
ನವದೆಹಲಿ, 27 ಮೇ (ಹಿ.ಸ.) :
ಆ್ಯಂಕರ್ : ದೇಶವ್ಯಾಪಿ ಸಂಚಲನ ಮೂಡಿಸಿದ್ದ ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಬಿಐ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಬಂಧಿತರಲ್ಲಿ ಮಹಾರಾಷ್ಟ್ರದ ಲಾತೂರ್ ಮೂಲದ ವೈದ್ಯ ಮನೋಜ್ ಶಿರೂರೆ ಪ್ರಮುಖರಾಗಿದ್ದಾರೆ. ಮೂವರು ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಸೋರಿಕೆ ಜಾಲದ ಮೂಲಕ ನೆರವು ನೀಡಿದ ಆರೋಪ ಇವರ ಮೇಲಿದೆ. ಈ ವಿದ್ಯಾರ್ಥಿಗಳಲ್ಲಿ ಖಾಸಗಿ ಕೋಚಿಂಗ್ ಸೆಂಟರ್ ಮಾಲೀಕರ ಮಗನೂ ಸೇರಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಪ್ರಕರಣದ ಮತ್ತೊಬ್ಬ ಆರೋಪಿ ತೇಜಸ್ ಹರ್ಷದ್ಕುಮಾರ್ ಶಾ ಆಗಿದ್ದು, ಅವರು ಪುಣೆಯ ಡಾ. ಅಭಂಗ ಪ್ರಭು ಮೆಡಿಕಲ್ ಅಕಾಡೆಮಿ (ಎಪಿಎಂಎ) ಕೋಚಿಂಗ್ ಸಂಸ್ಥೆಯಲ್ಲಿ ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ತನಿಖೆಯ ವೇಳೆ ಸೋರಿಕೆಯಾದ ಭೌತಶಾಸ್ತ್ರ ಪ್ರಶ್ನೆಗಳನ್ನು ಮಣೀಷಾ ಹವಾಲ್ದಾರ್ ಮೂಲಕ ಪಡೆದಿದ್ದಾನೆ ಎಂಬ ಮಾಹಿತಿ ಸಿಬಿಐಗೆ ಲಭಿಸಿದೆ. ಮಣೀಷಾ ಹವಾಲ್ದಾರ್ ಅವರನ್ನು ಈಗಾಗಲೇ ಬಂಧಿಸಲಾಗಿದೆ.
ಪ್ರಕರಣದ ಕುರಿತು ಪ್ರಕಟಣೆ ನೀಡಿರುವ ಸಿಬಿಐ, “ಪ್ರಶ್ನೆಪತ್ರಿಕೆ ಸೋರಿಕೆ ಜಾಲದ ಸಂಪೂರ್ಣ ಕೊಂಡಿ ಮತ್ತು ಸಂಚಿನ ಹಿಂದೆ ಇರುವವರನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ” ಎಂದು ತಿಳಿಸಿದೆ.
ಇದುವರೆಗೆ ದೇಶದ ವಿವಿಧ ಭಾಗಗಳಲ್ಲಿ 49 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಹಲವು ಲ್ಯಾಪ್ಟಾಪ್ಗಳು ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ತಾಂತ್ರಿಕ ವಿಶ್ಲೇಷಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇಂದ್ರ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ಲಿಖಿತ ದೂರಿನ ಮೇರೆಗೆ ಮೇ 12ರಂದು ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಬಳಿಕ ವಿಶೇಷ ತನಿಖಾ ತಂಡಗಳನ್ನು ರಚಿಸಿ ದೇಶದ ವಿವಿಧ ನಗರಗಳಲ್ಲಿ ದಾಳಿ ಮತ್ತು ವಿಚಾರಣೆ ನಡೆಸಲಾಗುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ, ಜೈಪುರ, ಗುರುಗ್ರಾಮ್, ನಾಸಿಕ್, ಪುಣೆ, ಲಾತೂರ್ ಮತ್ತು ಅಹಲ್ಯಾನಗರ ಸೇರಿದಂತೆ ವಿವಿಧ ನಗರಗಳಿಂದ ಇದುವರೆಗೆ 13 ಮಂದಿಯನ್ನು ಬಂಧಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.