
ಗದಗ, 27 ಮೇ (ಹಿ.ಸ.) :
ಆ್ಯಂಕರ್ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತಂತೆ ಪಾರದರ್ಶಕ ಮತದಾರರ ಪಟ್ಟಿ ತಯಾರಿಕೆಗೆ ಬಿ.ಎಲ್.ಓಗಳ ಪಾತ್ರ ಪ್ರಮುಖವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್. ತಿಳಿಸಿದರು.
ಗದಗ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ದಲ್ಲಿಂದು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ -2026 ರ ಮ್ಯಾಪಿಂಗ್ ಕುರಿತು ಜರುಗಿದ ಸಭೆಯಲ್ಲಿ ಮಾತನಾಡಿದರು. ಭಾರತ ಚುನಾವಣಾ ಆಯೋಗವು ಕರ್ನಾಟಕ ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 ಕುರಿತು ದಿ:14-5-2026 ರಂದು ವೇಳಾ ಪಟ್ಟಿ ಪ್ರಕಟಿಸಿದೆ.
ತಂತ್ರಾಂಶದಲ್ಲಿ ಮತದಾರ ಪಟ್ಟಿ ದತ್ತಾಂಶವು 16-6-2026 ರಂದು ಫ್ರೀಜ್ ಆಗುವುದರಿಂದ ಜಿಲ್ಲೆಗೆ ಸಂಬAಧಿಸಿದ 2002 ರ ಮತದಾರರ ಪಟ್ಟಿಗೆ 2025 ರ ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯವನ್ನು ಪೂರ್ಣಗೊಳಿಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಬಿ.ಎಲ್.ಓಗಳು ವಿಶೇಷ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಿಸಿದಂತೆ ಮನೆ ಮನೆಗೆ ಭೇಟಿ ನೀಡಿ ಸಮಗ್ರ ವಿಷಯಗಳ ಪರಿಶೀಲನೆ ನಡೆಸಬೇಕು.
ಸ್ಥಳಾಂತರಗೊಂಡ, ಮರಣ ಹೊಂದಿದ ಮತದಾರರ ಹೆಸರುಗಳ ಕಡೆ ವಿಶೇಷ ಗಮನ ಹರಿಸಬೇಕು. ಸಾಹಿತಿ, ಕ್ರೀಡಾಪಟು, ಪ್ರಶಸ್ತಿ ವಿಜೇತರು, ಎಂ.ಪಿ, ಎಂ.ಎಲ್, ಎ, ತಾ.ಪಂ. ಮಾಜಿ ಅಧ್ಯಕ್ಷ, ಗ್ರಾ.ಪಂ. ಸದಸ್ಯರು ಹೀಗೆ ವಿಐಪಿ ಹಾಗೂ ವಿವಿಐಪಿ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಬಾರದು. ಈ ಕಾರ್ಯದಲ್ಲಿ ಯಾವುದೇ ಲೋಪದೋಷಗಳಾಗದಂತೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಮತ್ತು ಬಿ.ಎಲ್.ಏ ಗಳೊಂದಿಗೆ ಸಹಕರಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದರು.
ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಮ್ಯಾಪಿಂಗ್ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕು. ಜಿಲ್ಲೆಯ ಮತದಾರರ ಪಟ್ಟಿ ಸಮಗ್ರ ಪರಿಷ್ಕಣೆ ಯಶಸ್ವಿಗೊಳಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್. ತಿಳಿಸಿದರು.
ಇದೇ ಸಂದರ್ಭದಲ್ಲಿ ಚುನಾವಣಾ ತಹಶೀಲ್ದಾರರಾದ ಸಂತೋಷ ಹಿರೇಮಠ ಹಾಗೂ ಜಿಲ್ಲಾ ಮಟ್ಟದ ಮಾಸ್ಟರ್ ತರಬೇತುದಾರರಾದ ಬಿ.ಜಿ.ಗಿರಿತಮ್ಮಣ್ಣವರ ಮಾತನಾಡಿ ಬಿ.ಎಲ್.ಓಗಳು ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ನಿರ್ವಹಿಸಬೇಕಾದ ಕರ್ತವ್ಯಗಳ ವಿವರಿಸಿದರು. ಆರೋಗ್ಯಯುತ ಮತದಾರರ ಪಟ್ಟಿ ತಯಾರಿಕೆಯಲ್ಲಿ ಬಿ.ಎಲ್.ಓಗಳ ಪಾತ್ರ ಪ್ರಮುಖವಾಗಿದೆ. ಬಿ.ಎಲ್.ಓಗಳು ತಮ್ಮ ಮತಗಟ್ಟೆಯ ವ್ಯಾಪ್ತಿಯ ಮನೆ ಮನೆಗೆ ತೆರಳಿ ಮತದಾರರೊಂದಿಗೆ ವಿನಮ್ರತೆಯಿಂದ ವರ್ತಿಸಿ ಮಾಹಿತಿ ಪಡೆದುಕೊಳ್ಳಬೇಕು.
ಈ ಸಂದರ್ಭದಲ್ಲಿ ಮತದಾರರ ನೊಂದಣಾಧಿಕಾರಿಗಳಾದ ಉಪವಿಭಾಗಾಧಿಕಾರಿ ಗಂಗಪ್ಪ ಎಂ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಎಸ್.ಡಿ,ಪಾಟೀಲ, ಜಿಲ್ಲೆಯ ಎಲ್ಲ ಸಹಾಯಕ ಮತದಾರರ ನೊಂದಣಾಧಿಕಾರಿಗಳು ಹಾಗೂ ತಹಶೀಲ್ದಾರರು, ಬಿ.ಎಲ್.ಓಗಳು ಹಾಗೂ ಬಿ.ಎಲ್.ಓ ಮೇಲ್ವಿಚಾರಕರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP