ಜಕ್ಕಲಿಯಲ್ಲಿ ಪಡಿತರಕ್ಕಾಗಿ ಜನರ ಪರದಾಟ : ಹೆಬ್ಬೆಟ್ಟು ಹಾಕಲು ಹರಸಾಹಸ
ಗದಗ, 27 ಮೇ (ಹಿ.ಸ.) : ಆ್ಯಂಕರ್ : ಪಡಿತರ ಪಡೆಯಲು ಬಯೋಮೆಟ್ರಿಕ್ ಹೆಬ್ಬೆಟ್ಟು ಹಾಕುವ ಕೆಲಸವೇ ಜಕ್ಕಲಿ ಗ್ರಾಮಸ್ಥರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಕಳೆದ ಹಲವು ದಿನಗಳಿಂದ ನ್ಯಾಯಬೆಲೆ ಅಂಗಡಿ ಮುಂದೆ ಸಾರ್ವಜನಿಕರು ಪರದಾಡುವಂತಾಗಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ವ್ಯವಸಾಯ ಸೇವಾ
ಫೋಟೋ


ಗದಗ, 27 ಮೇ (ಹಿ.ಸ.) :

ಆ್ಯಂಕರ್ : ಪಡಿತರ ಪಡೆಯಲು ಬಯೋಮೆಟ್ರಿಕ್ ಹೆಬ್ಬೆಟ್ಟು ಹಾಕುವ ಕೆಲಸವೇ ಜಕ್ಕಲಿ ಗ್ರಾಮಸ್ಥರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಕಳೆದ ಹಲವು ದಿನಗಳಿಂದ ನ್ಯಾಯಬೆಲೆ ಅಂಗಡಿ ಮುಂದೆ ಸಾರ್ವಜನಿಕರು ಪರದಾಡುವಂತಾಗಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ನಿರಂತರ ಸರ್ವರ್ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ನೂರಾರು ಫಲಾನುಭವಿಗಳು ದಿನಪೂರ್ತಿ ಸಾಲಿನಲ್ಲಿ ನಿಂತರೂ ಪಡಿತರ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ನಾಲ್ಕೈದು ದಿನಗಳಿಂದ ಮುಂದುವರಿದಿರುವ ತಾಂತ್ರಿಕ ಸಮಸ್ಯೆಯಿಂದ ಸಾರ್ವಜನಿಕರ ಆಕ್ರೋಶ ಮಂಗಳವಾರ ತಾರಕಕ್ಕೇರಿತು. ರೈತರು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಸೇರಿದಂತೆ ನೂರಾರು ಮಂದಿ ಸಂಘದ ಆವರಣದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

“ಬೇಕೇ ಬೇಕು ನ್ಯಾಯ ಬೇಕು”, “ಸರ್ವರ್ ಸಮಸ್ಯೆ ನಿವಾರಿಸಿ” ಎಂಬ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಸಾರ್ವಜನಿಕರಿಗೆ ಮೂಲಭೂತ ಸೇವೆಗಳನ್ನು ಸಮರ್ಪಕವಾಗಿ ಒದಗಿಸುವಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಹೊಲದ ಕೆಲಸ ಬಿಟ್ಟು ನ್ಯಾಯಬೆಲೆ ಅಂಗಡಿ ಮುಂದೆ ರೈತರ ಸಾಲು ಮಳೆಗಾಲದ ಕೃಷಿ ಚಟುವಟಿಕೆಗಳು ಆರಂಭವಾಗಿರುವ ಸಂದರ್ಭದಲ್ಲಿ ರೈತರು ಹೊಲದ ಕೆಲಸಗಳನ್ನು ಬಿಟ್ಟು ನ್ಯಾಯಬೆಲೆ ಅಂಗಡಿ ಮುಂದೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮದ ರೈತರು ಮಾತನಾಡಿ, “ನಾವು ಬೆಳಗ್ಗೆಯೇ ಹೊಲದ ಕೆಲಸಕ್ಕೆ ಹೋಗಬೇಕಾದವರು. ಆದರೆ ಪಡಿತರ ಸಿಗಬೇಕೆಂದು ನ್ಯಾಯಬೆಲೆ ಅಂಗಡಿ ಮುಂದೆ ಬಂದು ಸಾಲಿನಲ್ಲಿ ನಿಲ್ಲುತ್ತಿದ್ದೇವೆ. ಎರಡು–ಮೂರು ದಿನಗಳಿಂದ ನಿರಂತರವಾಗಿ ಬರುತ್ತಿದ್ದರೂ ಹೆಬ್ಬೆಟ್ಟು ಹಾಕಲು ಸಾಧ್ಯವಾಗುತ್ತಿಲ್ಲ. ದಿನವಿಡೀ ಕಾಯಿಸಿ ಕೊನೆಗೆ ‘ಸರ್ವರ್ ಇಲ್ಲ’ ಎಂದು ಹೇಳಿ ಮನೆಗೆ ಕಳುಹಿಸುತ್ತಿದ್ದಾರೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಒಂದು ಕಡೆ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಇನ್ನೊಂದು ಕಡೆ ಪಡಿತರಕ್ಕಾಗಿ ಸಮಯ ವ್ಯರ್ಥ ಮಾಡಬೇಕಾಗಿದೆ. ಕೆಲಸವೂ ಆಗುತ್ತಿಲ್ಲ, ಪಡೀತರವೂ ಸಿಗುತ್ತಿಲ್ಲ. ಸರ್ಕಾರ ಬಡ ರೈತರ ಸಂಕಷ್ಟ ಅರ್ಥ ಮಾಡಿಕೊಳ್ಳಬೇಕು,” ಎಂದು ಅವರು ಒತ್ತಾಯಿಸಿದರು.

ಮಹಿಳೆಯರ ಅಳಲು: ಮನೆ ಕೆಲಸ ಬಿಟ್ಟು ಬಂದರೂ ಪಡಿತರ ಇಲ್ಲ ಮನೆಯ ಜವಾಬ್ದಾರಿಗಳು, ಮಕ್ಕಳ ನೋಡಿಕೊಳ್ಳುವ ಹೊಣೆಗಾರಿಕೆಗಳ ನಡುವೆಯೂ ಮಹಿಳೆಯರು ನ್ಯಾಯಬೆಲೆ ಅಂಗಡಿ ಮುಂದೆ ದಿನಪೂರ್ತಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಲವು ಮಹಿಳೆಯರು ತಮ್ಮ ನೋವು ಹಂಚಿಕೊಂಡು, “ಬೆಳಿಗ್ಗೆಯಿಂದ ಸಂಜೆವರೆಗೂ ಸಾಲಿನಲ್ಲಿ ನಿಂತರೂ ಪಡಿತರ ಸಿಗುತ್ತಿಲ್ಲ. ಮನೆಯ ಕೆಲಸ, ಮಕ್ಕಳ ಜವಾಬ್ದಾರಿ ಎಲ್ಲವನ್ನೂ ಬಿಟ್ಟು ಬರುತ್ತಿದ್ದೇವೆ. ಆದರೆ ಅಧಿಕಾರಿಗಳು ಜನರ ಸಮಸ್ಯೆ ಬಗ್ಗೆ ಕಾಳಜಿ ತೋರಿಸುತ್ತಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದರು.

“ಬಡ ಜನರಿಗೆ ಸಿಗಬೇಕಾದ ಮೂಲಭೂತ ಆಹಾರ ಧಾನ್ಯ ಪಡೆಯುವುದಕ್ಕೂ ಇಷ್ಟು ಕಷ್ಟ ಅನುಭವಿಸಬೇಕಾದರೆ ಸರ್ಕಾರದ ವ್ಯವಸ್ಥೆಯ ಅರ್ಥವೇನು?” ಎಂದು ಮಹಿಳೆಯರು ಪ್ರಶ್ನಿಸಿದರು.

ಹಿರಿಯ ನಾಗರಿಕರು, ಅಂಗವಿಕಲರಿಗೆ ತೀವ್ರ ಸಂಕಷ್ಟ ಸರ್ವರ್ ಸಮಸ್ಯೆಯಿಂದ ಹೆಚ್ಚು ತೊಂದರೆ ಅನುಭವಿಸುತ್ತಿರುವವರು ಹಿರಿಯ ನಾಗರಿಕರು ಹಾಗೂ ಅಂಗವಿಕಲರು. ಬಿಸಿಲಿನಲ್ಲೇ ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದ್ದು, ಕೆಲವರು ನೆಲದ ಮೇಲೆಯೇ ಕುಳಿತು ತಮ್ಮ ಸರದಿಗಾಗಿ ಕಾಯುತ್ತಿರುವ ದೃಶ್ಯಗಳು ಕಂಡುಬಂದವು.

ಹಿರಿಯ ನಾಗರಿಕರು ಮಾತನಾಡಿ, “ನಮ್ಮ ಬೆರಳಚ್ಚು ಸರಿಯಾಗಿ ಬರುವುದಿಲ್ಲ. ಅದರ ಮೇಲೆ ಸರ್ವರ್ ಸಮಸ್ಯೆ ಇದೆ. ಪ್ರತಿದಿನ ಬಂದು ಖಾಲಿಹಸ್ತದಿಂದ ಹಿಂತಿರುಗುವುದು ತುಂಬಾ ಕಷ್ಟವಾಗುತ್ತಿದೆ,” ಎಂದು ಅಳಲು ತೋಡಿಕೊಂಡರು.

ಅಂಗವಿಕಲರು ಮತ್ತು ವೃದ್ಧ ಮಹಿಳೆಯರಿಗೆ ಕುಡಿಯುವ ನೀರು, ಕುಳಿತುಕೊಳ್ಳಲು ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಕಂಡುಬಂದಿದ್ದು, ಇದರಿಂದ ಸಾರ್ವಜನಿಕರ ಅಸಮಾಧಾನ ಮತ್ತಷ್ಟು ಹೆಚ್ಚಾಗಿದೆ.

‘ಸಮಸ್ಯೆ ಇದೆ ಎನ್ನುವುದು ಬಿಟ್ಟರೆ ಪರಿಹಾರವೇ

ಸಮಸ್ಯೆ ಹಲವು ದಿನಗಳಿಂದ ಮುಂದುವರಿದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

“ಸರ್ವರ್ ಸಮಸ್ಯೆ ಇದೆ ಎಂದು ಹೇಳುವುದನ್ನು ಬಿಟ್ಟರೆ ಯಾವುದೇ ಸ್ಪಂದನೆ ಇಲ್ಲ. ಜನರ ಸಂಕಷ್ಟ ಕೇಳುವವರೇ ಇಲ್ಲ. ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಬೇಕು,” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರು ತಕ್ಷಣವೇ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಅಗತ್ಯವಿದ್ದರೆ ಆಫ್ಲೈನ್ ವಿಧಾನದಲ್ಲಾದರೂ ಪಡಿತರ ವಿತರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ತಾಲೂಕು ಮಟ್ಟದ ಹೋರಾಟದ ಎಚ್ಚರಿಕೆ

ಸಮಸ್ಯೆ ಇದೇ ರೀತಿಯಲ್ಲಿ ಮುಂದುವರಿದರೆ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

“ವಾರ ಕಳೆದರೂ ಸಮಸ್ಯೆ ಬಗೆಹರಿದಿಲ್ಲ. ಜನರು ಪ್ರತಿದಿನ ಬಂದು ಪರದಾಡುತ್ತಿದ್ದಾರೆ. ಇನ್ನೂ ನಿರ್ಲಕ್ಷ್ಯ ಮುಂದುವರಿದರೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಬೇಕಾಗುತ್ತದೆ,” ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ

ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷಗಳನ್ನು ತಕ್ಷಣ ಸರಿಪಡಿಸಿ ಪಡಿತರ ವಿತರಣೆಯನ್ನು ಸುಗಮಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ಆಹಾರ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ತಾಲೂಕು ಆಡಳಿತ ತಕ್ಷಣ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಡಜನರಿಗೆ ಸಿಗಬೇಕಾದ ಪಡಿತರ ಪಡೆಯುವುದಕ್ಕೂ ದಿನಗಟ್ಟಲೆ ಸಾಲಿನಲ್ಲಿ ನಿಲ್ಲುವ ಸ್ಥಿತಿ ಎದುರಾಗಿರುವುದು ಸರ್ಕಾರದ ಡಿಜಿಟಲ್ ವ್ಯವಸ್ಥೆಯ ಕಾರ್ಯಕ್ಷಮತೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಜಕ್ಕಲಿ ಗ್ರಾಮಸ್ಥರ ಸಂಕಷ್ಟಕ್ಕೆ ಯಾವಾಗ ಮುಕ್ತಿ ಸಿಗಲಿದೆ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande