
ಬೆಂಗಳೂರು, 27 ಮೇ (ಹಿ.ಸ.) :
ಆ್ಯಂಕರ್ : ಉತ್ತರ ಕರ್ನಾಟಕದಲ್ಲಿ ನೀರಾವರಿ ಸಮಸ್ಯೆ ಗಂಭೀರವಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ವಿಧಾನ ಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ರಾಜ್ಯ ಸರ್ಕಾರ ರೈತರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದ್ದಾರೆ.
ಎಕ್ಸ್ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ ಅವರು, “ಉತ್ತರ ಕರ್ನಾಟಕದ ರೈತರ ಆಕ್ರೋಶ ಈಗ ಬೀದಿಗಿಳಿದಿದೆ. ಕೃಷಿಗೆ ನೀರು ಕೇಳಿದ ರೈತರಿಗೆ ಕಾಂಗ್ರೆಸ್ ಸರ್ಕಾರ ಕೊಟ್ಟದ್ದು ಕೇವಲ ಸುಳ್ಳು ಭರವಸೆಗಳು ಮಾತ್ರ. ಏತ ನೀರಾವರಿ ಯೋಜನೆಗಳು ಕಡತಗಳಲ್ಲೇ ಸಿಲುಕಿಕೊಂಡಿದ್ದು, ರೈತರ ಬದುಕು ಬರಿದಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ರಾಜ್ಯ ಸರ್ಕಾರದ ಒಳರಾಜಕೀಯದ ವಿಚಾರವನ್ನೂ ಉಲ್ಲೇಖಿಸಿರುವ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ “ಕುರ್ಚಿ ರಾಜಕೀಯ”ದಲ್ಲಿ ತೊಡಗಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
“ಉತ್ತರ ಕರ್ನಾಟಕದ ರೈತರಿಗೆ ನೀರು, ಬದುಕು ಮತ್ತು ಬೆಳೆ ಕುರಿತು ಯೋಚಿಸುವವರು ಸರ್ಕಾರದಲ್ಲಿ ಇಲ್ಲದಂತಾಗಿದೆ. ರೈತರ ಕಣ್ಣೀರು ಒರೆಸಬೇಕಾದ ಸರ್ಕಾರವೇ ಇಂದು ರೈತರ ಆಕ್ರೋಶಕ್ಕೆ ಕಾರಣವಾಗಿದೆ” ಎಂದು ಅವರು ದೂರಿದ್ದಾರೆ.
ಮುಂದಿನ ದಿನಗಳಲ್ಲಿ ರೈತರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಉತ್ತರ ಕರ್ನಾಟಕದ ಜನ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.