
ಗದಗ, 27 ಮೇ (ಹಿ.ಸ.) :
ಆ್ಯಂಕರ್ : ಸಮಕಾಲೀನ ಸಾಮಾಜಿಕ ಸಮಸ್ಯೆಗಳು, ಮಹನೀಯರ ಆದರ್ಶ ಬದುಕು, ಜಾತ್ಯಾತೀತ ಚಿಂತನೆ, ಪ್ರಕೃತಿ ಪ್ರೇಮ ಮತ್ತು ಮಾನವೀಯ ಮೌಲ್ಯಗಳನ್ನು ಒಳಗೊಂಡ ಕಾವ್ಯ ಸಂಕಲನವಾಗಿ ಕವಯತ್ರಿ ಶ್ರೀಮತಿ ಮಂಜುಳಾ ವೆಂಕಟೇಶಯ್ಯ ಅವರ “ಮಹಾ ಪಯಣ” ಕವನ ಸಂಕಲನ ಹೊರಹೊಮ್ಮಿದ್ದು, ಕನ್ನಡ ಸಾಹಿತ್ಯ ಲೋಕದಲ್ಲಿ ಭರವಸೆಯ ಕೃತಿಯಾಗಿ ಗಮನ ಸೆಳೆದಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಅಧ್ಯಕ್ಷರಾದ ಡಾ. ನಿಷ್ಠಿ ರುದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಮಂಜುಳಾ ವೆಂಕಟೇಶಯ್ಯ ಅವರ “ಮಹಾ ಪಯಣ” ಕವನ ಸಂಕಲನದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಈ ಕೃತಿ ಕೇವಲ ಕವನಗಳ ಸಂಕಲನವಲ್ಲ; ಬದಲಾಗಿ ಸಮಾಜಮುಖಿ ಚಿಂತನೆಗಳ ಅಭಿವ್ಯಕ್ತಿಯಾಗಿರುವ ಸಾಹಿತ್ಯಿಕ ದಾಖಲೆಯಾಗಿದೆ ಎಂದು ತಿಳಿಸಿದ್ದಾರೆ.
ಕವಯತ್ರಿ ಮಂಜುಳಾ ಅವರು ತಮ್ಮ ಕವನ ಸಂಕಲನವನ್ನು ಗದಗದ ಭಾವೈಕ್ಯತೆಯ ಪ್ರತೀಕವಾಗಿರುವ ಲಿಂಗೈಕ್ಯ ಜಗದ್ಗುರು ತೋಂಟದ ಸಿದ್ದಲಿಂಗ ಶ್ರೀಗಳಿಗೆ ಅರ್ಪಣೆ ಮಾಡಿರುವುದು ಕೃತಿಯ ವಿಶೇಷತೆಯಾಗಿದೆ. ತುಮಕೂರಿನ ಡಾ. ಸತ್ಯಮಂಗಲ ಮಹಾದೇವ ಅವರ ಅರ್ಥಪೂರ್ಣ ಮುನ್ನುಡಿ ಹಾಗೂ ಖ್ಯಾತ ಚಿಂತಕ ಸುಬ್ಬು ಹೊಲೆಯರ್ ಅವರ ಬೆನ್ನುಡಿಯೊಂದಿಗೆ ಪ್ರಕಟಗೊಂಡಿರುವ ಈ ಕೃತಿ ಆಕರ್ಷಕ ಮುಖಪುಟದ ಮೂಲಕವೂ ಓದುಗರ ಗಮನ ಸೆಳೆಯುತ್ತದೆ ಎಂದು ಅವರು ಹೇಳಿದ್ದಾರೆ.
ಕವಯತ್ರಿ ಮಂಜುಳಾ ವೆಂಕಟೇಶಯ್ಯ ಅವರು ತಮ್ಮ ವೈಯಕ್ತಿಕ ಭಾವನೆಗಳಿಗೆ ಮಾತ್ರ ಅಕ್ಷರ ರೂಪ ನೀಡದೆ, ತಮ್ಮ ಬದುಕಿಗೆ ಮಾರ್ಗದರ್ಶಕರಾದ ಮಹಾನ್ ವ್ಯಕ್ತಿತ್ವಗಳನ್ನು ಕೃತಿಯಲ್ಲಿ ಸ್ಮರಿಸಿಕೊಂಡಿದ್ದಾರೆ. ತಮ್ಮ ಬದುಕಿನ ರೂಪುಗೊಳಿಸುವಿಕೆಯಲ್ಲಿ ಪ್ರೇರಣೆ ನೀಡಿದ ಮಹನೀಯರ ಕುರಿತು ಆಳವಾದ ಗೌರವ ಮತ್ತು ಕೃತಜ್ಞತೆಯನ್ನು ಕವನಗಳ ಮೂಲಕ ಅಭಿವ್ಯಕ್ತಗೊಳಿಸಿರುವುದು ಈ ಸಂಕಲನದ ಪ್ರಮುಖ ಅಂಶವಾಗಿದೆ ಎಂದು ಡಾ. ನಿಷ್ಠಿ ರುದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಬುದ್ಧ, ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಗದಗದ ತೋಂಟದಾರ್ಯ ಮಠದ ಲಿಂಗೈಕ್ಯ ಜಗದ್ಗುರು ಸಿದ್ದಲಿಂಗ ಮಹಾಸ್ವಾಮಿಗಳ ಚಿಂತನೆಗಳು ಕವಯತ್ರಿಯ ಮನೋಲೋಕದ ಮೇಲೆ ದಟ್ಟವಾದ ಪ್ರಭಾವ ಬೀರಿರುವುದು ಕೃತಿಯುದ್ದಕ್ಕೂ ಗೋಚರಿಸುತ್ತದೆ. ಈ ಮಹನೀಯರ ಕುರಿತು ಅನೇಕ ಕವನಗಳನ್ನು ರಚಿಸುವ ಮೂಲಕ ಅವರ ಆದರ್ಶಗಳನ್ನು ಜನಮನಗಳಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಸತ್ಯ, ನ್ಯಾಯ ಹಾಗೂ ಮಾನವೀಯ ಮೌಲ್ಯಗಳಿಗಾಗಿ ತಮ್ಮ ಬದುಕನ್ನೇ ಸಮರ್ಪಿಸಿದ ಮಹಾತ್ಮ ಗಾಂಧೀಜಿ, ಏಸು ಕ್ರಿಸ್ತ, ಡಾ. ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್, ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ, ದಲಿತ ಕವಿ ಸಿದ್ದಲಿಂಗಯ್ಯ ಮತ್ತು ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಂತಹ ವ್ಯಕ್ತಿತ್ವಗಳ ಕುರಿತಾದ ಕವನಗಳು ಸಂಕಲನದಲ್ಲಿ ವಿಶೇಷ ಸ್ಥಾನ ಪಡೆದಿವೆ.
ಸಾಮಾಜಿಕ ಅಸಮಾನತೆ, ಶೋಷಣೆ ಮತ್ತು ದಲಿತ ಸಮುದಾಯ ಎದುರಿಸುತ್ತಿರುವ ಸವಾಲುಗಳ ಕುರಿತು ಕವಯತ್ರಿ ತಮ್ಮ ಕವನಗಳ ಮೂಲಕ ಧ್ವನಿಯಾಗಿದ್ದಾರೆ. ಶತಮಾನಗಳಿಂದಲೂ ಅನ್ಯಾಯಕ್ಕೆ ಒಳಗಾಗಿರುವ ಸಮುದಾಯಗಳನ್ನು ಎಚ್ಚರಿಸುವ ಸಂದೇಶದ ಜೊತೆಗೆ ಪ್ರಕೃತಿ ಸಂರಕ್ಷಣೆ, ಪರಿಸರ ಕಾಳಜಿ, ಕೊರೋನಾ ಮಹಾಮಾರಿ, ಆರೋಗ್ಯ ಜಾಗೃತಿ ಹಾಗೂ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತಾದ ಕವನಗಳೂ ಸಂಕಲನದಲ್ಲಿವೆ.
21ನೇ ಶತಮಾನದ ವೈಜ್ಞಾನಿಕ ಮತ್ತು ನಾಗರಿಕ ಸಮಾಜದಲ್ಲಿಯೂ ಇನ್ನೂ ಜೀವಂತವಾಗಿರುವ ಜಾತಿ ವ್ಯವಸ್ಥೆಯ ಕರಾಳ ಮುಖಗಳು, ರಾಜ್ಯಶಾಹಿ, ಪೌರೋಹಿತ್ಯಶಾಹಿ, ಮತಾಂಧತೆ ಹಾಗೂ ಧಾರ್ಮಿಕ ಸಂಕೋಲೆಗಳ ವಿರುದ್ಧ ಕವಯತ್ರಿಯ ಅಸಮಾಧಾನ ಕವನಗಳಲ್ಲಿ ವ್ಯಕ್ತವಾಗಿದ್ದು, ಇವುಗಳ ನಿವಾರಣೆಗೆ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಆದರ್ಶಪಥವೇ ಶಾಶ್ವತ ಪರಿಹಾರ ಎಂಬ ಸಂದೇಶವನ್ನು ಕೃತಿ ಸಾರುತ್ತದೆ ಎಂದು ಡಾ. ನಿಷ್ಠಿ ರುದ್ರಪ್ಪ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ತವರು ನೆಲ, ಕುಟುಂಬ, ಜನ್ಮಭೂಮಿಯ ಮೇಲಿನ ಪ್ರೀತಿ ಹಾಗೂ ಗದುಗಿನ ಸುತ್ತಮುತ್ತಲಿನ ಪರಿಸರದ ಮೇಲಿನ ಕಾಳಜಿಯನ್ನು ಕವಯತ್ರಿ ಹೃದಯಸ್ಪರ್ಶಿಯಾಗಿ ಚಿತ್ರಿಸಿದ್ದಾರೆ. ಸಮಕಾಲೀನ ಅನೇಕ ಸಮಸ್ಯೆಗಳ ಕುರಿತು ಜವಾಬ್ದಾರಿಯುತವಾಗಿ ಸ್ಪಂದಿಸುವ ಮೂಲಕ ಮಂಜುಳಾ ವೆಂಕಟೇಶಯ್ಯ ಅವರು ಭರವಸೆಯ ಕವಯತ್ರಿಯಾಗಿ ಹೊರಹೊಮ್ಮಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಮಹಾ ಪಯಣ” ಕವನ ಸಂಕಲನ ಕನ್ನಡ ಸಾಹಿತ್ಯಾಭಿಮಾನಿಗಳ ಕೈಗೆ ತಲುಪಿರುವ ಮಹತ್ವದ ಕೊಡುಗೆಯಾಗಿದ್ದು, ಮುಂದಿನ ದಿನಗಳಲ್ಲಿ ಮಂಜುಳಾ ವೆಂಕಟೇಶಯ್ಯ ಅವರಿಂದ ಕನ್ನಡ ಕಾವ್ಯಲೋಕಕ್ಕೆ ಇನ್ನಷ್ಟು ಮೌಲಿಕ ಹಾಗೂ ಅರ್ಥಪೂರ್ಣ ಕೃತಿಗಳು ಹೊರಬರಲಿ ಎಂದು ಡಾ. ನಿಷ್ಠಿ ರುದ್ರಪ್ಪ ಹಾರೈಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP