
ಗದಗ, 27 ಮೇ (ಹಿ.ಸ.) :
ಆ್ಯಂಕರ್ : ಪರಿಸ್ಥಿತಿಯ ಬಡತನ ಇದ್ದರೂ ಪರವಾಗಿಲ್ಲ, ಆದರೆ ನಮ್ಮ ಆಲೋಚನೆಗಳು ಮತ್ತು ವಿಚಾರಗಳು ಎಂದಿಗೂ ಭಿಕಾರಿಯಾಗಬಾರದು. ಹಣದ ಕೊರತೆ ತಾತ್ಕಾಲಿಕವಾಗಿರಬಹುದು, ಆದರೆ ವೈಚಾರಿಕ ದಾರಿದ್ರ್ಯ ಇಡೀ ಸಮಾಜವನ್ನು ಪತನದತ್ತ ಕೊಂಡೊಯ್ಯುತ್ತದೆ” ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಾ ಎಚ್. ಹಡಪದ ಅವರು ಹೇಳಿದರು.
ನಗರದಲ್ಲಿ ಸವಿತಾ ಸಮಾಜದ ಕ್ರಿಕೆಟ್ ತಂಡದ ವತಿಯಿಂದ ಆಯೋಜಿಸಲಾಗಿದ್ದ ತಮ್ಮ 46ನೇ ಜನ್ಮದಿನದ ಸೌಹಾರ್ದ ಸಮಾರಂಭದಲ್ಲಿ ಸಮಾಜದ ಯುವ ಕ್ರೀಡಾಪಟುಗಳು ಹಾಗೂ ಮುಖಂಡರಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಂದಿನ ಸಮಾಜದ ಸ್ಥಿತಿ, ಯುವಜನರ ಮನೋಭಾವನೆ, ನೈತಿಕ ಮೌಲ್ಯಗಳ ಕುಸಿತ ಹಾಗೂ ವೈಚಾರಿಕ ಶ್ರೀಮಂತಿಕೆಯ ಅಗತ್ಯತೆಯ ಕುರಿತು ಕಳಕಳಿಯಿಂದ ಮಾತನಾಡಿದರು.
ಸಮಾಜದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುವುದು ಹೊಸ ವಿಷಯವಲ್ಲ. ಅನೇಕರು ಸಂಕಷ್ಟದ ಪರಿಸ್ಥಿತಿಯಿಂದ ಮೇಲೆದ್ದು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ವ್ಯಕ್ತಿಯ ಆಲೋಚನೆ, ನೈತಿಕತೆ ಹಾಗೂ ಸಂಸ್ಕಾರಗಳೇ ಅವನ ನಿಜವಾದ ಸಂಪತ್ತು ಎಂದು ಹೇಳಿದರು.
ಬಟ್ಟೆ ಕೊಳೆಯಾದರೂ ಪರವಾಗಿಲ್ಲ, ಮನಸ್ಸು ಮತ್ತು ಆಲೋಚನೆಗಳು ಕೊಳಕಾಗಬಾರದು ಎಂಬ ಅರ್ಥಪೂರ್ಣ ಮಾತುಗಳ ಮೂಲಕ ಯುವಕರಿಗೆ ಕಿವಿಮಾತು ಹೇಳಿದ ಕೃಷ್ಣಾ ಹಡಪದ, ಇಂದಿನ ಕಾಲಘಟ್ಟದಲ್ಲಿ ಹೊರಗಿನ ಆಡಂಬರದ ಬದುಕು ಹೆಚ್ಚಾಗುತ್ತಿದ್ದು, ಒಳಗಿನ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಯುವಜನತೆ ಕೇವಲ ಹಣದ ಹಿಂದೆ ಓಡದೆ, ವಿಚಾರಗಳಲ್ಲಿ ಶ್ರೀಮಂತರಾಗಬೇಕು. ಸಮಾಜದ ಉನ್ನತಿಗೆ ಕೈಜೋಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕ್ರೀಡಾ ಮನೋಭಾವನೆ ಯುವಕರಲ್ಲಿ ಶಿಸ್ತು, ಸಹಕಾರ, ಸಹನೆ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುತ್ತದೆ. ಹೀಗಾಗಿ ಯುವಕರು ಕ್ರೀಡೆಯನ್ನು ಜೀವನದ ಭಾಗವನ್ನಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇಂದಿನ ಯುವಕರು ಕೈಯಲ್ಲಿ ದುಬಾರಿ ಮೊಬೈಲ್ ಹಿಡಿದು, ಸಾಲ ಮಾಡಿ ಬೈಕ್ ಖರೀದಿಸಿ ಸಮಾಜದಲ್ಲಿ ಕೃತಕ ಶ್ರೀಮಂತಿಕೆ ಪ್ರದರ್ಶಿಸಲು ಯತ್ನಿಸುತ್ತಿದ್ದಾರೆ. ಆದರೆ ನಿಜವಾದ ಶ್ರೀಮಂತಿಕೆ ಬಾಹ್ಯ ಅಬ್ಬರದಲ್ಲಿಲ್ಲ, ಅದು ಸಂಸ್ಕಾರ ಮತ್ತು ಸನ್ಮಾರ್ಗದ ಬದುಕಿನಲ್ಲಿ ಅಡಗಿದೆ ಎಂದು ಅವರು ತಿಳಿಸಿದರು.
ದುಡಿಮೆಯೇ ದೊಡ್ಡಪ್ಪ ಎಂಬ ಗಾದೆಯನ್ನು ಉಲ್ಲೇಖಿಸಿದ ಅವರು, ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ದುಡಿಮೆಯ ಬದುಕನ್ನು ಕಟ್ಟಿಕೊಳ್ಳಬೇಕು. ತಂದೆ-ತಾಯಂದಿರ ಕಷ್ಟದ ಹಣದ ಮೇಲೆ ಆಡಂಬರದ ಬದುಕು ನಡೆಸುವುದು ವೈಚಾರಿಕ ಭಿಕ್ಷುಕತನಕ್ಕೆ ಸಮಾನ ಎಂದು ಮಾರ್ಮಿಕವಾಗಿ ನುಡಿದರು.
ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಯುವಕರು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿರುವುದು ದುಃಖದ ಸಂಗತಿ. ಮೊಬೈಲ್ ರೀಲ್ಸ್, ಲೈಕ್ಸ್, ಕಮೆಂಟ್ಸ್ಗಳ ಮಾಯಾಲೋಕದಲ್ಲಿ ಸಿಲುಕಿರುವ ಯುವ ಪೀಳಿಗೆ ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. ಉತ್ತಮ ಪುಸ್ತಕಗಳ ಓದು, ಕ್ರೀಡೆ ಹಾಗೂ ಸೃಜನಾತ್ಮಕ ಚಟುವಟಿಕೆಗಳು ಮಾತ್ರ ಯುವಜನತೆಗೆ ಸರಿಯಾದ ದಿಕ್ಕು ತೋರಬಲ್ಲವು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗದಗ ಜಿಲ್ಲಾ ಸವಿತಾ ಸಮಾಜದ ಹಿರಿಯ ಮುಖಂಡ ಹನುಮಂತಪ್ಪ ರಾಂಪೂರ, “ಕೃಷ್ಣಾ ಎಚ್. ಹಡಪದ ಅವರು ಕೇವಲ ವ್ಯಕ್ತಿಯಲ್ಲ; ನಮ್ಮ ಸಮಾಜದ ಶಕ್ತಿ. ಜಿಲ್ಲಾಧ್ಯಕ್ಷರಾಗಿ ಅವರು ನೀಡುತ್ತಿರುವ ವೈಚಾರಿಕ ನಾಯಕತ್ವ ಇಂದಿನ ಯುವಜನತೆಗೆ ದಾರಿದೀಪವಾಗಲಿದೆ” ಎಂದು ಹೇಳಿದರು.
ಹಿರಿಯರಾದ ಆಂಜನೇಯ ಆದೋನಿ ಮಾತನಾಡಿ, “ಬಡತನವನ್ನು ಮೆಟ್ಟಿ ನಿಲ್ಲುವ ಶಕ್ತಿ ಉನ್ನತ ಯೋಚನೆಗಳಿಗೆ ಮಾತ್ರ ಇದೆ ಎಂಬುದನ್ನು ಕೃಷ್ಣಾ ಅವರು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದ್ದಾರೆ” ಎಂದು ಶ್ಲಾಘಿಸಿದರು.
ಮತ್ತೋರ್ವ ಹಿರಿಯರಾದ ನರಸಿಂಹ ಗುರುಜಾಲ್ಕರ್ ಮಾತನಾಡಿ, “ವಿಚಾರಗಳಲ್ಲಿ ಭಿಕ್ಷುಕತನ ಇರಬಾರದು ಎನ್ನುವ ಅವರ ಮಾತು ಪ್ರತಿಯೊಬ್ಬರಲ್ಲೂ ಆತ್ಮಾವಲೋಕನ ಮೂಡಿಸುವಂತದ್ದು. ಇಂತಹ ಪ್ರಬುದ್ಧ ನಾಯಕತ್ವ ಸಮಾಜಕ್ಕೆ ಅತ್ಯಗತ್ಯ” ಎಂದು ಅಭಿಪ್ರಾಯಪಟ್ಟರು.
ಆಲೋಚನೆಗಳಲ್ಲಿ ದಾರಿದ್ರ್ಯ ಸಮಾಜಕ್ಕೆ ದೊಡ್ಡ ಶಾಪ, ಆರ್ಥಿಕವಾಗಿ ಹಿಂದುಳಿಯುವುದು ಅಪರಾಧವಲ್ಲ. ಆದರೆ ಆಲೋಚನೆಗಳಲ್ಲಿ ದಾರಿದ್ರ್ಯ ಹೊಂದಿರುವುದು ಸಮಾಜಕ್ಕೆ ದೊಡ್ಡ ಶಾಪ. ಬದುಕಿನ ನಿಜವಾದ ಶ್ರೀಮಂತಿಕೆ ಹಣದಲ್ಲಲ್ಲ; ಅದು ನಮ್ಮ ವಿಚಾರ, ಸಂಸ್ಕಾರ ಮತ್ತು ಮೌಲ್ಯಗಳಲ್ಲಿ ಅಡಗಿದೆ ಎಂಬುದನ್ನು ಕೃಷ್ಣಾ ಎಚ್. ಹಡಪದ ಅವರು ತಮ್ಮ ಮಾತುಗಳ ಮೂಲಕ ನೆನಪಿಸಿದ್ದಾರೆ.
ಅವರ 46ನೇ ಜನ್ಮದಿನದ ಸಮಾರಂಭದಲ್ಲಿ ವ್ಯಕ್ತವಾದ ಈ ಸಂದೇಶ ಇಂದಿನ ಯುವ ಸಮೂಹಕ್ಕೆ ದಿಕ್ಸೂಚಿಯಾಗಿದೆ” ಎಂದು ಹಿರಿಯ ಸಮಾಜಮುಖಂಡ ಯಲ್ಲಪ್ಪ ರಾಯಚೂರ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಆಂಜನೇಯ ಆದೋನಿ, ಹೇಮಂತ ವಡ್ಡೆಪಲ್ಲಿ, ಶ್ರೀನಿವಾಸ ಕೋಟೆಕಲ್ಲ, ಜಿಲ್ಲಾ ಖಜಾಂಚಿ ಅರುಣ ರಾಂಪೂರ, ಸವಿತಾ ಸಮಾಜದ ಕ್ರಿಕೆಟ್ ತಂಡದ ನಾಯಕ ಕೃಷ್ಣಾ ಬೂದೂರ, ಉಪನಾಯಕ ವೆಂಕಟೇಶ ಕೋಟೆಕಲ್ಲ ಸೇರಿದಂತೆ ತಂಡದ ಪ್ರಮುಖ ಆಟಗಾರರಾದ ಸುನಿಲ ರಾಯಚೂರ, ವಿಜಯ ಬೂದೂರ, ವಿಶ್ವನಾಥ ರಾಯಚೂರ, ಪರಶುರಾಮ ಕೊಲ್ಪೂರ, ಗಣೇಶ ಕಡಮೂರ, ಪ್ರಕಾಶ ಬೂದೂರ, ಸಾಗರ ಹಡಪದ, ವಿನಾಯಕ ಗಜಕೋಶ, ಸಂದೀಪ ವಡ್ಡೆಪಲ್ಲಿ, ತುಕಾರಾಮ ವಡ್ಡೆಪಲ್ಲಿ, ರಾಹುಲ್ ನಾರಾಯಣಪೇಟ್, ವಿನಾಯಕ ರಾಯಚೂರ, ಹರ್ಷವರ್ಧನ್ ರಾಯಚೂರ, ಹರ್ಷ ಕೊಲ್ಪೂರ, ರೋಹನ್ ರಾಯಚೂರ ಸೇರಿದಂತೆ ಅಪಾರ ಸಂಖ್ಯೆಯ ಸಮಾಜದ ಯುವ ಕ್ರೀಡಾಪಟುಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಲ್ಲರೂ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಾ ಎಚ್. ಹಡಪದ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ತಿಳಿಸಿ ಗೌರವಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP