ಮುಖ್ಯಮಂತ್ರಿ ಬದಲಾವಣೆ ಅಲ್ಲ, ಕಾಂಗ್ರೆಸ್ ಸರ್ಕಾರವೇ ಬದಲಾಗಬೇಕು : ಆರ್. ಅಶೋಕ್
ಬೆಂಗಳೂರು, 27 ಮೇ (ಹಿ.ಸ.) : ಆ್ಯಂಕರ್ : ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ, ಪ್ರತಿ ಪಕ್ಷದ ನಾಯಕ ಆರ್.ಅಶೋಕ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ
ಅಶೋಕ


ಬೆಂಗಳೂರು, 27 ಮೇ (ಹಿ.ಸ.) :

ಆ್ಯಂಕರ್ : ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ, ಪ್ರತಿ ಪಕ್ಷದ ನಾಯಕ ಆರ್.ಅಶೋಕ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಅವರು, “ಕರ್ನಾಟಕಕ್ಕೆ ಇಂದು ಬೇಕಿರುವುದು ಕೇವಲ ಮುಖ್ಯಮಂತ್ರಿ ಬದಲಾವಣೆ ಅಲ್ಲ, ಈ ಜನವಿರೋಧಿ ಕಾಂಗ್ರೆಸ್ ಸರ್ಕಾರದ ಸಂಪೂರ್ಣ ಬದಲಾವಣೆ” ಎಂದಿದ್ದಾರೆ.

2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೇ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಟೀಕಿಸಿರುವ ಅವರು, ಅಭಿವೃದ್ಧಿ, ಜನಸಮಸ್ಯೆಗಳು, ರೈತರ ಸಂಕಷ್ಟ ಹಾಗೂ ಯುವಕರ ಭವಿಷ್ಯ ಎಲ್ಲವೂ ಹಿನ್ನೆಲೆಗೆ ಸರಿದಿವೆ ಎಂದು ಹೇಳಿದ್ದಾರೆ.

“ಕುರ್ಚಿ ಯಾರಿಗೆ?” ಎನ್ನುವ ಪ್ರಶ್ನೆಯೇ ಸರ್ಕಾರವನ್ನು ಆವರಿಸಿದ್ದು, ಅಧಿಕಾರ ಹಂಚಿಕೆ ಎಂಬ ಪ್ರಹಸನ ಈಗ ಬೀದಿ ನಾಟಕದ ಮಟ್ಟಕ್ಕೆ ಇಳಿದಿದೆ ಎಂದು ಆರ್. ಅಶೋಕ್ ಟೀಕಿಸಿದ್ದಾರೆ.

ಸಿದ್ದರಾಮಯ್ಯ ಮುಂದುವರಿದರೂ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದರೂ ಅಥವಾ ಮತ್ತೊಬ್ಬರನ್ನು ನೇಮಿಸಿದರೂ ರಾಜ್ಯದ ಜನತೆಗೆ ಯಾವುದೇ ಪ್ರಯೋಜನವಿಲ್ಲ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಅಭಿವೃದ್ಧಿ ಬಗ್ಗೆ ದೃಷ್ಟಿಯಿಲ್ಲ, ರೈತರ ಸಮಸ್ಯೆಗಳ ಬಗ್ಗೆ ಕಾಳಜಿಯಿಲ್ಲ, ಯುವಕರ ಭವಿಷ್ಯದ ಬಗ್ಗೆ ಚಿಂತೆಯಿಲ್ಲ ಹಾಗೂ ಜನರ ಸಮಸ್ಯೆಗಳ ಬಗ್ಗೆ ಉತ್ತರದಾಯಿತ್ವವಿಲ್ಲ ಎಂದು ಆರೋಪಿಸಿರುವ ಅವರು, “ಕುರ್ಚಿ, ಅಧಿಕಾರ, ಲೂಟಿ ಮತ್ತು ಸ್ವಾರ್ಥ ರಾಜಕಾರಣವೇ ಕಾಂಗ್ರೆಸ್ನ ಏಕೈಕ ಅಜೆಂಡಾ” ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಅಭಿವೃದ್ಧಿಯನ್ನು ಬಲಿಕೊಟ್ಟು ಒಳಜಗಳದಲ್ಲಿ ತೊಡಗಿರುವ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರು ತಕ್ಕ ಉತ್ತರ ನೀಡುವ ದಿನ ದೂರವಿಲ್ಲ ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande