
ಕೊಪ್ಪಳ, 27 ಮೇ (ಹಿ.ಸ.) :
ಆ್ಯಂಕರ್ : ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ ಬಲ್ಟೋಟ ತೊಲಗಿಸಿ ಕೊಪ್ಪಳ-ಭಾಗ್ಯನಗರ ಉಳಿಸಿ ಧರಣಿ 209ನೇ ದಿನದಲ್ಲಿ ಯಶಸ್ವಿಯಾಯಿತು. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಇಲ್ಲಿನ ಮಾಲಿನ್ಯಕಾರಿ 9 ಸ್ಪಾಂಜ್ ಐರನ್ ಕಾರ್ಖಾನೆಗಳಿಗೆ ಮುಚ್ಚುವ ಕಾರಣ ಕೇಳುವ ನೋಟಿಸ್ ಜಾರಿ ಮಾಡಿದ್ದನ್ನು ವೇದಿಕೆ ಸಿಹಿ ಹಂಚಿ ಸ್ವಾಗತಿಸಿತು.
ಈಗಾಗಲೇ 5 ಕಾರ್ಖಾನೆಗಳಿಗೆ ಮುಚ್ಚುವ ಆದೇಶವಿದ್ದು, ಭಾಗಶಃ ಜಾರಿಯಾಗಿದೆ. ಹಿರೇಬಗನಾಳ, ಕಾಸನಕಂಡಿ ಗ್ರಾಮಗಳ ಜನರ ಆರೋಗ್ಯ ಕಸಿದುಕೊಂಡಿರುವ ಎಚ್.ಆರ್.ಜಿ ಅಲಾಯ್ಸ್, ವನ್ಯ ಸ್ಟೀಲ್ ಘಟಕ 1 ಮತ್ತು 2 ಇವುಗಳನ್ನು ತ್ವರಿತವಾಗಿ ಮುಚ್ಚಿ ಜನರ ಜೀವ ಉಳಿಸಬೇಕು. ನಗರದ ಅರ್ಧ ಭಾಗ ಮಾಲಿನ್ಯ ಮಾಡುತ್ತಿರುವ ಬಲ್ಡೋಟ ಎಂ.ಎಸ್.ಪಿ.ಎಲ್ ಪೆಲ್ಲೆಟ್ ಘಟಕ ಮುಚ್ಚಬೇಕು. ಈ ಘಟಕ ಮುಚ್ಚುವ ವಿಷಯದಲ್ಲಿ ಮೃದು ಧೋರಣೆ ತಳೆಯಬಾರದು ಎಂದು ವೇದಿಕೆಯಿಂದ ಸರ್ಕಾರಕ್ಕೆ ಆಗ್ರಹ ಮಾಡಲಾಯಿತು.
ಈ ಘಟಕದ ಮಾಲಿನ್ಯ ತಡೆಯಬೇಕೆಂದು ಗವಿಶ್ರೀನಗರ, ಕವಲೂರು ಬಡಾವಣೆ, ಡಾಲರ್ಸ್ ಕಾಲೊನಿ ಮುಂತಾದ ವಾರ್ಡ್ ಜನರು ದೂರು ನೀಡುತ್ತಾ ಬಂದಿದ್ದಾರೆ. ಇದನ್ನು ಜಿಲ್ಲಾಡಳಿತ ಮತ್ತು ಜನಪ್ರತಿನಿದಿನಗಳು ಗಂಭೀರವಾಗಿ ತೆಗೆದುಕೊಂಡು ಈ ಘಟಕ ಬಂದ್ ಮಾಡಿ ನಗರ ಉಳಿಸಬೇಕು ಎನ್ನುವುದು ವೇದಿಕೆಯ ಹೋರಾಟದ ಬೇಡಿಕೆಯಾಗಿದೆ. ಇನ್ನುಳಿದ ಕ್ರಿಮಿನಾಶಕ, ಆಸಿಡ್, ಗೊಬ್ಬರ, ಪೆಲ್ಲೆಟ್ ಘಟಕಗಳನ್ನು ಗ್ರಾಮಗಳ ಅಂತರ್ಜಲ, ಜನರ ಆರೋಗ್ಯ ರಕ್ಷಣೆ ಉದ್ದೇಶದಿಂದ ಮುಚ್ಚಬೇಕು ಎನ್ನುವ ಬಲವಾದ ಆಗ್ರಹವನ್ನು ವೇದಿಕೆ ಮಾಡಿದೆ.
ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಗೋನಾಳ, ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಉಪನ್ಯಾಸಕರಾದ ಡಾ. ಬಸವರಾಜ ಪೂಜಾರ, ಶಂಭುಲಿಂಗಪ್ಪ ಹರಗೇರಿ, ಶಿವಾನಂದಯ್ಯ ಬೀಳಗಿಮಠ, ಸರೋಜಾ ಬಾಕಳೆ, ರವಿ ಕಾಂತನವರ, ಮೂಕಪ್ಪ ಮೇಸ್ತ್ರಿ ಬಸಾಪುರ, ರಾಜಶೇಖರ ಏಳುಬಾವಿ, ಚಾರಣ ಬಳಗದ ಸಿ.ಬಿ.ಪಾಟೀಲ್, ಶರಣು ಗಡ್ಡಿ, ಶರಣು ಪಾಟೀಲ್, ಸುಭಾನ ಸಾಬ್ ನೀರಲಗಿ, ಶಾರದಾ ಗಡ್ಡಿ, ಸಿಂಧು, ಎಸ್. ಮಹಾದೇವಪ್ಪ ಮಾವಿನಮಡು, ಶಿವಪ್ಪ ಜಲ್ಲಿ, ಮಂಗಳೇಶ ರಾಠೋಡ್, ನಿಂಗಪ್ಪ ಜಿ. ಎಸ್. ಬೆಣಕಲ್ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್