
ತಿರುವನಂತಪುರಂ, 27 ಮೇ (ಹಿ.ಸ.) :
ಆ್ಯಂಕರ್ : ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭೆಯ ಪ್ರತಿಪಕ್ಷ ನಾಯಕ ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ವಿಜಯನ್ ಹಾಗೂ ಅಳಿಯ ಪಿ. ಎ. ಮೊಹಮ್ಮದ್ ರಿಯಾಸ್ ಸಂಪರ್ಕಿತ ಹಲವು ಸ್ಥಳಗಳಲ್ಲಿ ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿದೆ.
ಕೊಚ್ಚಿನ್ ಮಿನರಲ್ಸ್ ಅಂಡ್ ರೂಟೈಲ್ ಲಿಮಿಟೆಡ್ (ಸಿಎಮ್ಆರ್ಎಲ್) ಮತ್ತು ಎಕ್ಸಾಲಾಜಿಕ್ಸ್ ಸೊಲ್ಯೂಶನ್ಸ್ ನಡುವಿನ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ. ಇಡಿ ತನಿಖೆ ಮತ್ತು ಸಮನ್ಸ್ಗೆ ವಿರೋಧವಾಗಿ ಸಲ್ಲಿಸಿದ್ದ ಅರ್ಜಿಗಳನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಇಡಿ ಅಧಿಕಾರಿಗಳು ತಿರುವನಂತಪುರಂನ ಬೇಕರಿ ಜಂಕ್ಷನ್ ಸಮೀಪದ ಪಿಣರಾಯಿ ವಿಜಯನ್ ಅವರ ಬಾಡಿಗೆ ನಿವಾಸ ಹಾಗೂ ಕಣ್ಣೂರಿನಲ್ಲಿರುವ ಅವರ ಮೂಲ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದರು. ಇದೇ ವೇಳೆ ಸಿಎಮ್ಆರ್ಎಲ್ ವ್ಯವಸ್ಥಾಪಕ ನಿರ್ದೇಶಕ ಶಶಿಧರನ್ ಕರ್ತ ಅವರ ನಿವಾಸ, ಪಿ.ಎ. ಮೊಹಮ್ಮದ್ ರಿಯಾಸ್ ಅವರ ಮನೆ ಮತ್ತು ವೀಣಾ ವಿಜಯನ್ ಮಾಲೀಕತ್ವದ ಎಕ್ಸಾಲಾಜಿಕ್ಸ್ ಸೊಲ್ಯೂಶನ್ಸ್ ಸಂಸ್ಥೆಯ ಬೆಂಗಳೂರಿನ ಕಚೇರಿಯಲ್ಲೂ ದಾಳಿ ನಡೆದಿದೆ.
ಮೂಲಗಳ ಪ್ರಕಾರ, ಕೇರಳ ಮತ್ತು ಕರ್ನಾಟಕ ಸೇರಿ ಒಟ್ಟು 12 ಸ್ಥಳಗಳಲ್ಲಿ ಇಡಿ ಶೋಧ ಕಾರ್ಯಾಚರಣೆ ನಡೆಸಿದೆ. ತಿರುವನಂತಪುರಂ ನಿವಾಸಕ್ಕೆ ಇಡಿ ತಂಡಗಳು ಬೆಳಗ್ಗಿನ ಜಾವ ಭದ್ರತಾ ವ್ಯವಸ್ಥೆಯೊಂದಿಗೆ ಆಗಮಿಸಿದಾಗ, ಪಿಣರಾಯಿ ವಿಜಯನ್, ವೀಣಾ ವಿಜಯನ್ ಹಾಗೂ ಕುಟುಂಬದ ಇತರ ಸದಸ್ಯರು ಮನೆಯಲ್ಲೇ ಇದ್ದರು ಎಂದು ತಿಳಿದು ಬಂದಿದೆ.
ಶೋಧ ಕಾರ್ಯಾಚರಣೆಯ ವೇಳೆ ಹಲವು ದಾಖಲೆಗಳು, ಡಿಜಿಟಲ್ ಮಾಹಿತಿ ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಎಲೆಕ್ಟ್ರಾನಿಕ್ ಸಾಧನಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಆದರೆ ವಶಪಡಿಸಿಕೊಂಡ ದಾಖಲೆಗಳು ಅಥವಾ ವಿಚಾರಣೆ ಕುರಿತು ಇಡಿ ಇನ್ನೂ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ.
ಈ ಪ್ರಕರಣವು ಸಿಎಮ್ಆರ್ಎಲ್ ಮತ್ತು ಎಕ್ಸಾಲಾಜಿಕ್ಸ್ ಸೊಲ್ಯೂಶನ್ಸ್ ನಡುವಿನ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದೆ. ಆದಾಯ ತೆರಿಗೆ ಮಧ್ಯಂತರ ನಿವಾರಣಾ ಮಂಡಳಿಯ ವರದಿಯ ಪ್ರಕಾರ, “ಸಲಹಾ ಸೇವೆ” ಹೆಸರಿನಲ್ಲಿ ಸಿಎಮ್ಆರ್ಎಲ್ ಸಂಸ್ಥೆ ಎಕ್ಸಾಲಾಜಿಕ್ಸ್ಗೆ ಸುಮಾರು 1.72 ಕೋಟಿ ರೂಪಾಯಿ ಪಾವತಿಸಿದೆ. ಆದರೆ ಅಂತಹ ಯಾವುದೇ ಸೇವೆ ನೀಡಲಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಪ್ರತಿ ಪಕ್ಷಗಳು ಈ ಪಾವತಿಯನ್ನು “ಮಾಸಿಕ ಪಾವತಿ” ಎಂದು ಬಣ್ಣಿಸಿ ಭ್ರಷ್ಟಾಚಾರ ಹಾಗೂ ಪ್ರಭಾವದ ದುರುಪಯೋಗ ನಡೆದಿದೆ ಎಂದು ಆರೋಪಿಸಿವೆ.
ಇನ್ನೊಂದೆಡೆ, ಸಿಎಮ್ಆರ್ಎಲ್ ಮತ್ತು ಅದರ ಅಧಿಕಾರಿಗಳು ಇಡಿ ತನಿಖೆ ಹಾಗೂ ಸಮನ್ಸ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದು, ಆದಾಯ ತೆರಿಗೆ ಮಂಡಳಿಯಿಂದ ಈಗಾಗಲೇ ಪರಿಹಾರ ದೊರೆತಿರುವುದರಿಂದ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಮುಂದಿನ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ವಾದಿಸಿದ್ದರು.
ಆದರೆ ಕೇರಳ ಹೈಕೋರ್ಟ್ ಈ ವಾದವನ್ನು ತಳ್ಳಿಹಾಕಿ, ಆದಾಯ ತೆರಿಗೆ ಪ್ರಕರಣದಲ್ಲಿ ಸಿಕ್ಕಿರುವ ಪರಿಹಾರದಿಂದ ಇಡಿ ತನಿಖೆಗೆ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು. ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಈ ಹಂತದಲ್ಲಿ ಸಮನ್ಸ್ ಪ್ರಶ್ನಿಸುವುದು ಸಮಯಕ್ಕೂ ಮುನ್ನದ ಕ್ರಮ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಹೈಕೋರ್ಟ್ ಆದೇಶದ ಕೇವಲ ಒಂದು ದಿನದೊಳಗೆ ಇಡಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿರುವುದು ಪ್ರಕರಣದ ಗಂಭೀರತೆಯನ್ನು ಸೂಚಿಸುತ್ತಿದೆ. ಹಣಕಾಸು ವ್ಯವಹಾರಗಳು ಮತ್ತು ಅಕ್ರಮ ಹಣ ವರ್ಗಾವಣೆ ಅಂಶಗಳ ಕುರಿತು ಇಡಿ ಆಳವಾದ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.
ರಾಜಕೀಯ ವಲಯದಲ್ಲಿ ಈ ಬೆಳವಣಿಗೆ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕೇರಳ ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಇದು ಪ್ರಮುಖ ವಿಚಾರವಾಗುವ ಸಾಧ್ಯತೆ ಇದೆ. ಎಡಪಕ್ಷ ನಾಯಕರು ಇದನ್ನು ರಾಜಕೀಯ ದ್ವೇಷದ ಕ್ರಮ ಎಂದು ಆರೋಪಿಸಿದರೆ, ಬಿಜೆಪಿ ನಾಯಕರು ಕಾನೂನು ಪ್ರಕಾರವೇ ಇಡಿ ಕಾರ್ಯನಿರ್ವಹಿಸುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.