
ನವದೆಹಲಿ, 27 ಮೇ (ಹಿ.ಸ.) :
ಆ್ಯಂಕರ್ : ಭಾರತೀಯ ಕರಾವಳಿ ರಕ್ಷಕ ಪಡೆ ಹಾಗೂ ಗುಜರಾತ್ ಎಟಿಎಸ್ ಜಂಟಿಯಾಗಿ ನಡೆಸಿದ ಸಮುದ್ರ ತಸ್ಕರಿ ವಿರೋಧಿ ಕಾರ್ಯಾಚರಣೆಯಲ್ಲಿ ಕಚ್ ಸಮೀಪದ ಮುಂದ್ರಾ ಕರಾವಳಿಯಲ್ಲಿ ಸುಮಾರು 115 ಕಿಲೋಗ್ರಾಂ ಕೋಕೇನ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮಾದಕ ವಸ್ತುಗಳ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು 1150 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಭಾರತೀಯ ಕರಾವಳಿ ರಕ್ಷಕ ಪಡೆಯ ಮಾಹಿತಿ ಪ್ರಕಾರ, ಮೇ 25 ಮತ್ತು 26ರ ರಾತ್ರಿ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಮುಂದ್ರಾ ಕರಾವಳಿ ಭಾಗದಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಗುಜರಾತ್ ಎಟಿಎಸ್ ಸಿಬ್ಬಂದಿಯೂ ಇಂಟರ್ಸೆಪ್ಟರ್ ದೋಣಿಗಳಲ್ಲಿ ಭಾಗಿಯಾಗಿದ್ದರು.
ಕಾರ್ಯಾಚರಣೆ ವೇಳೆ ಮುಂದ್ರಾ ತೀರದಿಂದ ಸುಮಾರು ಐದು ನಾಟಿಕಲ್ ಮೈಲು ದೂರದಲ್ಲಿ ನಂಗೂರ ಹಾಕಿದ್ದ ‘ಎಂವಿ ಯೂರೋಪ್’ ಹೆಸರಿನ ಕಂಟೇನರ್ ಹಡಗಿನಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದವು. ಹಡಗಿನಿಂದ ಕೆಲವು ಚೀಲಗಳನ್ನು ಸಮುದ್ರಕ್ಕೆ ಎಸೆಯುತ್ತಿರುವುದನ್ನು ಅಧಿಕಾರಿಗಳು ಗಮನಿಸಿದರು.
ತಕ್ಷಣ ಕಾರ್ಯಾಚರಣೆಗೆ ಇಳಿದ ಕರಾವಳಿ ರಕ್ಷಕ ಪಡೆ ಹಾಗೂ ಎಟಿಎಸ್ ತಂಡಗಳು ರಾತ್ರಿ ಸಮಯದ ಕಡಿಮೆ ದೃಶ್ಯಮಾನತೆಯ ನಡುವೆಯೂ ಸಮುದ್ರದಲ್ಲಿ ತೇಲುತ್ತಿದ್ದ ಐದು ಚೀಲಗಳನ್ನು ವಶಕ್ಕೆ ಪಡೆದವು. ಪರಿಶೀಲನೆ ನಡೆಸಿದಾಗ ಚೀಲಗಳಲ್ಲಿ ಬಿಳಿ ಪುಡಿ ರೂಪದ ಮಾದಕ ವಸ್ತು ಪತ್ತೆಯಾಗಿದ್ದು, ಪರೀಕ್ಷೆಯಲ್ಲಿ ಅದು ಕೋಕೇನ್ ಎಂಬುದು ದೃಢಪಟ್ಟಿತು.
ಒಟ್ಟು 115 ಪ್ಯಾಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರತಿಯೊಂದು ಪ್ಯಾಕೆಟ್ ಸುಮಾರು ಒಂದು ಕಿಲೋಗ್ರಾಂ ತೂಕ ಹೊಂದಿತ್ತು. ಹೀಗಾಗಿ ಒಟ್ಟಾರೆ 115 ಕಿಲೋಗ್ರಾಂ ಕೋಕೇನ್ ವಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದ ಕುರಿತು ಮಾತನಾಡಿದ ಕರಾವಳಿ ರಕ್ಷಕ ಪಡೆಯ ಕಮಾಂಡರ್ ಅಮಿತ್ ಉನಿಯಾಲ್, “ಸಮುದ್ರ ಮಾರ್ಗದ ಮಾದಕ ವಸ್ತು ಸಾಗಣೆ ವಿರುದ್ಧ ಕಳೆದ ಐದು ವರ್ಷಗಳಿಂದ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಗುಜರಾತ್ ಎಟಿಎಸ್ ಜೊತೆಗೆ ನಡೆಸಿದ ಇದು 15ನೇ ಜಂಟಿ ಕಾರ್ಯಾಚರಣೆಯಾಗಿದ್ದು, ‘ನಶಾಮುಕ್ತ ಭಾರತ’ ಗುರಿ ಸಾಧಿಸುವತ್ತ ಮಹತ್ವದ ಹೆಜ್ಜೆಯಾಗಿದೆ” ಎಂದು ಹೇಳಿದ್ದಾರೆ.
ಘಟನೆಯ ಬಳಿಕ ‘ಎಂವಿ ಯೂರೋಪ್’ ಹಡಗನ್ನು ಹೆಚ್ಚಿನ ತನಿಖೆಗಾಗಿ ಬಂದರಿಗೆ ಕರೆತರಲಾಗಿದೆ. ಭಾರತೀಯ ಕರಾವಳಿ ರಕ್ಷಕ ಪಡೆ, ಗುಜರಾತ್ ಎಟಿಎಸ್ ಹಾಗೂ ಇತರ ಸಂಬಂಧಿತ ಸಂಸ್ಥೆಗಳು ಪ್ರಕರಣದ ಕುರಿತು ಸಂಯುಕ್ತ ತನಿಖೆ ಮುಂದುವರೆಸಿವೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.