದೆ ಎಂಬ ಸರ್ಕಾರದ ವಾದ ವಾಸ್ತವಕ್ಕೆ ದೂರವಾಗಿದೆ ಎಂದು ಆರೋಪಿಸಿದರು.

ದೇಶದ ಒಟ್ಟು ಸಂಪತ್ತಿನ ಶೇ ೯೦ರಷ್ಟು ಭಾಗ ಕೇವಲ ಶೇ ೧೦ರಷ್ಟು ಶ್ರೀಮಂತರ ಕೈಯಲ್ಲಿ ಕೇಂದ್ರೀಕೃತವಾಗಿದೆ. ಉದ್ಯಮಿಗಳ ಆಸ್ತಿ ಅಪಾರವಾಗಿ ಏರಿಕೆ ಆಗುತ್ತಿರುವ ಸಂದರ್ಭದಲ್ಲಿ ಉನ್ನತ ಶಿಕ್ಷಣ ಪಡೆದ ಯುವಕರಿಗೂ ಸಮರ್ಪಕ ಸಂಬಳ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಈಗಾಗಲೇ ಕನಿಷ್ಠ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಜಿಲ್ಲೆಯಾದ್ಯಂತ ಸಾರ್ವಜನಿಕರಿಂದ ಸಹಿ ಸಂಗ್ರಹ ನಡೆಸಲಾಗಿದೆ. ಪ್ರತಿಭಟನೆಯಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ ಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದುಗೊಳಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು. ಪ್ರತಿ ಕಾರ್ಮಿಕನಿಗೂ ವಸತಿ ಸೌಲಭ್ಯ ಒದಗಿಸಬೇಕು. ಶಿಕ್ಷಣ, ಆರೋಗ್ಯ ಸೇರಿ ಸಾರ್ವಜನಿಕ ಸೇವೆಗಳ ಖಾಸಗೀಕರಣ ನಿಲ್ಲಿಸಬೇಕು. ಸರ್ಕಾರವು ಈ ಬೇಡಿಕೆಗಳನ್ನು ಈಡೇರಿಸಲು ವಿಳಂಬ ಮಾಡುತ್ತಿದ್ದು, ಬಂಡವಾಳಶಾಹಿ ಪರ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಸರ್ಕಾರಗಳು ಕೇವಲ ಜಾಹೀರಾತುಗಳಲ್ಲಿ ಕಾರ್ಮಿಕರ ಪರ ಎಂದು ಬಿಂಬಿಸಲು ಹೊರಟಿದೆ ಕನಿಷ್ಠ ವೇತನಕ್ಕೆ ಬಹುಸಂಖ್ಯಾತ ಗಾರ್ಮೆಟ್ಸ್ ಕಾರ್ಮಿಕರನ್ನು ಹೊರಗಿಟ್ಟಿದೆ ಜೊತೆಗೆ ಅಂಗನವಾಡಿ ನೌಕರರನ್ನು ಕಾಯಿದೆಯಲ್ಲಿ ತರಬೇಕು ಈ ಹಿನ್ನೆಲೆಯಲ್ಲಿ ಮೇ ೩೦ರವರೆಗೆ ಗಡುವು ನೀಡಲಾಗಿದ್ದು, ಬೇಡಿಕೆಗಳು ಈಡೇರದಿದ್ದರೆ ರಾಜ್ಯಾದ್ಯಂತ ಐತಿಹಾಸಿಕ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಖಜಾಂಚಿ ಹೆಚ್.ಬಿ ಕೃಷ್ಣಪ್ಪ, ಉಪಾಧ್ಯಕ್ಷರಾದ ಬಿ.ಎಲ್ ಕೇಶವರಾವ್, ಅಂಜಲಮ್ಮ, ಕಾರ್ಯದರ್ಶಿ ಎಂ.ಭೀಮರಾಜ್ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande