ನಾಯಕತ್ವ ಬದಲಾವಣೆ ಊಹಾಪೋಹ : ಎಂ.ಬಿ. ಪಾಟೀಲ್
ಹೇಳಿಕೊಂಡಿದ್ದಾರೆ
MBP


ಬೆಂಗಳೂರು, 27 ಮೇ (ಹಿ.ಸ.) :

ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂಬ ರಾಜಕೀಯ ವದಂತಿಗಳಿಗೆ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟನೆ ನೀಡಿದ್ದು, ಮುಖ್ಯಮಂತ್ರಿ ಬದಲಾವಣೆ ಕುರಿತ ಮಾತುಗಳು ಕೇವಲ ಊಹಾಪೋಹಗಳಷ್ಟೇ ಎಂದು ಹೇಳಿಕೊಂಡಿದ್ದಾರೆ.

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

“ಸುರ್ಜೇವಾಲಾ ಹಾಗೂ ವೇಣುಗೋಪಾಲ್ ಅವರು ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ವೇಣುಗೋಪಾಲ್ ಅವರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಕುರಿತ ಚರ್ಚೆ ಮಾತ್ರ ನಡೆದಿದೆ ಎಂದು ಹೇಳಿದ್ದಾರೆ. ಬೇರೆ ಎಲ್ಲ ಮಾತುಗಳೂ ಊಹಾಪೋಹಗಳಷ್ಟೇ” ಎಂದು ಹೇಳಿದರು.

ದೆಹಲಿ ಸಭೆಯಲ್ಲಿ ಬೇರೆ ಯಾವುದೇ ವಿಚಾರ ಚರ್ಚೆಯಾಗಿಲ್ಲ ಎಂದು ತಿಳಿಸಿದ ಅವರು, “ನಾವು ಎಲ್ಲರೂ ಕೆ.ಜೆ. ಜಾರ್ಜ್ ಅವರ ಮನೆಯಲ್ಲಿ ಸೇರಿದ್ದೆವು. ಬೆಳಿಗ್ಗೆ ಮತ್ತು ರಾತ್ರಿ ಒಟ್ಟಿಗೆ ಊಟ ಮಾಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಯೇ ದೆಹಲಿಗೆ ಹೋಗಿ ಬಂದಿದ್ದೇವೆ. ನಾಯಕತ್ವ ಬದಲಾವಣೆ ಕುರಿತ ಯಾವುದೇ ಚರ್ಚೆ ನಡೆದಿಲ್ಲ” ಎಂದು ಹೇಳಿದರು.

ಸಿದ್ದರಾಮಯ್ಯ ರಾಜೀನಾಮೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಮುಖ್ಯಮಂತ್ರಿ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ನಾಳೆ ಉಪಹಾರ ಕೂಟದ ನಂತರ ರಾಜೀನಾಮೆ ಕೊಡುತ್ತಾರೆ ಎನ್ನುವುದು ಕೇವಲ ಊಹಾಪೋಹ” ಎಂದು ತಿಳಿಸಿದರು.

ತಮಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಬಹುದು ಎಂಬ ರಾಜಕೀಯ ಚರ್ಚೆಗಳಿಗೂ ಉತ್ತರಿಸಿದ ಎಂ.ಬಿ. ಪಾಟೀಲ್, “ಎಂ.ಬಿ. ಪಾಟೀಲ್ ಉಪಮುಖ್ಯಮಂತ್ರಿ ಆಗುತ್ತಾರೆ ಎನ್ನುವುದೂ ಊಹಾಪೋಹವೇ. ನಾವು ಎಲ್ಲರೂ ಸಿದ್ದರಾಮಯ್ಯ ಅವರ ಜೊತೆಯೇ ಇದ್ದೇವೆ” ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande