ಮುಂಡರಗಿ ಶಾಖಾ ಕಾಲುವೆ ದುರಸ್ತಿ ಕಾಮಗಾರಿ
ಗದಗ, 27 ಮೇ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಮುಂಡರಗಿ ಹಾಗೂ ಕೊಪ್ಪಳ ತಾಲೂಕುಗಳ ವ್ಯಾಪ್ತಿಯಲ್ಲಿ ಹಾದುಹೋಗುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮುಂಡರಗಿ ಶಾಖಾ ಕಾಲುವೆಯ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆ 2026-27ನೇ ಸಾಲಿನ ಮುಂಗಾರು ಹಂಗಾಮಿಯಲ್ಲಿ ಕಾಲುವೆಗೆ ನೀರು ಹರಿಸುವಲ್ಲಿ
ಫೋಟೋ


ಗದಗ, 27 ಮೇ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಮುಂಡರಗಿ ಹಾಗೂ ಕೊಪ್ಪಳ ತಾಲೂಕುಗಳ ವ್ಯಾಪ್ತಿಯಲ್ಲಿ ಹಾದುಹೋಗುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮುಂಡರಗಿ ಶಾಖಾ ಕಾಲುವೆಯ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆ 2026-27ನೇ ಸಾಲಿನ ಮುಂಗಾರು ಹಂಗಾಮಿಯಲ್ಲಿ ಕಾಲುವೆಗೆ ನೀರು ಹರಿಸುವಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ಯೋಜನೆಯ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ಮುಂಡರಗಿ ಶಾಖಾ ಕಾಲುವೆಯ ಚೈನ್ 10.05 ಕಿ.ಮೀ. ಪ್ರದೇಶದಲ್ಲಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಬಾಕ್ಸ್ ಕಲ್ವರ್ಟ್ ಸೇತುವೆ ಕಳೆದ ವರ್ಷದ ಮಳೆಗಾಲದಲ್ಲಿ ಹಾನಿಗೀಡಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸೇತುವೆಯ ದುರಸ್ತಿ ಕಾರ್ಯ ನಡೆಯುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳುವವರೆಗೆ ನೀರು ಹರಿಸುವ ವ್ಯವಸ್ಥೆಯಲ್ಲಿ ಅಡಚಣೆ ಎದುರಾಗುವ ಸಾಧ್ಯತೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಯೋಜನೆಯಡಿ ಮುಂಡರಗಿ ತಾಲ್ಲೂಕಿನ ಕಲಕೇರಿ, ಹಾರೋಗೇರಿ, ಬಸಾಪುರ, ತಾಮ್ರಗುಂಡಿ, ಬರದೂರ, ಮೇವುಂಡಿ, ಹೈತಾಪುರ, ಯಕ್ಲಾಸಪುರ ಗ್ರಾಮಗಳು ಸೇರಿದಂತೆ ಬಸಾಪುರ ಹಾಗೂ ತಾಮ್ರಗುಂಡಿ ಕೆರೆಗಳು ಹಾಗೂ ಕೊಪ್ಪಳ ತಾಲೂಕಿನ ಕವಲೂರು, ಅಳವಂಡಿ, ಗುಡಿಗೇರಿ, ಮೈನಹಳ್ಳಿ, ಮುರ್ಲಾಪುರ, ಗಟ್ಟಿರಡ್ಡಿಹಾಳ, ಹಂದ್ರಾಳ ಗ್ರಾಮಗಳ ರೈತರು ಮತ್ತು ಸಾರ್ವಜನಿಕರು ಕಾಲುವೆ ನೀರಿನ ಮೇಲೆ ಅವಲಂಬಿತರಾಗಿದ್ದಾರೆ.

ಹೀಗಾಗಿ 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಮುಂಡರಗಿ ಶಾಖಾ ಕಾಲುವೆಗೆ ನೀರು ಹರಿಸುವಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇರುವುದರಿಂದ ಸಂಬಂಧಿತ ರೈತರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾರ್ಯಪಾಲಕ ಅಭಿಯಂತರರು ಮನವಿ ಮಾಡಿದ್ದಾರೆ.

ಕಾಲುವೆ ನೀರಿನ ಮೇಲೆ ಅವಲಂಬಿತ ಪ್ರದೇಶಗಳ ರೈತರಿಗೆ ಈ ಮಾಹಿತಿ ಮಹತ್ವದ್ದಾಗಿದ್ದು, ಕೃಷಿ ಚಟುವಟಿಕೆಗಳನ್ನು ಯೋಜಿಸುವ ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande