
ಬಳ್ಳಾರಿ, 27 ಮೇ (ಹಿ.ಸ.) :
ಆ್ಯಂಕರ್ : ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಮೆಣಸಿನಕಾಯಿ ಬೆಳೆಗಾರರು ಹಾಗೂ ನರ್ಸರಿ ಮಾಲೀಕರು ಬೆಳೆ ನಷ್ಟ ಮತ್ತು ವಂಚನೆಗೆ ಒಳಗಾಗದಂತೆ ತಡೆಯಲು ತೋಟಗಾರಿಕೆ ಇಲಾಖೆಯು ಕೆಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕರಾದ ಶಶಿಕಾಂತ್ ಕೋಟಿಮನೆ ಅವರು ತಿಳಿಸಿದ್ದಾರೆ.
ಜಿಲ್ಲೆಯ ರೈತರು ಮೆಣಸಿನಕಾಯಿ ಸಸಿಗಳನ್ನು ಕಡ್ಡಾಯವಾಗಿ ಜಿ.ಎಸ್.ಟಿ ನೋಂದಣಿ ಹೊಂದಿರುವ ಅಧಿಕೃತ ನರ್ಸರಿಗಳಿಂದಲೇ ಖರೀದಿಸಿ ನಾಟಿ ಮಾಡಬೇಕು. ಸಸಿ ಖರೀದಿಸಿದ ಬಿಲ್ಲನ್ನು ಪಹಣಿಯಲ್ಲಿರುವ ರೈತರ ಹೆಸರಿನಲ್ಲಿಯೇ ಪಡೆಯಬೇಕು. ಈ ರಸೀದಿಯನ್ನು ಬೆಳೆ ಸಂಪೂರ್ಣವಾಗಿ ಮಾರಾಟವಾಗುವವರೆಗೂ ಜೋಪಾನವಾಗಿ ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ.
ರೈತರು ಯಾವುದೇ ಕಾರಣಕ್ಕೂ ಅನಧಿಕೃತ ಬಿಡಿ ಬೀಜಗಳನ್ನು ಖರೀದಿಸಬಾರದು. ಒಂದು ವೇಳೆ ಇಂತಹ ಬೀಜಗಳನ್ನು ಖರೀದಿಸಿ ನಷ್ಟ ಅನುಭವಿಸಿದರೆ ಅದಕ್ಕೆ ತೋಟಗಾರಿಕೆ ಇಲಾಖೆ ಅಥವಾ ಜಿಲ್ಲಾಡಳಿತ ಯಾವುದೇ ಜವಾಬ್ದಾರಿ ಹೊರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರೈತರು ಕೇವಲ ಒಂದೇ ಕಂಪನಿಯ ಬೀಜಗಳ ಮೇಲೆ ಅವಲಂಬಿತರಾಗದೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಅಧಿಕ ಇಳುವರಿ ನೀಡುವ ಇತರೆ ಕಂಪನಿಗಳ ಬೀಜಗಳನ್ನೂ ಖರೀದಿಸಬಹುದು. ಸಸಿ ನಾಟಿ ಮಾಡುವ ಮುನ್ನ ಬೀಜೋಪಚಾರ ಮಾಡಿಕೊಳ್ಳುವುದು ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.
ತರಕಾರಿ ಬೀಜ ಮಾರಾಟ ಮಾಡುವ ಅಂಗಡಿ ಮಾಲೀಕರು ಕಡ್ಡಾಯವಾಗಿ ತೋಟಗಾರಿಕೆ ಇಲಾಖೆಯಿಂದ ಪರವಾನಗಿ ಪಡೆದಿರಬೇಕು. ಅನಧಿಕೃತವಾಗಿ ಬಿಡಿ ಬೀಜ ಮಾರಾಟ ಮಾಡುವುದು ಕಂಡುಬಂದಲ್ಲಿ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು.
ರೈತರಿಗೆ ಸಸಿ ಮಾರಾಟ ಮಾಡುವ ನರ್ಸರಿಗಳು ಜಿ.ಎಸ್.ಟಿ ನೊಂದಣಿ ಮಾಡಿಕೊಂಡ ನಂತರವೇ ತರಕಾರಿ ಸಸಿ ತಯಾರಿಕೆಗೆ ಮುಂದಾಗಬೇಕು. ರೈತರಿಂದ ಬೀಜ ಪಡೆಯುವಾಗ, ಅವರು ಖರೀದಿಸಿದ ಕಂಪನಿಯ ಜಿ.ಎಸ್.ಟಿ ಸಂಖ್ಯೆ ಹೊಂದಿರುವ ನಗದು ಬಿಲ್ಲಿನ ನಕಲು ಪ್ರತಿಯನ್ನು ಪಡೆದು ಖಾತರಿಪಡಿಸಿಕೊಂಡ ನಂತರವೇ ಸಸಿ ತಯಾರಿಸಿಕೊಡಬೇಕು.
ನರ್ಸರಿಗಳಲ್ಲಿ ಬಳಸುವ ಬೀಜ, ಗೊಬ್ಬರ, ರೋಗ ಮತ್ತು ಕೀಟನಾಶಕಗಳ ವಿವರಗಳು, ರೈತರಿಂದ ಬೀಜ ಪಡೆದ ಮತ್ತು ಸಸಿ ವಿತರಿಸಿದ ದಿನಾಂಕಗಳು ಹಾಗೂ ಶುದ್ಧೀಕರಿಸಿದ ತೆಂಗಿನ ನಾರು ಖರೀದಿಸಿದ ಬಿಲ್ಲುಗಳ ವಿವರಗಳನ್ನು ಕಡ್ಡಾಯವಾಗಿ ವಹಿಯಲ್ಲಿ (ರಿಜಿಸ್ಟರ್) ಕಟ್ಟುನಿಟ್ಟಾಗಿ ನಿರ್ವಹಿಸಬೇಕು.
ಕಳೆದ ವರ್ಷ ರೈತರು ತೀವ್ರ ಇಳುವರಿ ಕುಂಠಿತಗೊಂಡು ಆರ್ಥಿಕ ನಷ್ಟ ಅನುಭವಿಸಿರುವುದರಿಂದ, ನರ್ಸರಿ ಮಾಲೀಕರು ಈ ಹಿಂದಿನ ಸಾಲಿನ ದರದಲ್ಲೇ ಉತ್ತಮ ಗುಣಮಟ್ಟದ ಸಸಿಗಳನ್ನು ತಯಾರಿಸಿ ಪೂರೈಸಬೇಕು.
ಜಿಲ್ಲೆಯ ರೈತರ ಆರ್ಥಿಕ ಏಳಿಗೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಈ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಎಲ್ಲರೂ ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್